ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು.
ದೆಹಲಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಆಯುಷ್ಮಾನ್ ಭಾರತ್ ಯೋಜನೆಯ ಹೊಸ ಹಂತಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 21ನೇ ಶತಮಾನದಲ್ಲಿ ಭಾರತವು ಮುಂದುವರೆಯಲು ಇಂದು ಅತ್ಯಂತ ಮಹತ್ವದ ದಿನ ಎಂದು ಹೇಳಿದರು.
ಕಳೆದ 7 ವರ್ಷಗಳ ಹಿಂದೆ ಆರಂಭಿಸಿದ ಆರೋಗ್ಯ ಅಭಿಯಾನಕ್ಕೆ ಹೊಸ ರೂಪ ಸಿಕ್ಕಿದ್ದು, ಭಾರತ್ ಡಿಜಿಟಲ್ ಮಿಷನ್ ಇಂದಿನಿಂದ ಕಾರ್ಯಾರಂಭ ಆಗುತ್ತಿದೆ. ಇದು ಭಾರತೀಯರ ಆರೋಗ್ಯ ರಕ್ಷಣೆಯಲ್ಲಿ ಕ್ರಾಂತಿಕಾರಿ ಶಕ್ತಿಯನ್ನು ತುಂಬಲಿದೆ ಎಂದರು.
ದೇಶದ ಬಡ ಮತ್ತು ಮಧ್ಯಮ ವರ್ಗದವರಿಗೆ ಈ ಮಿಷನ್ ಅನುಕೂಲ ಆಗಲಿದ್ದು, ಬಡವರು ಚಿಕಿತ್ಸೆ ಸಂದರ್ಭದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ತೆಗೆದುಹಾಕುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. 3 ವರ್ಷಗಳ ಹಿಂದೆ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಆಯುಷ್ಮಾನ್ ಯೋಜನೆಯನ್ನ ಆರಂಭಿಸಲಾಯಿತು. ಇಂದಿನಿಂದ ದೇಶಾದ್ಯಂತ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಶುರುವಾಗುತ್ತಿದ್ದು, ನನಗೆ ಸಂತೋಷವಾಗಿದೆ ಸಂತಸ ವ್ಯಕ್ತಪಡಿಸಿದರು.
ಆಯುಷ್ಮಾನ್ ಯೋಜನೆ ಕಳೆದ ಮೂರು ವರ್ಷಗಳಲ್ಲಿ ದೇಶದ ಸಾವಿರಾರು ಬಡ ಕುಟುಂಬಗಳ ಕೈಹಿಡಿದಿದೆ. ಇದೀಗ ಇಂತಹ ಕುಟುಂಬಗಳ ರಕ್ಷಣೆಗೆ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಆರಂಭವಾಗಿದೆ. ಇದರ ಅಡಿಯಲ್ಲಿ ಡಿಜಿಟಲ್ ಆರೋಗ್ಯ ಐಡಿಯನ್ನು ನೀಡಲಾಗುತ್ತದೆ. ಪ್ರತಿಯೊಬ್ಬ ನಾಗರಿಕನ ಆರೋಗ್ಯ ದಾಖಲೆಯನ್ನು ಡಿಜಿಟಲ್ ಮೂಲಕ ರಕ್ಷಿಸಲಾಗುತ್ತದೆ ಎಂದು ತಿಳಿಸಿದರು.
ಕೊರೊನಾ ಸೋಂಕು ನಿಯಂತ್ರಿಸಲು ಆರೋಗ್ಯ ಸೇತು ಆಪ್ ಸಾಕಷ್ಟು ಸಹಾಯ ಮಾಡಿದೆ. ಉಚಿತ ಲಸಿಕೆ ಅಭಿಯಾನದ ಅಡಿಯಲ್ಲಿ ಭಾರತವು ಇಂದು ಸುಮಾರು 90 ಕೋಟಿ ಡೋಸ್ ವ್ಯಾಕ್ಸಿನೇಷನ್ ಪೂರೈಸಿದೆ. ಇದರ ಹಿಂದೆ ಕೋ-ವಿನ್ ಆಪ್ನ ಪಾತ್ರ ಕೂಡ ದೊಡ್ಡದಿದೆ. ಕೊರೊನಾ ಅವಧಿಯಲ್ಲಿ ಟೆಲಿಮೆಡಿಸಿನ್ನ ವಿಸ್ತರಣೆಯೂ ಆಗಿದೆ. ಈ ಸೌಲಭ್ಯವು ರಿಮೋಟ್ ಸ್ಥಳಗಳಲ್ಲಿ ವಾಸವಾಗಿರುವ ದೇಶವಾಸಿಗಳು ನಗರದ ದೊಡ್ಡ ಆಸ್ಪತ್ರೆಗಳ ವೈದ್ಯರೊಂದಿಗೆ ಮನೆಯಲ್ಲಿಯೇ ಕುಳಿತು ಸಂಪರ್ಕಿಸಲು ಅನುಕೂಲವಾಗಿದೆ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post