ನವದೆಹಲಿ, ಅ.19: ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ತೀರ್ಪನ್ನು ಕಾಯ್ದಿರಿಸಿರುವ ಸುಪ್ರೀಂ ಕೋರ್ಟ್, ಮುಂದಿನ ಆದೇಶದವರೆಗೂ ತಮಿಳುನಾಡಿಗೆ ಪ್ರತಿನಿತ್ಯ 2,000 ಕ್ಯೂಸೆಕ್ ನೀರು ಬಿಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಕಾವೇರಿ ನ್ಯಾಯಾಧಿಕರಣದ ಐ ತೀರ್ಪು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಸರ್ಕಾರಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಮೂರ್ತಿಗಳಾದ ದೀಪಕ್ ಮಿಶ್ರ, ಅಮಿತವ್ ರಾಯ್ ಮತ್ತು ಎಎಂ ಖಾನ್ವಿಲ್ಕರ್ ನೇತೃತ್ವದ ತ್ರಿಸದಸ್ಯ ಪೀಠ, ಮೇಲ್ಮನವಿ ಅರ್ಜಿಗಳ ಸಿಂಧುತ್ವದ ಬಗ್ಗೆ ತೀರ್ಪು ಕಾಯ್ದಿರಿಸಿ, ಮುಂದಿನ ಆದೇಶದವರೆಗೆ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿತು.
ಮೇಲ್ಮನವಿ ಅರ್ಜಿಗೆ ಸಂಬಂಧಿಸಿದಂತೆ ಬುಧವಾರ ಕೇಂದ್ರ ಸರ್ಕಾರ, ಕರ್ನಾಟಕ, ಪುದುಚೇರಿ, ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಪರ ವಕೀಲರ ವಾದ ಮಂಡನೆ ಮುಕ್ತಾಯವಾಗಿದ್ದು, ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ ತೀರ್ಪನ್ನು ಕಾಯ್ದಿರಿಸಿದೆ.
ರಾಜ್ಯದ ವಾದವೇನು
ಕರ್ನಾಟಕದ ಪರ ವಾದ ಮಂಡಿಸಿದ ಹಿರಿಯ ವಕೀಲ ಫಾಲಿ ಎಸ್. ನಾರಿಮನ್ ಅವರು, ಕಾವೇರಿ ನ್ಯಾಯಾಧಿಕರಣದ ಐತೀರ್ಪು ಪ್ರಶ್ನಿಸಿ ಕರ್ನಾಟಕ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆಗೆ ಯೋಗ್ಯವಾಗಿದೆ, ವಿಚಾರಣೆಗೆ ಪರಿಗಣಿಸಬೇಕು ಎಂದು ಸುದೀರ್ಘವಾಗಿ ವಾದಿಸಿದ್ದಾರೆ.
ಅಲ್ಲದೆ ತಮಿಳುನಾಡು ಮತ್ತು ಕೇರಳ ವಕೀಲರು ಸಹ ಮೇಲ್ಮನವಿ ಅರ್ಜಿಗಳು ವಿಚಾರಣೆಗೆ ಯೋಗ್ಯ ಎಂದು ವಾದಿಸಿದವು.
ವಾದ ಪ್ರತಿ ವಾದ:
ಅಟಾರ್ನಿ ಜನರಲ್: ನ್ಯಾಯಾಧೀಕರಣ ನೀಡಿದ ಅಂತಿಮ ಆದೇಶವನ್ನು ಸುಪ್ರೀಂಕೋರ್ಟ್ ಬದಲಾಯಿಸಲು ಸಾಧ್ಯವಿಲ್ಲ. ಈ ಬಗ್ಗೆ ಮೇಲ್ಮನವಿಯನ್ನು ವಿಚಾರಿಸಲು ಅವಕಾಶವಿಲ್ಲ.
