Read - < 1 minute
ಬೆಂಗಳೂರು, ಅ.4: ನಾಡ ಗಡಿಯಿಂದ ಹೊರಗಿರುವ ಕನ್ನಡಿಗರ ಸಮಸ್ಯೆಗಳನ್ನು ಆಲಿಸಲು ಮತ್ತು ಪರಿಹರಿಸಲು ಮುಂದಾಗಿರುವ ಕನ್ನಡ ಸಾಹಿತ್ಯ ಪರಿಷತ್ ಇದೇ 8 ಮತ್ತು 9 ರಂದು ನವದೆಹಲಿಯಲ್ಲಿ ಹೊರನಾಡ ಕನ್ನಡಿಗರ ಪ್ರಪ್ರಥಮ ಸಮಾವೇಶವನ್ನು ಹಮ್ಮಿಕೊಂಡಿದೆ.
40 ವರ್ಷಗಳ ಹಿಂದೆ ಜಿ.ಪಿ.ರಾಜರತ್ನಂ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಹೊರತುಪಡಿಸಿದರೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದೆಹಲಿಯಲ್ಲಿ ನಡೆಯುತ್ತಿರುವ ಪ್ರಪ್ರಥಮ ಸಮಾವೇಶ ಇದಾಗಿದೆ.
ಈ ಮೂಲಕ ಹೊರನಾಡ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಸಾಹಿತ್ಯ ಪರಿಷತ್ ಮುಂದಾಗಿದೆ ಎಂದು ಕಸಾಪ ಅಧ್ಯಕ್ಷ ಮನು ಬಳಿಗಾರ್ ತಿಳಿಸಿದ್ದಾರೆ.
ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ 14 ರಾಜ್ಯಗಳಲ್ಲಿರುವ ಸುಮಾರು 600ಕ್ಕೂ ಹೆಚ್ಚು ಪ್ರತಿನಿಧಿಗಳು ಎರಡು ದಿನಗಳ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ನವದೆಹಲಿಯ ಕರ್ನಾಟಕ ಸಂಘದ ಆವರಣದಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಸಮಾವೇಶ ನಡೆಯಲಿದೆ. ಈ ವಿವಿಯ ಉಪಕುಲಪತಿಯಾಗಿರುವ ಕನ್ನಡಿಗರಾದ ತೇಜಸ್ವಿನಿ ಕಟ್ಟಿಮನಿ ಅವರು ಹೊರನಾಡ ಕನ್ನಡಿಗರ ಸಮಾವೇಶಕ್ಕೆ ವಿಶೇಷ ಆಸಕ್ತಿ ವಹಿಸಿದ್ದಾರೆ.
ಈ ಸಮ್ಮೇಳನದಲ್ಲಿ 23 ಸಾಹಿತಿ ಮತ್ತು ಕಲಾವಿದರನ್ನು ಆಹ್ವಾನಿಸಲಾಗಿದ್ದು, ಅವರಿಗೆ ಕರ್ನಾಟಕ ಭವನದಲ್ಲಿ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಭಾಷಾವಾರು ಪ್ರಾಂತ್ಯ ರಚನೆ, ಶಿಕ್ಷಣ ಮಾಧ್ಯಮ, ಜಲವಿವಾದಗಳು, ಗಡಿವಿವಾದಗಳು, ಹೊರನಾಡ ಕನ್ನಡಿಗರ ಸಮಸ್ಯೆ, ರಾಷ್ಟ್ರೀಯ ಉದ್ಯೋಗ ನೀತಿ, ವರ್ತಮಾನದ ತಲ್ಲಣಗಳು ಇವೇ ಮೊದಲಾದ ವಿಷಯಗಳ ಕುರಿತು ಗೋಷ್ಠಿಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ಹೇಳಿದರು.
ಇದಲ್ಲದೆ ಡಿಸೆಂಬರ್ ರಾಯಚೂರಿನಲ್ಲಿ ನಡೆಯಲಿರುವ 82ನೆ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.
ರಾಜ್ಯ ಸರ್ಕಾರ ನಾಲ್ಕು ಕೋಟಿ ರೂ.ಗಳ ಅನುದಾನ ನೀಡಿದೆ. ಈ ನುಡಿಸಿರಿಯನ್ನು ಇನ್ನಷ್ಟು ಪಸರಿಸಲು ಅಗತ್ಯ ಸಂಪನ್ಮೂಲವನ್ನು ವಿವಿಧ ಮೂಲಗಳಿಂದ ಕ್ರೋಢೀಕರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
Discussion about this post