Read - 2 minutes
ಯಾದಗಿರಿ, ಸೆ.9: ರೈಲು ತಡೆಯಲು ಹೋದ ಕರವೇ ಕಾರ್ಯಕರ್ತರ ಬಂಧನ, ಬಿಡುಗಡೆ, ಅಲ್ಲಲ್ಲಿ ಟೈರ್, ತಮಿಳುನಾಡು ಸಿಎಂ ಜಯಲಲಿತಾ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ, ವಿವಿಧ ಸಂಘಟನೆಗಳಿಂದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಪ್ರದರ್ಶನ, ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಅರ್ಪಣೆ
ಇವು ಕಾವೇರಿ ನದಿ ನೀರಿನ ವಿಚಾರವಾಗಿ ಕರ್ನಾಟಕದ ವಿರುದ್ಧವಾಗಿ ಸುಪ್ರಿಂಕೋರ್ಟ್ ನೀಡಿರುವ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಒತ್ತಾಯಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ ವೇಳೆ ಶುಕ್ರವಾರ ನಗರದಲ್ಲಿ ಕಂಡುಬಂದ ದೃಶ್ಯಾವಳಿಗಳ ಝಲಕ್ ಗಳು.
ಬೆಳಗ್ಗೆ 7 ಗಂಟೆಗೆ ಉತ್ತರ ಕರ್ನಾಟಕ ಅದ್ಯಕ್ಷ ಶರಣು ಗದ್ದುಗೆ ನೇತೃತ್ವದಲ್ಲಿ ಕರವೇ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ನಗರದ ರೈಲು ನಿಲ್ದಾಣಕ್ಕೆ ನುಗ್ಗಿ ದಾದರ್-ಚೆನ್ನೈ ರೈಲು ತಡೆಯಲು ಮುಂದಾದಾಗ ಪೊಲೀಸರು ಶರಣು ಬಿ. ಗದ್ದುಗೆ ಸೇರಿದಂತೆ ಬಣದ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆ ಮಾಡಿದರು.
ನಂತರ ಕಾರ್ಯಕರ್ತರು ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ಕರ್ನಾಟಕಕ್ಕೆ ಘೋರ ಅನ್ಯಾಯವಾಗಿದೆ ತಕ್ಷಣ ಸರಿಪಡಿಸಬೇಕೆಂದು ಆಗ್ರಹಿಸಿದರು.
ಕರ್ನಾಟಕ ರೈತಸಂಘ, ಜಯಕರ್ನಾಟಕ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿ ರಾಜ್ಯಕ್ಕೆ ಕಾವೇರಿ ನೀರಿನ ವಿಚಾರದಲ್ಲಿ ಆಗಿರುವ ಅನ್ಯಾಯ ಸರಿಸಪಡಿಸುವಂತೆ ಆಗ್ರಹಿಸಿದರು.
ರೈತ ಸಂಘದ ಕಾರ್ಯದರ್ಶಿ ಹನೀಫ್ ಹತ್ತಿಕುಣಿ, ಹೈದ್ರಾಬಾದ್ ಕರ್ನಾಟಕ ರೈತರ ಸಂಘದ ಜಿಲ್ಲಾಧ್ಯಕ್ಷ ದುರ್ಗಣ್ಣ ಹಪ್ಪಳ ನೇತೃತ್ವದಲ್ಲಿ ರೈತರು ಪ್ರತ್ಯೇಕ ಮನವಿಗಳು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಮೀನರೆಡ್ಡಿ ದೇಸಾಯಿ, ಚೆನ್ನಾರೆಡ್ಡಿ ಪಾಟೀಲ್ ಕೋಡಾಲ, ಸಿದ್ದಪ್ಪಗೌಡ ರೊಟ್ನಡಗಿ, ಸುರೇಶ ಜಹಗೀರದಾರ ಶಹಾಪುರ, ಚೆನ್ನರೆಡ್ಡಿ ಗುರುಸುಣಗಿ, ಕೆ. ಮೈನೋದ್ದಿನ್ ತಾಶೆ ಪಾಲ್ಗೊಂಡಿದ್ದರು.
‘ನೀರಿನ ಸಂಕಷ್ಟ ಸಮನಾಗಿ ಹಂಚಿಕೊಳ್ಳುವ ಸೂತ್ರ ಜಾರಿಗೊಳಿಸಿ’
ಕರವೇ ನಾರಾಯಣಗೌಡ ಜಿಲ್ಲಾದ್ಯಕ್ಷ ಭೀಮುನಾಯಕ ನೇತೃತ್ವದಲ್ಲಿ ಕಾರ್ಯಕರ್ತರು ನಗರದ ಪ್ರವಾಸದ ಮಂದಿರದಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ರವರ ಅಣುಕು ಶವಯಾತ್ರೆ ಮಾಡಿ ಶವವನ್ನು ದಹಿಸುವ ಮುಖಾಂತರ ಬೃಹತ್ ಪ್ರತಿಭಟನೆ ಮಾಡಲಾಯಿತು.
