ಎರಡು ದಿನ 6 ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ಆದೇಶ | ಸೆ.30ಕ್ಕೆ ಅರ್ಜಿ ವಿಚಾರಣೆ
ನವದೆಹಲಿ, ಸೆ.27: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನ್ಯಾಯಾಲಯದಲ್ಲಿ ಮತ್ತೊಮ್ಮೆ ರಾಜ್ಯಕ್ಕೆ ಅನ್ಯಾಯವಾಗಿದ್ದು, ಎರಡು ದಿನಗಳ ಕಾಲ ಆರು ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಆದೇಶ ನೀಡಿ, ವಿಚಾರಣೆಯನ್ನು ಸೆ.೨೯ಕ್ಕೆ ಮುಂದೂಡಿದೆ.
ರಾಜ್ಯದ ಪರವಾಗಿ ವಾದ ಮಂಡಿಸಿದ ಫಾಲಿ ಎಸ್. ನಾರಿಮನ್, ಜಲಾಶಯಗಳಲ್ಲಿ ನೀರು ಇಲ್ಲದಿರುವುದರಿಂದ ನವೆಂಬರ್ ಕೊನೆಯವರೆಗೆ ತಮಿಳುನಾಡಿಗೆ ನೀರು ಬಿಡಲು ಸಾಧ್ಯವೇ ಇಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಆದರೆ, ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂದು ರಾಜ್ಯ ವಿಧಾನಮಂಡಲದಲ್ಲಿ ನಿರ್ಣಯ ಕೈಗೊಂಡ ವಿಚಾರದಲ್ಲಿ ನಾರಿಮನ್‌ರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ಸಂವಿಧಾನದ ಯಾವ ಅನುಚ್ಛೇದದ ಅಡಿಯಲ್ಲಿ ಈ ನಿರ್ಣಯವನ್ನು ನೀವು ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿತು.
ಈ ವೇಳೆ ವಾದ ಮಂಡಿಸಿದ ತಮಿಳುನಾಡು ಪರ ವಕೀಲ ಶೇಖರ್ ನಫಾಡೆ, ಮೊದಲ ದಿನದಿಂದಲೂ ಕಡಿಮೆ ನೀರು ಬಿಡುತ್ತಿದೆ. ಕರ್ನಾಟಕದ ವಿಳಂಬ ಪ್ರವೃತ್ತಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಅಲ್ಲದೇ, ಬೆಂಗಳೂರು ಕಾವೇರಿ ಜಲಾನಯನ ಪ್ರದೇಶದಲ್ಲಿ ಇಲ್ಲ. ಹೀಗಿರುವಾಗ, ಬೆಂಗಳೂರಿಗೆ ಕಾವೇರಿ ನೀರು ಕುಡಿಯಲು ಬೇಕು ಎಂದು ಕೇಳುವುದು ಸರಿಯಲ್ಲ ಎಂದು ವಾದ ಮಂಡಿಸಿದರು.
ನೀರು ಬಿಡುವರರೆಗೂ ಕರ್ನಾಟಕದ ವಾದ ಆಲಿಸಬಾರದು ಎಂದು ತಮಿಳುನಾಡು ಪರ ವಕೀಲರು ಸುಪ್ರೀಂಗೆ ಮನವಿ ಮಾಡಿದರು. ಆದರೆ, ಕರ್ನಾಟಕ ವಾದವನ್ನು ನಾವು ಆಲಿಸುತ್ತೇವೆ ಎಂದ ನ್ಯಾಯಾಲಯ, ರಾಜ್ಯದ ವಾದವನ್ನು ಆಲಿಸಿತು. ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರಿಂದ ಕರ್ನಾಟಕದ ಪರ ಮನವಿ ಆಲಿಸುವಂತೆ ವಾದ ಮಂಡಿಸಿದರು.
