ನವದೆಹಲಿ, ಅ.24: ಐಎಸ್‌ಐಎಸ್ ಭಯೋತ್ಪಾದಕರನ್ನು ತಾನು ಬಲ್ಲೆ; ಅವರನ್ನು ನಾನು ಇರಾಕ್‌ನಲ್ಲಿ ಭೇಟಿಯಾಗಿದ್ದೆ ಎಂದು ಈಚೆಗೆ ಸೆರೆಸಿಕ್ಕಿರುವ ಭಾರತೀಯ ಐಎಸ್‌ಐಎಸ್ ಕಾರ್ಯಕರ್ತ ಸುಭಾಹನಿ ಹಾಜಾ ಮೊಯ್ದಿನ್ ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾನೆ.
ತಮಿಳು ನಾಡಿನ ತಿರುನೆಲ್ವೇಲಿಯಲ್ಲಿ ಈಚೆಗೆ ಕೇಂದ್ರೀಯ ಭದ್ರತಾ ಪಡೆ, ರಾಷ್ಟ್ರೀಯ ತನಿಖಾ ದಳ ಹಾಗೂ ರಾಜ್ಯ ಪೊಲೀಸರು ಜಂಟಿಯಾಗಿ ಮೊಯ್ದಿನ್ ನನ್ನು ಸೆರೆ ಹಿಡಿದಿದ್ದವು. ಕೇರಳದಲ್ಲಿನ ಕೆಲವು ನ್ಯಾಯಾಧೀಶರು ಮತ್ತು ಈ ಕರಾವಳಿ ರಾಜ್ಯಕ್ಕೆ ಭೇಟಿ ಕೊಡುವ ವಿದೇಶಿ ಪ್ರವಾಸಿಗರನ್ನು ಕೊಲ್ಲುವ ಐಸಿಸ್ ಸಂಚನ್ನು ಆ ಮೂಲಕ ಬಯಲುಗೊಳಿಸುವಲ್ಲಿ ಅವರು ಸಫಲರಾಗಿದ್ದರು.
ಮೊಯ್ದಿನ್‌ನನ್ನು ಐಎಸ್‌ಐಎಸ್ ಉಗ್ರ ಸಂಘಟನೆಯ ನಿರ್ವಾಹಕರು ಸಾಮಾಜಿಕ ಜಾಲತಾಣದ ಮೂಲಕ, ಮನಸ್ಸು ಪರಿವರ್ತನೆ ಮಾಡಿದ್ದರು. ಐಎಸ್‌ಐಎಸ್ ಕಾರ್ಯಕರ್ತನನ್ನಾಗಿ ಪರಿವರ್ತಿಸಿದ್ದರು ಎನ್ನಲಾಗಿದೆ. ಉಮ್ರಾಹ್ ಧಾರ್ಮಿಕ ವಿಧಿ ಕೈಗೊಳ್ಳುವ ನೆಪದಲ್ಲಿ ಮೊಯ್ದಿನ್ ೨೦೧೫ರ ಎಪ್ರಿಲ್‌ನಲ್ಲಿ , ಟರ್ಕಿ ರಾಜಧಾನಿ ಇಸ್ತಾಂಬುಲ್‌ಗೆ ತೆರೆಳಿದ್ದ. ಇಸ್ತಾಂಬುಲ್‌ನಲ್ಲಿ ಇಳಿದ ಬಳಿಕ ಆತ ಕೆಲವು ಪಾಕಿಸ್ಥಾನೀಯರು ಮತ್ತು ಅಫ್ಘಾನಿಸ್ಥಾನೀಯರೊಂದಿಗೆ ಇರಾಕ್‌ಗೆ ಪ್ರಯಾಣ ಬೆಳೆಸಿ ಅಲ್ಲಿ ಐಎಸ್‌ಐಎಸ್ ನಿಯಂತ್ರಣದಲ್ಲಿದ್ದ ಪ್ರದೇಶ ತಲುಪಿದ್ದ. ಅಲ್ಲಿ ಅಬ್ಧೆಲ್ ಹಮೀದ್ ಅಬಾವೂದ್ ಮತ್ತು ಸಲಾಹ್ ಅಬ್ಧೆಸ್ಲಾಮ್ ಸಹಿತವಾಗಿ ಪ್ಯಾರಿಸ್ ಬಾಂಬ್ ದಾಳಿ ನಡೆಸಿದ್ದ ಉಗ್ರರನ್ನು ಭೇಟಿಯಾಗಿದ್ದ ಎಂಬುದು ತನಿಖಾಧಿಕಾರಿಗಳ ಮಾಹಿತಿಯಾಗಿದೆ.
Discussion about this post