Read - < 1 minute
ನವದೆಹಲಿ, ಸೆ. 13: ಕಾವೇರಿ ನೀರು ಬಿಡುಗಡೆ ವಿಚಾರವಾಗಿ ನಡೆಯುತ್ತಿರುವ ಬೆಳವಣಿಗೆಯಿಂದ ವೈಯಕ್ತಿಕವಾಗಿ ನನಗೆ ನೋವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಕವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಗಲಭೆ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮೌನಮುರಿದಿರುವ ಪ್ರಧಾನಿ, ಹಿಂಸಾಚಾರದಿಂದ ಯಾವುದೇ ಸಮಸ್ಯೆಗೂ ಪರಿಹಾರ ಸಿಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ, ಸಂಯಮ ಮತ್ತು ಪರಸ್ಪರ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.
ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರ, ಗಲಭೆಗಳಿಂದ ಬಡಜನತೆಗೆ ನಷ್ಟ, ತೊಂದರೆಯುಂಟಾಗುತ್ತಿದ್ದು, ದೇಶದ ಆಸ್ತಿ-ಪಾಸ್ತಿಗೆ ಹಾನಿಯಾಗುತ್ತಿದೆ. ಕಾನೂನನ್ನು ಮುರಿಯುವುದು ಸಮಸ್ಯೆ ಪರಿಹಾರಕ್ಕೆ ಮಾರ್ಗವಲ್ಲ. ಉಭಯ ರಾಜ್ಯಗಳಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದ ತುಂಬಾ ನೋವುಂಟಾಗಿದೆ ಎಂದು ಹೇಳಿದ್ದಾರೆ.
ಉಭಯ ರಾಜ್ಯಗಳ ಜನರು ತಮ್ಮ ನಾಗರಿಕ ಜವಾಬ್ದಾರಿಗಳನ್ನು ಅರಿತು ಸೂಕ್ಷ್ಮವಾಗಿ ನಡೆದುಕೊಳ್ಳಬೇಕೆಂದು ಕೋರುತ್ತೇನೆ. ರಾಷ್ಟ್ರದ ವಿಷಯ ಬಂದಾಗ ಎಲ್ಲಕ್ಕಿಂತ ಮುಖ್ಯವಾಗಿ ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವ್ಯವಹರಿಸುತ್ತೀರಿ ಎಂದು ನಂಬುತ್ತೇನೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
Discussion about this post