Read - < 1 minute
ವಿಯೆನ್ಶಿಯೆನ್ (ಲಾವೋಸ್), ಸೆ. 7: ವ್ಯೂಹಾತ್ಮಕ ಆಗ್ನೇಯ ಏಷ್ಯಾ ವಲಯದೊಂದಿಗೆ ಭಾರತದ ವ್ಯಾಪಾರ ಮತ್ತು ಭದ್ರತಾ ಸಂಬಂಧಗಳನ್ನು ಬಲಪಡಿಸುವುದಕ್ಕಾಗಿ ಆಸಿಯಾನ್ – ಭಾರತ ಮತ್ತು ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಇಲ್ಲಿಗೆ ಆಗಮಿಸಿದರು.
ಎರಡು ದಿನಗಳ ತಮ್ಮ ಭೇಟಿ ವೇಳೆ ಮೋದಿಯವರು, ಶೃಂಗಸಭೆಗಳ ನೇಪಥ್ಯದಲ್ಲಿ ಅನೇಕ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಮೊದಲಿಗೆ ಜಪಾನಿನ ಪ್ರಧಾನಿ ಶಿಂಜೊ ಅಬೆ ಅವರೊಂದಿಗೆ ಬುಧವಾರ ಸಂವಾದ ನಡೆಸಿದರು.
ಎರಡು ದಿನಗಳ ಬಿರುಸಿನ ರಾಜತಾಂತ್ರಿಕ ಕಾರ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಲಾವೋಸ್ ಗೆ ಆಗಮಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟ್ ಮಾಡಿದ್ದಾರೆ.
ಅತಿಥಿಯೇ ಲಾವೋಸ್ ಬುಧವಾರ ಸಂಜೆ ಎಲ್ಲಾ ರಾಷ್ಟ್ರ ನಾಯಕರಿಗಾಗಿ ಭರ್ಜರಿ ಭೋಜನ ಕೂಟವೊಂದನ್ನು ಏರ್ಪಡಿಸಿತ್ತು. ಅದರ ಬಳಿಕ ಮೋದಿಯವರು ಲಾವೋಸ್ ಪ್ರಧಾನಿ ತೊಂಗ್ಲೌನ್ ಸಿಸೌಲಿತ್ರೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದರು.
ಉಭಯ ನಾಯಕರ ಮಾತುಕತೆಯಲ್ಲಿ ಭಯೋತ್ಪಾದನೆ, ನಾಗರಿಕ ಭದ್ರತೆ, ದುರುಂತ ನಿರ್ವಹಣೆ, ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆಸ್ಸಿಇಪಿ) ಮತ್ತು ಏಶ್ಯಾ – ಪೆಸಿಫಿಕ್ ಆರ್ಥಿಕ ಸಹಕಾರ (ಅಪೆಕ್) ವಿಷಯಗಳಿಗೆ ಗಮನಹರಿಸಲಾಯಿತು.
ನಮ್ಮ `ಆ್ಯಕ್ಟ್ ಈಸ್ಟ್’ ನೀತಿಗೆ ಆಸಿಯಾನ್ ಒಂದು ಪ್ರಮುಖ ಪಾಲುದಾರನಾಗಿದೆ. ಅದು ನಮ್ಮ ಈಶಾನ್ಯ ವಲಯದ ಆರ್ಥಿಕ ಅಭಿವೃದ್ಧಿಗೆ ಮಹತ್ತದ್ದಾಗಿದೆ ಎಂದು ಮೋದಿಯವರು ಹೊಸದಿಲ್ಲಿಯಲ್ಲಿ ಹೊರಡಿಸಿದ ಹೇಳಿಕೆಯೊಂದರಲ್ಲಿ ಹೇಳಿದ್ದರು.
ಏಶ್ಯಾ ಪೆಸಿಫಿಕ್ ವಲಯದ ಮುಂದಿರುವ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಚರ್ಚೆಗಳಿಗೆ ಪೂರ್ವ ಏಶ್ಯಾ ಶೃಂಗಸಭೆ ಪ್ರಮುಖ ವೇದಿಕೆಯಾಗಿದೆ ಎಂದು ಅವರು ಹೇಳಿದರು.
11ನೇ ಪೂರ್ವ ಏಶ್ಯಾ ಶೃಂಗಸಭೆಯಲ್ಲಿ ನಾಯಕರು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳನ್ನು ಮತ್ತು ನಾಗರಿಕ ಭಧ್ರತೆ, ಭಯೋತ್ಪಾದನೆ, ಅಣ್ವಸ್ತ್ರ ಪ್ರಕರಣ ತಡೆ ಮತ್ತು ಅಕ್ರಮ ವಲಸೆಯಂತಹ ಕಳವಳಕಾರಿ ವಿಷಯಗಳ ಬಗ್ಗೆ ಚರ್ಚೆಸಲಿದ್ದಾರೆ. 10 ಆಸಿಯಾನ್ ಮತ್ತು 18 ಪೂರ್ವ ಏಶ್ಯಾ ದೇಶಗಳ ರಾಷ್ಟ್ರ ಮತ್ತು ಸರಕಾರಿ ಮುಖ್ಯಸ್ಥರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
Discussion about this post