ಬೆಳಿಗ್ಗೆ ಹತ್ತಾಗಿತ್ತು. ಅವಳು ಅಂದಿನ ದಿನಪತ್ರಿಕೆ ಹಿಡಿದು ಸುಮ್ಮನೆ ಪುಟ ತಿರುವುತ್ತಿದ್ದಳು. ಮನಸ್ಸು ಮಾತ್ರ ಹಳೆಯ ನೆನಪನ್ನೇ ನೆನಪಿಸುತ್ತಿತ್ತು. ಮನಸ್ಸು ಮಾತ್ರ ಯಾವತ್ತೂ ನಾವು ಹೇಳಿದ್ದು ಕೇಳಿದ್ದೇ ಇಲ್ಲ. ವಿವರಣೆ ಕೊಡುವಂತಹ ಘಟನೆ ನಡೆದಿಲ್ಲ ನಿಜ ಆದರೂ ದೊಡ್ಡ ಕಂದಕಕ್ಕೆ ಬಿದ್ದ ಅನುಭವ. ಹಿಂದಿನ ದಿನ ಮಧ್ಯಾಹ್ನದಿಂದ ಏನೂ ತಿಂದಿರಲಿಲ್ಲ. ಹೊಟ್ಟೆ ತಾಳ ಹಾಕುತ್ತಿತ್ತು. ಆದರೂ ಏನನ್ನು ತಿನ್ನುವ ಮನಸ್ಸನ್ನು ‘ ಮನಸ್ಸು ‘ ಮಾಡಲಿಲ್ಲ. ಮತ್ತೆ ಹೊದ್ದು ಮಲಗಿದಳು. ನಿದ್ದೆಯ ಸುಳಿವೂ ಇಲ್ಲ. ಮತ್ತದೇ ಕಾಡುವ ಪ್ರಶ್ನೆಗಳು. ಉತ್ತರಕ್ಕಾಗಿ ಯಾರನ್ನು ಕರೆಯುವುದು. ವಾಸ್ತವಿಕ ಜಗದಿಂದ ಆಕೆಯ ಮನಸ್ಸು ಅದೆಷ್ಟು ದೂರ ಸಾಗಿತ್ತೋ ದೇವರೇ ಬಲ್ಲ.
ಆಗ “ನಿಂಗೇನೆ ಆಗಿದೆ? ಗಂಟೆ ಹನ್ನೊಂದು ಆಗ್ತಾ ಬಂತು, ಮುಂಬಾಗಿಲು ತೆರದಿಟ್ಟು ಹೀಗೆ ಮಲಗಿದ್ದೀಯಾ! ಹೇಳೋರು ಕೇಳೋರು ಯಾರೂ ಇಲ್ಲ ನಿನಗೆ” ಆಕೆಯ ಸ್ನೇಹಿತೆಯ ಈ ಮಾತುಗಳು ಆಕೆಯನ್ನು ಬಲವಂತವಾಗಿ ವಾಸ್ತವಿಕ ಜಗತ್ತಿಗೆ ಕರೆತಂದಿತು. ಅವಳ ಗೆಳತಿ ” ಏನೆ ಮನೆ ಬಿಕೊ ಅಂತಿದೆ, ಎಲ್ಲಿ ನಿಮ್ಮಣ್ಣ ಊರು ಬಿಟ್ಟು ಹೋದ್ನಾ ಎನ್ ಕತೆ ” ಎಂದಾಗ ” ಮನಸ್ಸು ಬಿಟ್ಟು ಹೋದ” ಎಂದು ಹೇಳಬೇಕನಿಸಿದರೂ ಸುಮ್ಮನಾದಳು. ಕಣ್ಣಲ್ಲಿ ನೀರು ಜಿನುಗುತ್ತಿತ್ತು. ಗೆಳತಿಗೆ ಎಲ್ಲಾ ಹೇಳಬೇಕೆನಿಸಿತು. ಆದರೂ ಸ್ವರ ಬಾರದೇ ಸ್ನಾನಗೃಹದ ಕಡೆ ಹೋದಳು ಮೌನವಾಗಿ. ಆದರೆ ಮನಸ್ಸು ಎಡಬಿಡದೆ ಮಾತನಾಡುತ್ತಿತ್ತು.
