“ಕಲಿಯುಗದಲ್ಲಿ ಜನರು ಕಲಿಯ ಪ್ರಭಾವದಿಂದ ಹೇಗೆ ಮುಕ್ತರಾಗಿರಲು ಸಾಧ್ಯ..?” ಇದು ದೇವರ್ಷಿ ನಾರದರು ದ್ವಾಪರಯುಗದ ಅಂತ್ಯದಲ್ಲಿ ಸೃಷ್ಟಿಕರ್ತ ಬ್ರಹ್ಮನಿಗೆ ಕೇಳಿದ ಪ್ರಶ್ನೆ.ಆಗ ಬ್ರಹ್ಮ “ಆದಿಪುರುಷ ಭಗವಾನ್ ನಾರಾಯಣನ ನಾಮಜಪವನ್ನು ಯಾವ ಜೀವಿಯು ನಿರಂತರವಾಗಿ ಜಪಿಸುತ್ತದೆಯೋ ಅಂತಹ ಜೀವಿ ಕಲಿಪ್ರಭಾವದಿಂದ ಮುಕ್ತವಾಗಿರುತ್ತದೆ” ಎಂದು ಉತ್ತರಿಸುತ್ತಾನೆ.”ಅಂತಹ ನಾಮಜಪ ಯಾವುದು?” ಎಂಬುದು ನಾರದರ ಪ್ರಶ್ನೆ.ಆಗ ಬ್ರಹ್ಮ ನಾರದರಿಗೆ ಈ ಮಂತ್ರವನ್ನು ಉಪದೇಶಿಸುತ್ತಾನೆ.
“ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ |
ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ ||”
“ಇತಿ ಷೋಡಶಕಂ ನಾಮ್ನಾಂ ಕಲಿ ಕಲ್ಮಷನಾಶನಮ್ |
ನಾತಃ ಪರತರೋಪಾಯಃ ಸರ್ವ ವೇದೇಷು ದೃಶ್ಯತೇ ||”
ಹದಿನಾರು ಪದಗಳ ಈ ದಿವ್ಯಮಂತ್ರದಿಂದ ಮನುಷ್ಯ ಕಲಿಪ್ರಭಾವದಿಂದ ರಕ್ಷಿಸಲ್ಪಡುತ್ತಾನೆ.ಈ ಮಂತ್ರದ ಹೊರತಾಗಿ ಕಲಿಯುಗದಲ್ಲಿ ಮನುಷ್ಯನನ್ನು ಉದ್ಧಾರ ಮಾಡುವ ಮಂತ್ರಗಳು ನಾಲ್ಕು ವೇದಗಳಲ್ಲಿಯೂ ಕಾಣಸಿಗಲಾರದು.ಕಲಿಯುಗದಲ್ಲಿ ಶ್ರೇಯಸ್ಸನ್ನು ಪಡೆಯಬೇಕೆಂದರೆ ಈ ಮಂತ್ರವೊಂದೇ ಸಾಕು.ಇನ್ಯಾವ ಮಂತ್ರಜಪದ ಅವಶ್ಯಕತೆ ನಮಗಿಲ್ಲ.
ಬೃಹನ್ನಾರದೀಯ ಪುರಾಣದಲ್ಲಿ..
“ಹರೇರ್ನಾಮ ಹರೇರ್ನಾಮ
ಹರೇರ್ನಾಮೇವ ಕೇವಲಮ್ |
ಕಲೌ ನಾಸ್ತ್ಯೇವ ನಾಸ್ತ್ಯೇವ
ನಾಸ್ತ್ಯೇವ ಗತಿರನ್ಯಥಾ ||”
ಕಲಿಯುಗದಲ್ಲಿ ಕೇವಲ ಹರಿನಾಮ,ಹರಿನಾಮ,ಹರಿನಾಮದಿಂದಷ್ಟೇ ಒಳಿತಾಗುತ್ತದೆ.ಹರಿನಾಮವನ್ನು ಬಿಟ್ಟು ಮನುಷ್ಯನನ್ನು ಉದ್ಧಾರ ಮಾಡುವ ಉಪಾಯ ಯಾವುದಿಲ್ಲ,ಯಾವುದಿಲ್ಲ,ಯಾವುದಿಲ್ಲ..!!ಕಲಿಯುಗದಲ್ಲಿ ಸ್ವಯಂ ಶ್ರೀಕೃಷ್ಣನೇ ಹರಿನಾಮ ರೂಪದಲ್ಲಿ ಅವತಾರವೆತ್ತಿದ್ದಾನೆ.ಕೇವಲ ಹರಿನಾಮದಿಂದಲೇ ಸಕಲ ಜಗತ್ತುಗಳ ಒಳಿತಾಗುತ್ತದೆ.
ಪದ್ಮಪುರಾಣದಲ್ಲಿ..
