Read - 2 minutes
ಉಡುಪಿ: ಸೆ:2: ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಖಾಸಗೀಕರಣಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ ಮತ್ತು ಸರ್ಕಾರದ ನಿರ್ಧಾರದ ವಿರುದ್ಧ ಹೋರಾಟಕ್ಕೂ ವೇದಿಕೆ ಸಿದ್ಧವಾಗುತ್ತಿದೆ.
ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ಉಡುಪಿ ಮೂಲದ ಅಬುದಾಬಿಯ ಉದ್ಯಮಿ ಬಿ.ಆರ್.ಶೆಟ್ಟಿ ಅವರಿಗೆ ೩೦ ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಅದರಂತೆ ಉಡುಪಿಯ ಹೃದಯ ಭಾಗ (ಹಿಂದಿನ ಮೂಡನಿಡಂಬೂರು ಗ್ರಾಮ)ದಲ್ಲಿರುವ ಸರ್ಕಾರಿ ಆಸ್ಪತ್ರೆಯ ಮಕ್ಕಳ ಮತ್ತು ಮಹಿಳಾ ಆಸ್ಪತ್ರೆ ಮತ್ತು ಸುಮಾರು ೨ ಎಕ್ರೆ ಭೂಮಿಯನ್ನು ಬಿ.ಆರ್.ಶೆಟ್ಟಿ ವೆಂಚರ್ಸ್ ಪೈ.ಲಿ.ಗೆ ಹಸ್ತಾಂತರಿಸಲಾಗುತ್ತಿದೆ.
ಇದರಲ್ಲಿರುವ ಸರ್ಕಾರಿ ಆಸ್ಪತ್ರೆಯನ್ನು ಕೆಡವಿ, ಸುಮಾರು ೨೦೦ ಕೋಟಿ ರು. ವೆಚ್ಚದಲ್ಲಿ ೪೦೦ ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಬಿ.ಆರ್.ಶೆಟ್ಟಿ ನಿರ್ಮಿಸಲಿದ್ದಾರೆ. ೩೦ ವರ್ಷಗಳ ಕಾಲ ಈ ಆಸ್ಪತ್ರೆಯನ್ನು ಅವರೇ ನಡೆಸಿ, ನಂತರ ಸರ್ಕಾರಕ್ಕೆ ಹಸ್ತಾಂತರಿಸಲಿದ್ದಾರೆ.
ಆದರೇ ಸರ್ಕಾರಿ ಆಸ್ಪತ್ರೆ ಇರುವುದು ಬಡವರಿಗೆ ಉಚಿತವಾಗಿ ಆರೋಗ್ಯ ಸೇವೆ ನೀಡುವುದಕ್ಕೆ, ಅಂತಹ ಆಸ್ಪತ್ರೆಯನ್ನು ಕೆಡವಿ, ಖಾಸಗಿಯವರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವುದಕ್ಕೆ ಅವಕಾಶ ನೀಡಿದರೇ ಬಡವರು ಎಲ್ಲಿಗೆ ಹೋಗಬೇಕು, ಉದ್ಯಮಿಗಳಿಗೆ ಲಾಭ ಮಾಡಿಕೊಡುವುಕ್ಕಾಗಿ ಖುದ್ದು ಸರ್ಕಾರವೇ ಬಡವರಿಗೆ ಅನ್ಯಾಯ ಮಾಡುವುದು ಸರಿಯೇ ಎಂಬ ಬಗ್ಗೆ ತೀವ್ರ ಚರ್ಚೆಗಳು ಆರಂಭವಾಗಿವೆ.
೨೦೦ ಕೋಟಿ ರು.ಗಳ ಬಂಡವಾಳ ಹೂಡಿ ಅದನ್ನು ಲಾಭ ಸಹಿತ ಕೇವಲ ೩೦ ವರ್ಷಗಳಲ್ಲಿ ಹಿಂದಕ್ಕೆ ಪಡೆಯಬೇಕಾಗಿರುವ ಈ ಆಸ್ಪತ್ರೆ ಎಂಬ ಉದ್ಯಮದಲ್ಲಿ ಬಡವರಿಗೆ ಉಚಿತ ಆರೋಗ್ಯ ಸೇವೆಯನ್ನಂತೂ ನಿರೀಕ್ಷಿಸುವುದು ಸಾಧ್ಯವಿಲ್ಲ. ಅದರಲ್ಲೂ ಈ ಆಸ್ಪತ್ರೆ ಸೂಪರ್ ಸ್ಪೆಷಾಲಿಟಿ ಸೌಲಭ್ಯಗಳನ್ನು ಹೊಂದಿರುವುದರಿಂದ ಅಲ್ಲಿನ ಆರೋಗ್ಯ ಸೇವೆ ಶ್ರೀಮಂತರಿಗಷ್ಟೇ ಕೈಗೆಟುಕಬಹುದೇ ಹೊರತು, ಬಡವರಿಗೆ ಬಿಡಿ ಮಧ್ಯಮ ವರ್ಗಕ್ಕೂ ಕಷ್ಟಸಾಧ್ಯವಾದೀತು.