ತಮಿಳುನಾಡಿಗೆ ೩ ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕೆಂಬ ಕಾವೇರಿ ಮೇಲುಸ್ತುವಾರಿ ಸಮಿತಿ ನೀಡಿದ್ದ ಆದೇಶವನ್ನು ತಿರಸ್ಕರಿಸಿ, ಪ್ರತಿದಿನ ೬ ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕೆಂದು ನ್ಯಾ. ದೀಪಕ್ ಮಿಶ್ರಾ ಮತ್ತು ನ್ಯಾ. ಉದಯ್ ಯು. ಲಲಿತ್ ಅವರಿದ್ದ ವಿಭಾಗೀಯ ಪೀಠ ಸೆ. ೨೦ರಂದು ಆಜ್ಞೆ ನೀಡಿತ್ತು. ಇದಕ್ಕೆ ಪ್ರತಿಯಾಗಿ, ಕರ್ನಾಟಕ ಒಂದು ದಿನದ ವಿಶೇಷ ಅಧಿವೇಶನ ನಡೆಸಿ, ಕೆಆರ್‌ಎಸ್, ಹಾರಂಗಿ, ಹೇಮಾವತಿ ಮತ್ತು ಕಬಿನಿ ಜಯಾಶಯಗಳಲ್ಲಿ ನೀರಿಲ್ಲದಿದ್ದರಿಂದ, ಇರುವ ನೀರನ್ನು ಕುಡಿಯಲು ಮಾತ್ರ ಬಳಸಿಕೊಳ್ಳಲಾಗುವುದೆಂದು ಐತಿಹಾಸಿಕ ತೀರ್ಮಾನ ತೆಗೆದುಕೊಂಡಿತ್ತು.
ಈ ವೇಳೆ ಡಿಸೆಂಬರ್‌ವರೆಗೆ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗುವುದಿಲ್ಲ. ಅಲ್ಲದೆ, ತಮಿಳುನಾಡಿಗೆ ೨.೨೫ ಲಕ್ಷ ಕ್ಯೂಸೆಕ್ಸ್ ನೀರು ಬಿಡಬೇಕೆಂದು ಆದೇಶ ನೀಡಲಾಗಿತ್ತು. ಇದಕ್ಕೆ ಮಾನ್ಯತೆ ನೀಡಿ ಈವರೆಗೆ ೧.೯೬ ಲಕ್ಷ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡಲಾಗಿದೆ. ೨೬ ಸಾವಿರ ಕ್ಯೂಸೆಕ್ಸ್ ನೀರು ಮಾತ್ರ ಬಿಡಬೇಕಾಗಿರುವುದು ಎಂದು ಕರ್ನಾಟಕ ತನ್ನ ಅರ್ಜಿಯಲ್ಲಿ ತಿಳಿಸಿದೆ.
ಇಂದಿನ ವಾದ ಪ್ರತಿವಾದಗಳ ಹೈಲೆಟ್ಸ್…
*ನವೆಂಬರ್ ೨೦೧೫ರವರೆಗೆ ನೀರು ಬಿಡಲು ಸಾಧ್ಯವೇ ಇಲ್ಲ; ನಾರಿಮನ್
*ನವೆಂಬರ್ ಅಂತ್ಯದೊಳಗೆ ಸೆ.೨೦ರ ಆದೇಶ ಹೇಗೆ ಪಾಲಿಸುತ್ತೀರಿ? ನಾರಿಮನ್‌ಗೆ ಸುಪ್ರೀಂ ಪ್ರಶ್ನೆ
*ಎಲ್ಲವೂ ದೇವರ ಇಚ್ಚೆ ಮೇಲೆ ನಿರ್ಧಾರವಾಗುತ್ತೆ ಎಂದು ನಾರಿಮನ್
*ದೇವರು ಕೊಟ್ಟರೆ ಆದೇಶ ಪಾಲಿಸುತ್ತೇವೆ.. ತಮಿಳುನಾಡಿಗೆ ಈಶಾನ್ಯ ಮಾರುತ ಬರುತ್ತೆ: ನಾರಿಮನ್
*ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸುವಂತೆ ಸೂಚನೆ ನೀಡಿ; ಅಟಾರ್ನಿ ಜನರಲ್
*ಈಗ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಲು ಈಗ ಸಾಧ್ಯವೇ? ಎಜೆಗೆ ಸುಪ್ರೀಂ ಪ್ರಶ್ನೆ
Discussion about this post