ಬಿಸಿನೀರಿನ ಹನಿ ಮೈಮೇಲೆ ಬಿದ್ದಾಗ ದೇಹಕ್ಕೆ ಕೊಂಚ ನೆಮ್ಮದಿ ಎನಿಸಿತು. ಬಿಸಿನೀರ ಹನಿಗಳು ಕಣ್ಣೀರಿನೊಡನೆ ಬೆರೆತು ಆಕೆಯ ದುಃಖವನ್ನು ಹಂಚಿಕೊಂಡವು. ಕೆಲವು ದಿನಗಳಿಂದ ಅಣ್ಣನಲ್ಲಾದ ಬದಲಾವಣೆ ಅವಳ ದುಃಖಕ್ಕೆ ಕಾರಣ. ಆಕೆ ಉಪವಾಸ ಮಾಡಿದ ದಿನ ಆತನೂ ಊಟ ಮಾಡುತ್ತಿರಲಿಲ್ಲ. ಹಾಗಿದ್ದವನು ಅವಳನ್ನು ಆ ಒಂಟಿ ಮನೆಯಲ್ಲಿ ಒಂಟಿಯಾಗಿ ಬಿಟ್ಟುಹೋದನಲ್ಲ. ಇಷ್ಟು ವರ್ಷಗಳ ಅವರ ಬಾಂಧವ್ಯ ನಿನ್ನೇ ಮೊನ್ನೆಯಷ್ಟೇ ಅವನ ಜೀವನದಲ್ಲಿ ಬಂದ ಆ ಹೊಸ ಗೆಳೆಯ ಗೆಳತಿಯರಿಂದ ಮುರಿದು ಹೋಗುವಷ್ಟು ದುರ್ಬಲವೇ? ಇವನೊಂದಿಗೆ ನಾಲ್ಕು ಮಾತನಾಡಿ, ತಮಾಷೆ ಮಾಡಿ ನಕ್ಕು ಮನೆಗೆ ಹೋಗುವ ಇವರುಗಳ ಮುಂದೆ ತಂಗಿ ಕಾಣಲಾರದೇ ಹೋದಳೆ? ಅಂದಿನ ಮಧ್ಯಾಹ್ನ ನಾನು ಅವನನ್ನು ಊಟಕ್ಕೆ ಕರೆದರೆ ಓದಬೇಕು ಸಮಯವಿಲ್ಲ ಎಂದನಲ್ಲ. ಸಂಜೆ ಮನೆಯ ಎದುರಿನ park ನಲ್ಲಿ ಜೋರು selfie ತೆಗೆದುಕೊಳ್ಳುವಾಗ ಸಮಯ ಹಾಳಾಗಲಿಲ್ಲವೇ? ಏನಿದು ಏನಾಗಿದೆ ಇವನಿಗೆ ಎಂದುಕೊಳ್ಳುತ್ತಿರುವಾಗಲೇ ” ಏನೇ ಆಗಿದೆ ನಿನಗೆ, ಸ್ನಾನಕ್ಕೆ ಹೋಗಿ ಒಂದು ಗಂಟೆ ಆಯ್ತು, ಇನ್ನೂ ಮುಗಿದಿಲ್ಲವಾ, ಹೀಗಾದರೆ ಇವತ್ತು ದೇವಸ್ಥಾನಕ್ಕೆ ನಾವು ಹೋದ ಹಾಗೆ” ಎಂದಾಗ ” ಎರಡು ನಿಮಿಷ ಬಂದೆ ” ಎಂದಳು.