ರಾಜಕೀಯ ವಿರೋಧ ಇಲ್ಲ
ಜಿಲ್ಲಾಸ್ಪತ್ರೆಯಲ್ಲಿ ಅನೇಕ ವರ್ಷ ಕಾಲ ಸೇವೆ ಸಲ್ಲಿಸಿದ್ದ ಪ್ರಸಿದ್ಧ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಅವರು ಜಿಲ್ಲಾಸ್ಪತ್ರೆಯ ಖಾಸಗೀಕರಣದ ವಿರುದ್ಧ ಬರೆದ ಪತ್ರವನ್ನು ಈಗಾಗಲೇ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಕಳಹಿಸಿರುವುದಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಹೇಳಿದ್ದಾರೆ.
ಇನ್ನು ಕಾಂಗ್ರೆಸ್ ಸರ್ಕಾರದ ಈ ನಿರ್ಧಾರದ ವಿರುದ್ಧ ಉಡುಪಿಯ ಕಾಂಗ್ರೆಸ್ ನಾಯಕರು ಮಾತನಾಡುವುದನ್ನು ನಿರೀಕ್ಷಿಸುವಂತಿಲ್ಲ, ಬಿ.ಆರ್.ಶೆಟ್ಟಿ ಅವರು ಬಿ.ಜೆ.ಪಿ.ಗೂ ಆತ್ಮೀಯರಾಗಿರುವುದರಿಂದ ಬಿ.ಜೆ.ಪಿ.ಯನಾಯಕರು ಮಾತನಾಡುತ್ತಿಲ್ಲ.
ಪ್ರತಿಭಟನೆಗೆ ಸಿದ್ದತೆ
ಆದರೇ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಉಡುಪಿಯ ಪ್ರಜ್ಞಾವಂತ ನಾಗರಿಕರಿಂದ ಸರ್ಕಾರದ ಈ ನಿರ್ಧಾರದ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈಗಾಗಲೇ ಜಿಲ್ಲಾಸ್ಪತ್ರೆಯನ್ನು ಖಾಸಗೀಕರಣಗೊಳಿಸುವ ನಿರ್ಧಾರವನ್ನು ಕೈಬಿಡುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳ ಅಧಿಕೃತ ಇಮೈಲ್ ವಿಳಾಸಕ್ಕೆ ಪತ್ರಗಳನ್ನು ಬರೆಯುವ ಅಭಿಯಾನ ಆರಂಭವಾಗಿದೆ.
ಒಂದೆರಡು ದಿನಗಳಲ್ಲಿ ಸಮಾನಮನಸ್ಕರು ಸಭೆ ಸೇರಿ, ಜಿಲ್ಲಾಸ್ಪತ್ರೆಯ ಖಾಸಗೀಕರಣದಿಂದ ಜನಸಾಮಾನ್ಯರಿಗೆ ಆಗುವ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸುವ, ಪ್ರತಿಭಟನೆ ನಡೆಸುವುದಕ್ಕೂ ನಿರ್ಧರಿಸಲಾಗಿದೆ.
ಸಂಶಯಾಸ್ಪದ ನಡೆ
ಉಡುಪಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಲ್ಲ, ಆದ್ದರಿಂದ ಸರ್ಕಾರಿ ಆಸ್ಪತ್ರೆಯ ಭೂಮಿಯಲ್ಲಿ ಖಾಸಗಿಯವರಿಗೆ ಸೂಪ್ರ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ… ಎಂದು ಸರ್ಕಾರ ತನ್ನ ಸಂಪುಟ ಸಭೆಯ ಪ್ರಸ್ತಾಪದಲ್ಲಿ ಹೇಳಿದೆ, ಆದರೇ ಉಡುಪಿ ನಗರದಲ್ಲಿಯೇ ಹೈಟೆಕ್ ಚಿಕಿತ್ಸೆ ನೀಡುವ ಹತ್ತಾರು ಆಸ್ಪತ್ರೆಗಳಿವೆ, ಉಡುಪಿಯಿಂದ ಕೇವಲ ೫ ಕಿಮಿ ದೂರದಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಸೂಪರ್ ಸ್ಪೆಷಾಲಿಟಿ ಕಸ್ತೂರ್ಬಾ ಆಸ್ಪತ್ರೆ ಇದೆ.
