ಇಸ್ಲಾಮಾಬಾದ್, ಅ.೬: ಅಂತರ‌್ರಾಷ್ಟ್ರಿಯ ಮಟ್ಟದಲ್ಲಿ ಏಕಾಂಗಿಯಾಗುವ ಭೀತಿ ಎದುರಿಸುತ್ತಿರುವ ಪಾಕಿಸ್ಥಾನ ಉಗ್ರರನ್ನು ನಿಯಂತ್ರಿಸಲು ಚಿಂತಿಸುತ್ತಿದೆ. ಪಾಕ್ ಪ್ರಧಾನಿ ನವಾಜ್ ಷರೀಫ್ ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೇನೆಗೆ ಸೂಚಿಸಿದ್ದಾರೆ ಎಂದು ಪಾಕ್ ಮಾಧ್ಯಮ ವರದಿ ಮಾಡಿದೆ.
ಪಾಕ್ ರಾಜಕೀಯ ನಾಯಕರು ಅಂತರ‌್ರಾಷ್ಟ್ರಿಯ ಮಟ್ಟದಲ್ಲಿ ಪಾಕಿಸ್ಥಾನದ ವಿರುದ್ಧ ಹೆಚ್ಚುತ್ತಿರುವ ಒತ್ತಡಗಳಿಂದ ಪಾರಾಗಲು ಸ್ಪಷ್ಟ ಕ್ರಮ ತೆಗೆದುಕೊಳ್ಳುವಂತೆ ಪ್ರಧಾನಿಗೆ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನವಾಜ್ ಷರೀಫ್ ಉಗ್ರರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸೇನೆಗೆ ಸೂಚಿಸಿದ್ದಾರೆ. ಜತೆಗೆ ಪಠಾಣ್ ಕೋಟ್ ವಾಯು ನೆಲೆ ಮೆಲೆ ನಡೆದ ದಾಳಿಯ ತನಿಖೆಯನ್ನು ಚುರುಕುಗೊಳಿಸುವಂತೆ ಸೂಚಿಸಿದ್ದಾರೆ. ಮುಂಬೈ ದಾಳಿಯ ವಿಚಾರಣೆಯನ್ನೂ ಸಹ ಮರು ಪ್ರಾರಂಭಿಸುವಂತೆ ಸೂಚಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಉರಿ ಸೇನಾ ನೆಲೆಯ ಮೆಲೆ ಪಾಕಿಸ್ಥಾನ ಉಗ್ರರು ದಾಳಿ ನಡೆಸಿದ ನಂತರ ಭಾರತ ಪಾಕ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಅದರ ಹಿನ್ನೆಲೆಯಲ್ಲಿ ರಾಜತಾಂತ್ರಿಕ ನಡೆಗಳ ಮೂಲಕ ಅಂತರ‌್ರಾಷ್ಟ್ರಿಯ ಮಟ್ಟದಲ್ಲಿ ಪಾಕಿಸ್ಥಾನವನ್ನು ಉಗ್ರರಿಗೆ ಬೆಂಬಲ ನೀಡುವ ರಾಷ್ಟ್ರ ಎಂದು ಘೋಷಿಸಲು ಪ್ರಯತ್ನಿಸುತ್ತಿದೆ. ಜತೆಗೆ ಸೆ. ೨೯ ರಂದು ಸೀಮಿತ ದಾಳಿ ನಡೆಸುವ ಮೂಲಕ ಉಗ್ರರನ್ನು ಸದೆಬಡೆಯಲು ಭಾರತ ಎಂಥಹ ಕಠಿಣ ಕ್ರಮಕ್ಕೂ ಸಿದ್ಧ ಎಂದು ಸಾಬೀತು ಪಡಿಸಿದೆ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ಥಾನದ ನಡುವೆ ಸಂಘರ್ಷ ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಷರೀಫ್ ಸೇನೆಗೆ ಸೂಚನೆ ನೀಡುವ ಮೂಲಕ ಹಲವು ಚರ್ಚೆಗಳನ್ನು ಹುಟ್ಟು ಹಾಕಿದ್ದಾರೆ.
Discussion about this post