ಗೆಳತಿಯ ಜೊತೆ ದೇವಸ್ಥಾನಕ್ಕೆ ಬಂದ ಆಕೆಗೆ ದೇವರಲ್ಲಿ ಏನು ಕೇಳುವುದು ಎಂದು ತಿಳಿಯದೇ ಪೇಚಾಡಿದಳು. ಗೆಳತಿಯೆದುರು ದುಃಖ ಉಕ್ಕಿ ನೀರಾಗಿ ಹರಿದಳು. ದದ್ಘದಿತ ಧ್ವನಿಯಲ್ಲಿ ” ಇತ್ತೀಚೆಗೆ ಅಣ್ಣನಿಗೆ ನನ್ನ ನೆನಪಿಲ್ಲ, ಹೊಸ ಗೆಳೆತನದ್ದೇ ಧ್ಯಾನ, ಮೊದಲು ಹೀಗಿರಲಿಲ್ಲ, ಅವನ ಜೀವನ ಅವನಿಷ್ಟ ನಿಜ, ಹಾಗೆಂದು ವರ್ಷಗಳ ನಮ್ಮ ಸಂಬಂಧಕ್ಕೆ ಬೆಲೆ ಇಲ್ಲದಂತಾದರೆ ಹೇಗೆ ಸಹಿಸುವುದು? ನೆನ್ನೆಯಿಂದ ಮನೆಯಲ್ಲಿ ಒಂಟಿ, ಅದೆಲ್ಲಿ ಹೋಗಿದ್ದಾನೋ, ಅವರೊಟ್ಟಿಗೆ ಹೊರಗೆ ಹೋಗುವೆನು ನೀನು ಮನೆಯಲ್ಲಿ ಇರು ಎಂದು ಹೇಳಿದ್ದ ನೆನಪು. ಜೊತೆಗಿದ್ದ ಅಣ್ಣನೇ ಹೀಗೆ ಮಾಡಿದರೆ ರಾತ್ರಿಯ ಕತ್ತಲಲ್ಲಿ ಬಿಕ್ಕಿದ್ದು ಯಾರಿಗೆ ಹೇಳಲಿ, ಹಸಿದ ಒಡಲಿಗೆ ಯಾರ ಜೊತೆ ಸೇರಿ ತುತ್ತು ಸೇರಿಸಲಿ? ಹೊಸ ಒಡನಾಟದ ಹುಡುಕಾಟದಲ್ಲಿ ಇರುವ ಬಾಂಧವ್ಯ ಕಳೆದುಕೊಳ್ಳುವುದು ಎಷ್ಟು ಸರಿ? ” ಎಂದು ಬಿಕ್ಕಿ ಬಿಕ್ಕಿ ಅತ್ತಳು.
ಹೌದಲ್ಲವಾ! ಹೊಸ ಖುಷಿಯ ಹುಡುಕಾಟದಲ್ಲಿ ನಾವು ಇರುವ ನಮ್ಮವರನ್ನು ಕಳೆದುಕೊಳ್ಳುತೇವೆ. ಹೊಸ ಪರಿಚಯ ಹೊಸ ಬೆಸುಗೆಯಲ್ಲಿ ಇರುವ ಸಂಬಂಧ ಕಡೆಗಣಿಸುತ್ತೇವೆ. ಬಾಂಧವ್ಯಕ್ಕೆ ಬೆಲೆ ಕೊಟ್ಟಾಗ ಮಾತ್ರ ಅದರ ಬುನಾದಿ ಗಟ್ಟಿಯಾಗುತ್ತದೆ. ಕಾಣದ ಮೃಷ್ಟಾನ್ನದ ಆಸೆಯಲ್ಲಿ ಕೈಯಲ್ಲಿರುವ ತುತ್ತು ಕಡೆಗಣಿಸಿದರೆ ನಮಗೆ ತಾನೆ ನಷ್ಟ. ಹೊಸ ಗೆಳೆತನ ಬೇಕು ನಿಜ, ಆ ಹೊಸದರ ಅಬ್ಬರದಲ್ಲಿ ನಿಮ್ಮವರನ್ನು ಕಳೆದುಕೊಳ್ಳಬೇಡಿ. ಈ ಜೀವನ ನಾಜೂಕು, ಜಾಗರೂಕತೆ ತುಂಬಾ ಮುಖ್ಯ. ಒಮ್ಮೆ ಸಂಬಂಧದಲ್ಲಿ ಬಿರುಕು ಮೂಡಿದರೆ ಮುಗಿಯಿತು, ಬಾಳು ಒಡೆದ ಕನ್ನಡಿಯಂತೆಯೇ ಅಲ್ಲವೇ! ! ನೀವೇನೆನ್ನುತ್ತೀರಿ?
Discussion about this post