ನಾಗಪುರ: ಆ:30: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ಎಸ್ ) ಗಣವೇಷ ಬದಲಾವಣೆಯಾಗಿದೆ. ಕಳೆದ 90 ವರ್ಷಗಳಿಂದ ಚಡ್ಡಿಯನ್ನು ಬಳಸುತ್ತಿದ್ದು ಸಂಘವು, ಅಕ್ಟೋಬರ್ 11ರ ವಿಜಯದಶಮಿಯಂದು ಗಣವೇಷ ಬದಲಾಯಿಸಲಿದೆ.
ನೂತನ ಗಣವೇಷ ಖಾಕಿ ಪ್ಯಾಂಟ್ ಈಗಾಗಲೇ ಸಿದ್ಧಗೊಂಡಿದ್ದು, ಮೊದಲ ಸೆಟ್ನಲ್ಲಿ 10,000 ಪ್ಯಾಂಟ್ಗಳನ್ನು ನಾಗಪುರದ ಆರ್ ಎಸ್ಎಸ್ ಮುಖ್ಯಕಚೇರಿಗೆ ಕಳುಹಿಸಲಾಗಿದೆ. ಒಂದು ಪ್ಯಾಂಟ್ ಬೆಲೆ 250 ರೂ.ಗಳಾಗಿದ್ದು, ಅಕ್ಟೋಬರ್ನಲ್ಲಿ ಸಂಘದ ಕಾರ್ಯಕರ್ತರು ತಮ್ಮ ಗಣವೇಷದ ಭಾಗವಾಗಿದ್ದ ಮೊಣಕಾಲಿನವರೆಗಿನ ಚಡ್ಡಿ ತೊರೆದು ನೂತನ ಪ್ಯಾಂಟ್ ಧರಿಸಲಿದ್ದಾರೆ.
ನೂತನ ಗಣವೇಷವನ್ನು ನಾಗಪುರದ ಕಚೇರಿಯಲ್ಲಿ ಪ್ರದರ್ಶಿಸಲಾಗಿದ್ದು, ಈ ಸಂದರ್ಭ ಕಾರ್ಯಕರ್ತರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿರಿಯ ಕಾರ್ಯಕರ್ತರು ಹಳೆಯ ಮಾದರಿ ದಿರಿಸು ಕಸರತ್ತು ನಡೆಸಲು ಅನುಕೂಲಕರವಾಗಿತ್ತು ಎಂದು ಹೇಳಿದ್ದಾರೆ. ಆದರೆ ಯುವ ಕಾರ್ಯಕರ್ತರು ಪ್ಯಾಂಟ್ನಿಂದ ಹೆಚ್ಚಿನ ಯುವಜನತೆಯನ್ನು ಆರ್ ಎಸ್ಎಸ್ ನತ್ತ ಸೆಳೆಯಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆರ್ ಎಸ್ಎಸ್ ಸಮವಸ್ತ್ರದಲ್ಲಿ ಈ ಹಿಂದೆಯೂ ಬದಲಾಗಿತ್ತು.1940ರಲ್ಲಿ ಶರ್ಟ್ ಬಿಳಿ ಬಣ್ಣಕ್ಕೆ ಬದಲಾಯಿಸಲಾಗಿತ್ತು. 2011ರಲ್ಲಿ ಚರ್ಮದ ಬೆಲ್ಟ್ ನ ಬದಲು ಕ್ಯಾನ್ವಾಸ್ ಬೆಲ್ಟ್ ಬಳಕೆಗೆ ಬಂದಿತ್ತು. ಚಡ್ಡಿಯನ್ನು ಪ್ಯಾಂಟ್ಗೆ ಬದಲಾಯಿಸುವ ಬಗ್ಗೆ ಸುಮಾರು 8 ವರ್ಷಗಳಿಂದ ಚರ್ಚೆನಡೆಯುತ್ತಿತ್ತಾದರೂ, ಬದಲಾಯಿಸುವ ಬಗ್ಗೆ ಹಿರಿಯರ ವಿರೋಧ ವ್ಯಕ್ತವಾಗಿತ್ತು. 12 ಸದಸ್ಯರ ತಂಡ ದೇಶಾದ್ಯಂತ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಸಮವಸ್ತ್ರ ಬದಲಿಸುವ ನಿರ್ಧಾರ ಕೈಗೊಂಡು ಕೊನೆಗೂ ಆರ್ ಎಸ್ಎಸ್ ನಲ್ಲಿ ಚಡ್ಡಿ ಹೋಗಿ ಪ್ಯಾಂಟ್ ಬಂದಿದೆ.
Discussion about this post