Read - < 1 minute
ನವದೆಹಲಿ, ಸೆ.22: ಜಮ್ಮು ಕಾಶ್ಮೀರ ಗಡಿಯ ಉರಿ ಸೇನಾಶಿಬಿರದ ಮೇಲೆ ದಾಳಿ ನಡೆಸಿ ಭಾರತೀಯ ಸೇನೆಯ ೧೮ ಯೋಧರನ್ನು ಹತ್ಯೆ ಮಾಡಿದ ಉಗ್ರರು ಪಾಕಿಸ್ಥಾನಕ್ಕೆ ಸೇರಿದವರೇ ಎಂದು ಭಾರತದಲ್ಲಿರುವ ಪಾಕ್ ಹೈಕಮಿಷನರ್ ಅಬ್ದುಲ್ ಬಸೀತ್‌ಗೆ ಭಾರತ ಸರ್ಕಾರ ಹೇಳಿದೆ.
ಈ ಕುರಿತಂತೆ ನಡೆದ ಸಚಿವ ಸಂಪುಟ ಸಭೆ ಭದ್ರತಾ ಸಮಿತಿಯ ಸಭೆಯ ನಂತರ ಪಾಕಿಸ್ಥಾನದ ಹೈಕಮಿಷನರ್ ಅಬ್ದುಲ್ ಬಸೀತ್ ಅವರನ್ನು ಕರೆಸಿಕೊಂಡ ಭಾರತ ಸರ್ಕಾರ ಈ ಮಾತುಗಳನ್ನು ಸ್ಪಷ್ಟವಾಗಿ ಹೇಳಿದೆ.
ಬಾಸಿತ್ ಅವರನ್ನು ತನ್ನ ಕಾರ್ಯಾಲಯಕ್ಕೆ ಕರೆಸಿಕೊಂಡ ಜೈಶಂಕರ್ ಅವರು ನಾನು ಈ ಹೊತ್ತಿನಲ್ಲಿ ಮಾತನಾಡುತ್ತಿರುವಂತೆಯೇ ಅತ್ತ ಜಮ್ಮು ಕಾಶ್ಮೀರ ಗಡಿ ನಿಯಂತ್ರಣ ರೇಖೆಯಲ್ಲಿ ನಮ್ಮ ಯೋಧರು ಪಾಕ್ ಉಗ್ರರ ವಿರುದ್ಧ ಹೋರಾಡುತ್ತಿದ್ದಾರೆ. ಪಾಕಿಸ್ಥಾನ ಈ ಹಿಂದೆ ಭಾರತದ ವಿರುದ್ಧ ಭಯೋತ್ಪಾದನೆಗೆ ತನ್ನ ನೆಲವನ್ನು ಬಳಸಲು ಯಾರಿಗೂ ಬಿಡುವುದಿಲ್ಲ ಎಂದು ಹೇಳಿತ್ತು. ಅದು ತನ್ನ ಸಾರ್ವಜನಿಕ ಬದ್ಧತೆಯನ್ನು ಈಡೇರಿಸಬೇಕಾಗಿದೆ’ ಎಂದು ಹೇಳಿದರು.
ಈ ಕುರಿತಂತೆ ಮಾತನಾಡಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್, ಹತ ಪಾಕ್ ಉಗ್ರರಿಂದ ವಶಪಡಿಸಿಕೊಳ್ಳಲಾಗಿರುವ ಜಿಎಸ್‌ಪಿ, ಗ್ರೆನೇಡ್‌ಗಳು, ಸಂಪರ್ಕ ಉಪಕರಣಗಳು, ಆಹಾರದ ಪ್ಯಾಕೇಟ್‌ಗಳು, ಔಷಧಿಗಳು ಹಾಗೂ ಬಟ್ಟೆ ಬರೆಗಳು ಪಾಕಿಸ್ಥಾನದ ಚಿಹ್ನೆಯನ್ನು ಹೊಂದಿದ್ದು ಇವೆಲ್ಲವುಗಳ ಆಧಾರದಲ್ಲಿ ಉಗ್ರರು ಪಾಕಿಸ್ಥಾನದವರೇ ಆಗಿರುವುದು ದೃಢಪಟ್ಟಿದೆ.
ಭಾರತದ ಮೇಲೆ ನಡೆದಿರುವ ಈ ಗಡಿಯಾಚೆಗಿನ ದಾಳಿಗಳ ಬಗ್ಗೆ ತನಿಖೆ ನಡೆಸಲು ಇಸ್ಲಾಮಾಬಾದ್ ಬಯಸಿದಲ್ಲಿ ನವದೆಹಲಿಯು ಉರಿ ಮತ್ತು ಪೂಂಚ್ ದಾಳಿಯಲ್ಲಿ ಹತರಾದ ಉಗ್ರರ ಬೆರಳಚ್ಚು ಮತ್ತು ಡಿಎನ್‌ಎ ಮಾದರಿಗಳನ್ನು ಕೊಡಲು ಸಿದ್ಧವಿದೆ ಎಂದು ಜೈಶಂಕರ್ ಅವರು ಬಸೀತ್‌ಗೆ ಹೇಳಿದರು.
Discussion about this post