ನವದೆಹಲಿ,ಸೆ.23:-ಉರಿ ದಾಳಿಗಾಗಿ ಉಗ್ರರು ಬಳಸಿದ್ದ ನಕ್ಷೆಗಳನ್ನು ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ವಶಕ್ಕೆ ಪಡೆದುಕೊಂಡಿದೆ. ಸೇನಾ ಕಾರ್ಯಾಚರಣೆ ವೇಳೆ ಹತರಾದ ನಾಲ್ವರು ಉಗ್ರರ ಬಳಿ ಇದ್ದ, ನಕ್ಷೆಗಳನ್ನು ವಶಕ್ಕೆ ಪಡೆಯಲಾಗಿದೆ. ಗಡಿ ನಿಯಂತ್ರಣ ರೇಖೆಯ ಮೂಲಕ ಗಡಿಯೊಳಗೆ ನುಸುಳಿದ್ದ ಉಗ್ರರ ಬಳಿ ಇದ್ದ ಈ ನಕ್ಷೆಗಳಲ್ಲಿ ಯಾವ ಪ್ರದೇಶದ ಮೂಲಕ ಭಾರತದ ಒಳಗೆ ನುಸುಳಿದರು ಎನ್ನುವ ಕುರಿತು ತಿಳಿದುಬಂದಿದೆ. ಪಾಕಿಸ್ಥಾನದ ಲಷ್ಕರ್ ಇ ತೋಯ್ಬಾ ಸಂಘಟನೆ ಸೇರಿದವರೆನ್ನಲಾದ ಈ ಉಗ್ರರು, ಈ ನಕ್ಷೆಯಲ್ಲಿ ಭಾರತಕ್ಕೆ ನುಸುಳಲು ಬಳಸಬೇಕಾದ ಪ್ರಮುಖ ಪ್ರದೇಶಗಳ ಗುರುತು ಹಾಕಿಕೊಂಡಿದ್ದರು.
ಇದೀಗ ಇದೇ ಪ್ರದೇಶಗಳಲ್ಲಿ ಸೇನೆ ನುಸುಳುಕೋರ ಉಗ್ರರಿಗೆ ಶೋಧ ಕಾರ್ಯ ನಡೆಸುತ್ತಿದೆ. ಉರಿ ಸೇನಾ ನೆಲೆಯನ್ನು ತಲುಪಲು ಉಗ್ರರು ಗೊಲ್ಲಾಹನ್ ಹಾಗೂ ಚರುಂಡಾ ಎಂಬ ಹಳ್ಳಿಗಳ ಮೂಲಕ ಆಗಮಿಸಿದ್ದ ವಿಚಾರ ಈ ನಕ್ಷೆಯಿಂದ ಬೆಳಕಿಗೆ ಬಂದಿದೆ. ಈ 2 ಹಳ್ಳಿಗಳಲ್ಲಿ 4600ರಷ್ಟು ಜನಸಂಖ್ಯೆ ಇದೆ. ಈ ಬಗ್ಗೆ ಹೆಚ್ಚಿನ ತನಿಖೆಗೆ ಎನ್ಐಎ ತಂಡಕ್ಕೆ ಸಹಕಾರಿಯಾಗುವಂತೆ ಜಮ್ಮು ಕಾಶ್ಮೀರ ಪೊಲೀಸರು ಉರಿ ದಾಳಿ ನಡೆದ 24 ಗಂಟೆಗಳ ಅವಧಿಯ ಎಲ್ಲಾ ಇಂಟರ್ನೆಟ್ ಬಳಕೆ ಕುರಿತಾದ ಎಲ್ಲಾ ಮಾಹಿತಿ ನೀಡಿದೆ.
Discussion about this post