ಇನ್ನೊಂದು ಕಾರಣ ವೈದ್ಯಕೀಯ ಕಾಲೇಜು ಇಲ್ಲ ಎನ್ನುವುದು, ಇದು ಕೂಡ ಹಾಸ್ಯಾಸ್ಪದ, ಯಾಕೆಂದರೇ ವಿಶ್ವಮಾನ್ಯತೆ ಪಡೆದಿರುವ ಮಣಿಪಾಲ ವಿ.ವಿ. ಉಡುಪಿಯಿಂದ ಕೇವಲ ೫ ಕಿ.ಮಿ. ದೂರದಲ್ಲಿದೆ.
ಜಿಲ್ಲಾಸ್ಪತ್ರೆಯನ್ನು ಸೂಪರ್ ಸ್ಪಷಾಲಿಟಿ ಮಟ್ಟಕ್ಕೇರಿಸಲು ಸರ್ಕಾರದ ಬಳಿ ಹಣ ಇಲ್ಲ ಎಂದು ಖುದ್ದು ಸರ್ಕಾರವೇ ಸಂಪುಟ ಸಭೆಯ ಪ್ರಸ್ತಾಪದಲ್ಲಿ ಒಪ್ಪಿಕೊಂಡಿದೆ. ಆದರೇ ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರದ ಬಳಿ ಹಣಕ್ಕೆ ಕೊರತೆ ಇಲ್ಲ ಎಂದು ಸರ್ಕಾರ ಪದೇ ಪದೇ ಸುಳ್ಳು ಹೇಳುತ್ತಿದೆಯೇ ಎಂಬ ಸಂಶಯಕ್ಕೂ ಕಾರಣವಾಗುತ್ತಿದೆ.
ರಾಯಚೂರಿಲ್ಲಿ ವಿಫಲ
ಸರ್ಕಾರಿ ಆಸ್ಪತ್ರೆಗಳಿಂದ ಜನರಿಗೆ ಉತ್ತಮ ಸೇವೆ ನೀಡುವಂತೆ ಮಾಡಬೇಕು ಎಂಬುದು ಸರ್ಕಾರದ ಉದ್ದೇಶವಾಗಿದ್ದರೇ ಅವುಗಳನ್ನು ಖಾಸಗೀಯವರಿಗೆ ನೀಡಬೇಕಾಗಿಲ್ಲ, ಸರ್ಕಾರವೇ ಮಾಡಬಹುದಾಗಿದೆ. ಶಿವಮೊಗ್ಗದ ಮೆಗ್ಗಾನ್, ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗಳೇ ಉತ್ತಮ ಉದಾಹರಣೆಗಳಾಗಿವೆ.
ಅಲ್ಲದೇ ರಾಯಚೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಖಾಸಗಿಯವರಿಗೆ ನೀಡಿ, ಅದು ವಿಫಲವಾಗಿ ಈಗ ಸರ್ಕಾರವೇ ಹಿಂದಕ್ಕೆ ಪೆಡದುಕೊಂಡು ನಷ್ಟದಲ್ಲಿ ನಡೆಸುತ್ತಿರುವ ಉದಾಹರಣೆಯೇ ಕಣ್ಣ ಮುಂದೆ ಇದೆ. ಜಿಲ್ಲಾಸ್ಪತ್ರೆಯನ್ನು ಖಾಸಗಿಯವರಿಗೆ ನೀಡುವುದರಿಂದ ಬಡವರಿಗೆ ನೇರವಾಗಿ ಅನ್ಯಾಯವಾಗುತ್ತದೆ ಎನ್ನುತ್ತಾರೆ ಜಿಲ್ಲಾಸ್ಪತ್ರೆಯ ಖಾಸಗೀಕರಣದ ವಿರುದ್ಧ ಬಲವಾಗಿ ಧ್ವನಿ ಎತ್ತುತ್ತಿರುವ ಡಾ.ಪಿ.ವಿ.ಭಂಡಾರಿ.
Discussion about this post