ನಾರಿಮನ್: ನಿನ್ನೆಯ ವಾದ ಮುಂದುವರಿಸಿದ ನಾರಿಮನ್ ನ್ಯಾಯಾಧೀಕರಣ ಅಂತಿಮ ಆದೇಶವನ್ನು ವಿರೋಧಿಸಿ ರಾಜ್ಯಗಳು ಸಲ್ಲಿಸಿದ ಮೇಲ್ಮನವಿಯನ್ನು ವಿಚಾರಣೆ ನಡೆಸಲು ಅವಕಾಶವಿದೆ. ಇದು ಸುಪ್ರೀಂಕೋರ್ಟ್ ವ್ಯಾಪ್ತಿಗೆ ಬರುತ್ತದೆ ಎಂದು ಸಂವಿಧಾನದ ವಿಧಿ ಉಲ್ಲೇಖ.
ತಮಿಳುನಾಡು: ಶೇಖರ್ ನಾಪ್ಡೆ – ಸೆಕ್ಷನ್ 6(2) ಅಂತರರಾಜ್ಯ ನೀರು ವಿವಾದ ಕಾಯ್ದೆ 1956 ಪ್ರಕಾರ ಸಂವಿಧಾನದ 136ನೇ ವಿಧಿಯಂತೆ ಸುಪ್ರೀಂಗೆ ಅಧಿಕಾರವಿದೆ. ಸುಪ್ರೀಂಗೆ ನ್ಯಾಯಾಧೀಕರಣವನ್ನು ಅತಿಕ್ರಮಿಸುವಂತಿಲ್ಲ ಎಂದರು.
ಕೇರಳ: ಕರ್ನಾಟಕ ವಾದಕ್ಕೆ ಬೆಂಬಲ
ಪಾಂಡಿಚೇರಿ: ಕೇಂದ್ರದ ವಾದಕ್ಕೆ ಬೆಂಬಲ
ಸುಪ್ರೀಂ: ಆದೇಶ ಕಾಯ್ದಿರಿಸಿ ಇದೇ 24 ರೊಳಗೆ ಲಿಖಿತ ರೂಪದಲ್ಲಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನಂತರವೇ ಆದೇಶ
ನೀರುಬಿಡಿ: ಅಲ್ಲಿಯವರೆಗೆ ಅಕ್ಟೋಬರ್ 18 ರ ಮಧ್ಯಂತರ ಆದೇಶವನ್ನು ಮುಂದುವರಿಸಿ
ನ್ಯಾಯಾಧೀಕರಣ ವಿವರ: 2007 ರಲ್ಲಿ ಫೆಬ್ರವರಿ 5 ರಂದು ಕಾವೇರಿ ಕಣಿವೆಯಲ್ಲಿ ಒಟ್ಟು ಜಲಮೂಲದ ಲಭ್ಯತೆಯ ಆಧಾರದ ಮೇಲೆ (ಸಮುದ್ರಕ್ಕೆ ಸೇರುವ ಹಾಗೂ ಪರಿಸರ ರಕ್ಷಣೆಗೆ ಬಳಸಲಾಗುವ 14 ಟಿಎಂಸಿ ಅಡಿ ನೀರು ಸೇರಿ ಒಟ್ಟು 740 ಟಿಎಂಸಿ ಅಡಿ ನೀರು) ನ್ಯಾಯಾಧೀಕರಣ ಅವಿರೋಧ ನಿರ್ಣಯವನ್ನು ಪ್ರಕಟಿಸಿ ವಾರ್ಷಿಕ 419 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ 270 ಟಿಎಂಸಿ ಅಡಿ ಕರ್ನಾಟಕಕ್ಕೆ 30 ಟಿಎಂಸಿ ಅಡಿ ಕೇರಳಕ್ಕೆ ಮತ್ತು 7 ಟಿಎಂಸಿ ಅಡಿ ಪಾಂಡೀಚೇರಿಗೆ ಹಂಚಿಕೆ ಮಾಡಿ ಅಂತಿಮ ಆದೇಶವನ್ನು ಹೊರಡಿಸಿತ್ತು.
Discussion about this post