“ನಾಮ ಚಿಂತಾಮಣಿಃ ಕೃಷ್ಣಶ್ಚೈತನ್ಯ ರಸವಿಗ್ರಹಃ | ಪೂರ್ಣಶುದ್ಧೋ ನಿತ್ಯಮುಕ್ತೋ ಅಭಿನ್ನತ್ವಂ ನಾಮ ನಾಮಿನೋಃ ||” ಎಂದು ಹೇಳಲಾಗಿದೆ.ಅಂದರೆ,ಹರಿನಾಮ ಸಮಸ್ತ ಕಾಮನೆಗಳನ್ನು ನೆರವೇರಿಸುವ ಚಿಂತಾಮಣಿಯಂತೇ.ಹರಿನಾಮ ಸಾಕ್ಷಾತ್ ರಸಸ್ವರೂಪ,ದಿವ್ಯತೆಗಳಿಂದ ಕೂಡಿದ ಶ್ರೀಕೃಷ್ಣ.ಪೂರ್ಣತೆ,ಶುದ್ಧತೆ ಹಾಗೂ ನಿತ್ಯಮುಕ್ತತೆಯ ಪ್ರತಿರೂಪವೇ ಹರಿನಾಮ.
“ನಾಮಿ” (ಹರಿ) ಹಾಗೂ ಹರಿನಾಮದಲ್ಲಿ ಯಾವುದೇ ಅಂತರವಿಲ್ಲ.ಯಾರು ಕೃಷ್ಣನೋ ಆತ ಹರಿನಾಮ.ಯಾವುದು ಹರಿನಾಮವೋ ಆತನೇ ಶ್ರೀಕೃಷ್ಣ..!!
ಕಲಿಯುಗ ದೋಷಗಳ ಭಂಡಾರ.ದೋಷಗಳ ಭಂಡಾರದಲ್ಲೂ ಇರುವ ಸದ್ಗುಣವೆಂದರೆ ಹರಿನಾಮ.(ಶ್ರೀಮದ್ಭಾಗವತ ೧೨.೩.೫೧)
ಸತ್ಯಯುಗದಲ್ಲಿ ಧ್ಯಾನದಿಂದ,ತ್ರೇತಾಯುಗದಲ್ಲಿ ಯಜ್ಞ-ಅನುಷ್ಠಾನಗಳಿಂದ,ದ್ವಾಪರಯುಗದಲ್ಲಿ ಪೂಜೆ,ಅರ್ಚನೆಗಳಿಂದ,ಕಲಿಯುಗದಲ್ಲಿ ಶ್ರೀಹರಿಯ ನಾಮ ಸಂಕೀರ್ತನೆಯಿಂದ ಪುಣ್ಯಪ್ರಾಪ್ತಿಯಾಗುತ್ತದೆ.
“ರಾಮ ರಾಮೇತಿ ರಾಮೇತಿ
ರಮೇ ರಾಮೇ ಮನೋರಮೇ |
ಸಹಸ್ರನಾಮ ತತ್ತುಲ್ಯಂ
ರಾಮನಾಮ ವರಾನನೇ ||”(ರಾಮರಕ್ಷಾಸ್ತೋತ್ರಮ್)
“ಹೇ ಪಾರ್ವತಿ ! ನಾನು ಸದಾ ರಾಮನಾಮವನ್ನು ಜಪಿಸುತ್ತಿರುತ್ತೇನೆ ಹಾಗೂ ರಾಮನಾಮದ ಆನಂದವನ್ನು ಅನುಭವಿಸುತ್ತೇನೆ” ಇದು ಪರಮೇಶ್ವರ ಪಾರ್ವತಿಗೆ ಹೇಳುವ ಮಾತು.
“ರಾಮಚಂದ್ರನ ಪವಿತ್ರನಾಮ ಭಗವಾನ್ ವಿಷ್ಣುವಿನ ಒಂದು ಸಾವಿರ ನಾಮಕ್ಕೆ ಸರಿಸಮ”(ರಾಮರಕ್ಷಾಸ್ತೋತ್ರಮ್)
ಬ್ರಹ್ಮಾಂಡಪುರಾಣದಲ್ಲಿ..
“ಸಹಸ್ರನಾಮ್ನಾಂ ಪುಣ್ಯಾನಾಂ
ತ್ರಿರಾವೃತ್ಯಾ ತು ಯತ್ಫಲಮ್ |
ಎಕಾವೃತ್ಯಾ ತು ಕೃಷ್ಣಸ್ಯ
ನಾಮೈಕಮ್ ತತ್ ಪ್ರಯಚ್ಛತಿ ||”
ವಿಷ್ಣುವಿನ ಸಹಸ್ರನಾಮಜಪದಿಂದ ದೊರೆಯುವ ಪುಣ್ಯ ಕೇವಲ ಕೃಷ್ಣ ಎಂಬ ನಾಮಜಪದಿಂದ ಸಿದ್ಧಿಸುತ್ತದೆ.
