ಬೆಂಗಳೂರು: ಅ:24: ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಿಸುತ್ತಿರುವ ಉಕ್ಕಿನ ಸೇತುವೆ ವಿರುದ್ಧ 40 ಸಾವಿರಕ್ಕೂ ಹೆಚ್ಚು ಸಹಿ ಸಂಗ್ರಹ ಮಾಡಲಾಗಿದೆ.
ವಿವಿಧ ಸಂಘಟನೆಗಳು ಹೋರಾಟಗಾರರು 40 ಸಾವಿರಕ್ಕಿಂತ ಹೆಚ್ಚು ಸಹಿ ಸಂಗ್ರಹಿಸಿದ್ದು , ಉಕ್ಕಿನ ಸೇತುವೆ ನಿರ್ಮಾಣದ ವಿರುದ್ದ ನಾಳೆ ನ್ಯಾಯಾಲಯಕ್ಕೆ ಸಲ್ಲಿಸಲು ನಿರ್ಧರಿಸಿದ್ದಾರೆ.
ಒಂದು ವೇಳೆ ಉಕ್ಕಿನ ಸೇತುವೆ ಯೋಜನೆಯನ್ನು ಕೈಗೆತ್ತಿಕೊಂಡರೆ 800ಕ್ಕೂ ಹೆಚ್ಚು ದೈತ್ಯ ಮರಗಳು ಧರೆಗುರುಳಲಿವೆ ಎಂದು ಹೋರಾಟಗಾರರು ರಾಜ್ಯ ಸರ್ಕಾರ ವಿರುದ್ಧ ತೀವ್ರ ಹೋರಾಟ ನಡೆಸಿದ್ದರು. ಈ ಯೋಜನೆಯಿಂದ ರಾಜಧಾನಿ ಜನತೆಗೆ ಏನು ಪ್ರಯೋಜನವಿಲ್ಲ. ಭವಿಷ್ಯದಲ್ಲಿ ಬೆಂಗಳೂರಿಗೆ ದೊಡ್ಡ ಗಂಡಾಂತರ ಎದುರಾಗಲಿದೆ ಎಂದು ಆತಂಕಕ್ಕೊಳಗಾಗಿದ್ದಾರೆ.
ಈಗಾಗಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತ್ಯೇಕವಾದ ರಸ್ತೆ ಇದ್ದರೂ ರಾಜ್ಯ ಸರ್ಕಾರವು ಬಿಜೆಪಿ ಸರ್ಕಾರದ ಯೋಜನೆ ಎಂದು ಹೇಳಿ ಉಕ್ಕಿನ ಸೇತುವೆ ನಿರ್ಮಾಣ ಮಾಡಲು ಹೊರಟಿದೆ.
1800ಕ್ಕೂ ಕೋಟಿ ಯೋಜನೆಯಲ್ಲಿ ಹಣ ಲಪಟಾಯಿಸಲು ಕಾಂಗ್ರೆಸ್ ಈ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ ಎಂದು ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್ ವಾಗ್ದಾಳಿ ನಡೆಸಿದ್ದವು.
ರಾಜ್ಯಾದ್ಯಂತ ತೀವ್ರ ವಿರೋಧವಿದ್ದರೂ ರಾಜ್ಯ ಸರ್ಕಾರ ಸ್ಟೀಲ್ ಬ್ರಿಡ್ಜ್ ಯೋಜನೆ ನಿರ್ಮಾಣಕ್ಕೆ ಮುಂದಾಗಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದಲ್ಲಿ ತೀವ್ರ ಬರಗಾಲ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡುವುದಕ್ಕೆ ಹೊರಟಿರುವುದು ಘೋರ ಅನ್ಯಾಯ ಎಂದು ಹೋರಾಟಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Discussion about this post