Read - < 1 minute
ಬೆಂಗಳೂರು: ಕನ್ನಡದಲ್ಲೂ ಇತ್ತೀಚಿಗೆ ಆಲ್ಬಂ ಹಾಡುಗಳ ಟ್ರೆಂಡ್ ಆರಂಭವಾಗಿದೆ. ಸಾಮಾನ್ಯವಾಗಿ ಆಲ್ಬಂ ಹಾಡುಗಳು ಅಂದರೆ ಕೇವಲ ಹೊಸಬರೇ ಸೇರಿ ನಿರ್ಮಾಣ ಮಾಡುತ್ತಾರೆ ಎಂಬ ಅನಿಸಿಕೆ ಇತ್ತು. ಆದರೆ, ಕನ್ನಡದ ಮೇರು ಗಾಯಕರೇ ಹಾಡಿರುವ ಮನಸಾಗಿದೆ.. ಜೊತೆಯಾಗಲು ಎಂಬ ಆಲ್ಬಂ ಸಿಡಿ ಈಗ ಮಾರುಕಟ್ಟೆಯಲ್ಲಿ ಜನಪ್ರಿಯವಾಗುತ್ತಿದೆ.
ಆರ್.ಆರ್.ಪ್ರೊಡಕ್ಷನ್ಸ್ ಮತ್ತು ಟೈಮ್ಸ್ ಮ್ಯೂಸಿಕ್ ಲಾಂಛನದಲ್ಲಿ ಹೊರತಂದಿರುವ ಈ ಹೊಸ ಪರಿಕಲ್ಪನೆಯ ಆಲ್ಬಂನ ನಿರ್ಮಾಪಕರು ಅನುಪಮ ಶರಧಿ. ಹಿಂದೂಸ್ತಾನಿ ಗಾಯಕ ಪಂಡಿತ್ ಪರಮೇಶ್ವರ ಹೆಗ್ಗಡೆ ರಾಗ ಸಂಯೋಜಿಸಿರುವ ಈ ಆಲ್ಬಂಗೆ ಮತ್ತೊಬ್ಬ ಸಂಗೀತ ನಿರ್ದೇಶಕ ಬಿ.ಜೆ. ಭರತ್ ಸಾಥ್ ನೀಡಿದ್ದಾರೆ. ಇದರ ಎಲ್ಲ ಹಾಡುಗಳಿಗೂ ಲೈವ್ ಪರಿಕರಗಳನ್ನು ಬಳಸಿರುವುದು ವಿಶೇಷ.
ಸಿನಿಮಾ ಹಾಡುಗಳಿಗೆ ಇತ್ತೀಚಿನ ದಿನಗಳಲ್ಲಿ ಶೇ. 90ರಷ್ಟು ಎಲೆಕ್ಟ್ರಾನಿಕ್ ಕೀ ಬೋರ್ಡ್ಗಳಲ್ಲಿ ಗೀತೆಗಳನ್ನು ಧ್ವನಿ ಮುದ್ರಿಸುತ್ತಿರುವ ಈ ಸಂದರ್ಭದಲ್ಲಿ ಅನುಪಮ ಅವರ ನೇರ ಸಂಗೀತ ಸಾಧನಗಳನ್ನು ಬಳಸಿರುವುದು ಶ್ಲಾಘನೀಯ. ಕೇರಳದ ಕೊಚ್ಚಿನ ಸ್ಪ್ರಿಂಗ್ಸ್ ವೃಂದದವರು ವಯೋಲಿನ್ ನುಡಿಸಿದ್ದು, ಅಮೆರಿಕದಲ್ಲಿ ಆಲ್ಬಂನ ಮಾಸ್ಟರಿಂಗ್ ಕಾರ್ಯ ನಡೆಸಲಾಗಿದೆ.
ಜನಪ್ರಿಯ ಗಾಯಕರುಗಳಾದ ವಿಜಯ್ ಪ್ರಕಾಶ, ರಾಜೇಶ್ ಕೃಷ್ಣನ್, ಭರತ್ ಬಿ.ಜೆ. ಅನುಪಮ ಶರಧಿ, ಲತಾ ಹಂಸಲೇಖ, ಶಮಿತಾ ಮಲ್ನಾಡ್ ಅವರಿಂದ ಹೊರಹೊಮ್ಮಿರುವ ಏಳು ಹಾಡುಗಳು ಸೊಗಸಾಗಿ ಮೂಡಿಬಂದಿದೆ. ಖ್ಯಾತ ಸಾಹಿತಿಗಳಾದ ಡಾ.ದೊಡ್ಡರಂಗೇಗೌಡ, ಡಾ. ನಾಗೇಂದ್ರ ಪ್ರಸಾದ್, ವಿಘ್ನೇಶ್ವರ ವಿಶ್ವ ಮತ್ತು ಪರಮೇಶ್ವರ ಹೆಗ್ಗಡೆ ಅವರ ಗೀತ ಸಾಹಿತ್ಯದಲ್ಲಿ ಸಪ್ತ ಗೀತೆಗಳು ಒಂದಕ್ಕೊಂದು ಭಿನ್ನ-ವಿಭಿನ್ನವಾಗಿದೆ.
ಗಾಯಕಿ ಮತ್ತು ನಿರ್ಮಾಪಕಿಯಾಗಿರುವ ಅನುಪಮ ಚೆನ್ನೈನ ಕೆಎಂಎಂಸಿ (ಆಸ್ಕರ್ ಪ್ರಶಸ್ತಿ ಪುರಸ್ಕೃತ ಎ.ಆರ್. ರೆಹಮಾನ್ ಅವರ) ಸ್ಟುಡಿಯೋದಲ್ಲಿ ಹಾಗೂ ಕನ್ನಡದ ಹಿರಿಯ ಸಂಗೀತ ನಿರ್ದೇಶಕರ ಬಳಿ ಗಾಯನ ತರಬೇತಿ ಪಡೆದಿದ್ದು. ಹಲವಾರು ಕಾರ್ಯಕ್ರಮಗಳು ಮತ್ತು ಸಂಗೀತ ವೇದಿಕೆಗಳಲ್ಲಿ ಭಾಗವಹಿಸಿದ್ದಾರೆ.
ನಿರೀಕ್ಷೆಯಂತೆ ಮನಸಾಗಿದೆ ಆಲ್ಬಂ ಯಶಸ್ವಿಯಾಗಿರುವುದರಿಂದ ಇನ್ನೂ ಹೊಸತನಗಳನ್ನು ಹೊಂದಿರುವ ಹಲವಾರು ಅಲ್ಪಂಗಳನ್ನು ಹೊರತರುವ ಆಶಯ ಅನುಪಮ ಅವರದ್ದು. ಈ ಆಲ್ಬಂನ ಸಿಡಿಗಳು ಸಪ್ನ ಪುಸ್ತಕ ಮಳಿಗೆ ಮತ್ತು ಮ್ಯೂಸಿಕ್ ಶಾಪ್ ಗಳಲ್ಲಿ ಲಭ್ಯವಿರುತ್ತದೆ. ಟೈಮ್ಸ್ ಮ್ಯೂಸಿಕ್ಸ್, ಐ ಟ್ಯೂನ್ಸ್, ಸಾವನ್, ಗಾನಾ ಮತ್ತು ಇತರ ಆನ್ಲೈನ್ ಸೈಟ್ಗಳಿಂದಲೂ ಇದನ್ನು ಡೌನ್ಲೋಡ್ ಮಾಡಬಹುದಾಗಿದೆ.
Discussion about this post