ಮೂವತ್ತೆರಡು ಅಕ್ಷರಗಳುಳ್ಳ ಹರಿನಾಮಮಂತ್ರ ಸರ್ವಪಾಪಗಳನ್ನು ನಿವಾರಿಸುತ್ತದೆ.ಎಲ್ಲ ಪ್ರಕಾರಗಳ ವಿಷಯದುರ್ವಾಸನೆಗಳನ್ನು ದಹಿಸುವ ಅಗ್ನಿಯಾಗಿದೆ.ಶುದ್ಧಸತ್ವಸ್ವರೂಪ ಹಾಗೂ ಭಗವದ್ಭಕ್ತಿಯನ್ನು ವರ್ಧಿಸುವುದಾಗಿದೆ.ಎಲ್ಲರಿಗೂ ಆರಾಧನೀಯ ಹಾಗೂ ಜಪಿಸಲು ಯೋಗ್ಯವಾಗಿದೆ.ಎಲ್ಲರ ಮನೋಕಾಮನೆಗಳನ್ನು ಪೂರೈಸುವುದಾಗಿದೆ.ಈ ನಾಮಮಂತ್ರವನ್ನು ಜಪಿಸಲು ಸರ್ವರಿಗೂ ಅಧಿಕಾರವಿದೆ.ಎಲ್ಲ ಜೀವಿಗಳ ಬಂಧು,ಸಮಸ್ತ ಶಕ್ತಿಸಂಪನ್ನ,ಆಧಿ-ವ್ಯಾಧಿಗಳ ವಿನಾಶಕ ಹರಿನಾಮಮಂತ್ರವೆಂದು ಭಕ್ತಿ ಚಂದ್ರಿಕೆಯಲ್ಲಿ ಹರಿನಾಮಜಪದ ಮಹಾತ್ಮೆಯನ್ನು ವಿವರಿಸಲಾಗಿದೆ.ಈ ಮಂತ್ರವನ್ನು ಜಪಿಸಲು ದೀಕ್ಷೆ ಬೇಕಿಲ್ಲ.ಬಾಹ್ಯಪೂಜೆಯ ಅವಶ್ಯಕತೆಯಿಲ್ಲ.ದೇಶ-ಕಾಲಗಳ ಪ್ರತಿಬಂಧವಿಲ್ಲ.ಕೇವಲ ಭಕ್ತಿಯಿಂದ ಉಚ್ಚಾರಿಸಿದರೆ ಸಾಕು,ಸಂಪೂರ್ಣಫಲ ಸಿಗುತ್ತದೆ.”ಸ ಏವ ಮೂಲಮಂತ್ರಂ ಜಪತಿ ಹರೇಃ ಇತಿ ಕೃಷ್ಣ ಇತಿ ರಾಮ ಇತಿ” ಇದು ಅಥರ್ವವೇದದ ಚೈತನ್ಯೋಪನಿಷತ್ತಿನಲ್ಲಿ ಬರುವ ಮಾತು.
ಯಾವ ಭಕ್ತ ಪ್ರತಿನಿತ್ಯ ೩೨ ಅಕ್ಷರಗಳ ಈ ದಿವ್ಯಮಂತ್ರವನ್ನು ಭಕ್ತಿಯಿಂದ ಜಪಿಸುವನೋ ಆತನಿಗೆ ರಾಧಾಕೃಷ್ಣರ ಸಾಮೀಪ್ಯ ಸಿಗುತ್ತದೆ.ಯಾವುದೇ ಪ್ರಕಾರದ ಅಶುದ್ಧಾವಸ್ಥೆಯಲ್ಲಿಯೂ ಈ ಮಂತ್ರವನ್ನು ಜಪಿಸಬಹುದು.ಜಪ-ತಪಗಳಲ್ಲಿ ದೋಷವುಂಟಾದಾಗ ದೋಷನಿವಾರಣೆಗಾಗಿ ಈ ಮಂತ್ರವನ್ನು ಜಪಿಸಬಹುದು. ಸದಾ ಹರಿನಾಮ ಸಂಕೀರ್ತನೆಯನ್ನು ಉಚ್ಚಸ್ವರದಿಂದ ಮಾಡಬೇಕು.ಆಗಲೇ ಸರಿಯಾದ ಫಲಪ್ರಾಪ್ತಿ.
ಹರಿವಂಶಪುರಾಣದ ಅನುಸಾರ –
“ವೇದರಾಮಾಯಣೇಚೈವ ಪುರಾಣೇ ಭಾರತೇ ತಥಾ |
ಆದಾವಂತೇಚಮಧ್ಯೇ ಚ ಹರಿಃ ಸರ್ವತ್ರ ಗೀಯತೇ ||”
ವೇದ,ರಾಮಾಯಣ,ಮಹಾಭಾರತ,ಪುರಾಣಗಳ ಆದಿ,ಮಧ್ಯ ಹಾಗೂ ಅಂತ್ಯದಲ್ಲಿ ಸರ್ವತ್ರ ಶ್ರೀಹರಿಯ ಗುಣಗಾನವನ್ನೇ ಮಾಡಲಾಗಿದೆ.ಹಾಗಾಗಿ ಕಲಿಯುಗದಲ್ಲಿ ಹರಿನಾಮ ಜಪದಿಂದಷ್ಟೇ ಸಮಸ್ತ ದೋಷಗಳ ನಿವಾರಣೆ ಸಾಧ್ಯ.
“ಸರ್ವೇ ಭವಂತು ಸುಖಿನಃ”
Discussion about this post