ಶುಕ್ರವಾರ ಪ್ರತ್ಯೇಕ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ತೀವ್ರ ಬರಗಾಲ ಎದುರಿಸುತ್ತಿರುವ ಕರ್ನಾಟಕದಲ್ಲಿ ಈ ಬಾರಿ ಬಹುತೇಕ ಜಲಾಶಯಗಳಲ್ಲಿ ನೀರಿನ ಸಂಗ್ರಹ ತಳಮುಟ್ಟಿದೆ. ಕಾವೇರಿ ಕೊಳದ ಜಲಾಶಯಗಳಲ್ಲಿನ ನೀರು ಕರ್ನಾಟಕ ಕುಡಿಯುವ ನೀರಿನ ಅಗತ್ಯಕ್ಕೂ ಸಾಲದ ಸ್ಥಿತಿಯಿದ್ದಾಗಲೂ ತನ್ನ ಬೆಳೆಗೆ ನೀರು ಬೇಕು ಎಂದು ತಮಿಳುನಾಡು ಕ್ಯಾತೆ ತೆಗೆದಿದ್ದನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿರುವುದು ನಾಚಿಕೆಗೇಡು ಸಂಗತಿ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಎರಡು ರಾಜ್ಯಗಳ ಕಾವೇರಿ ಕೊಳದ ಎಲ್ಲಾ ಜಲಾಶಯಗಳಲ್ಲಿನ ನೀರಿನ ಲಭ್ಯತೆಯ ಬಗ್ಗೆ ಜಂಟಿ ಸಮೀಕ್ಷೆಗೆ ಒತ್ತಾಯಿಸಬೇಕು, ನೀರಿಲ್ಲದ ಬರಪರಿಸ್ಥಿಯ ವರ್ಷದಲ್ಲಿ ಎರಡು ರಾಜ್ಯಗಳು ಸಂಕಷ್ಟವನ್ನು ಸಮಾನವಾಗಿ ಹಂಚಿಕೊಳ್ಳುವ ಸ್ವರೂಪದ ಸಂಕಷ್ಟ ಸೂತ್ರವೊಂದನ್ನು ರೂಪಿಸಲು ಮುಂದಾಗಬೇಕು ಎಂದು ಟಿ.ಎನ್. ಭೀಮುನಾಯಕ ಒತ್ತಾಯಿಸಿದರು.
ಮಲ್ಲು ಮಾಳಿಕೇರಿ, ಭೀಮಾಶಂಕರ ಹತ್ತಿಕುಣಿ, ಹಣಮಂತ ನಾಯಕ್ ಖಾನಳ್ಳಿ, ಮಲ್ಲಿಕಾರ್ಜುನ ಸ್ವಾಮಿ, ಅಬ್ದುಲ್ ಚಿಗಾನೂರ, ಹಣಮಂತ ಅಚೋಲಿ, ಮಲ್ಲು ರಾಮಸಮುದ್ರ, ಯಮನಯ್ಯ ಗುತ್ತೇದಾರ, ದೊಡ್ಡಪ್ಪ ನಾಯಕ್, ನಿಂಗಪ್ಪ ಗುಡುಗುಡಿ, ಮಲ್ಲಿಕಾಜರ್ುನ ಕನ್ನಡಿ, ಶಿವು ಕೊಂಕಲ್, ಸಾಹೇಬಗೌಡ ಗೌಡಗೇರಿ, ನಾಗಪ್ಪ ಗೋಪಾಳಪುರ, ಭೀಮರಾಯ ಕಟ್ಟಿಮನಿ, ರಾಜು ಪಗಲಾಪುರ, ರಾಜು ಗೌಡಗೇರಾ, ಮರೆಪ್ಪ ಬಿಳ್ಹಾರ, ಲಕ್ಷ್ಮಣ ಜಿನಕೇರಿ, ಬಸ್ಸಪ್ಪ ಗಣಪೂರು, ರಫೀಕ್ ವಡಿಗೇರಾ, ಶರಣ ಮಡಿವಾಳ, ಮಲ್ಲಿನಾಥ ಹೋರುಣಚಿ, ವೆಂಕಟರೆಡ್ಡಿ ಕೌಳೂರು, ಬಸ್ಸು ನಾಯಕ, ರವಿ ನಾಯಕ, ಚಂದ್ರಶೇಖರ ಗೋಪಾಳಪುರ, ಮಂಜು ಅರಿಕೇರಿ, ರೆಡ್ಡಿ, ವೆಂಕಟೇಶ ಚೌವ್ಹಾಣ, ಸಾಬು ಅಲ್ಲಿಪುರ, ಹಾಗೂ ಇನ್ನಿತರ ಕ.ರ.ವೇ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Discussion about this post