ಉಡುಪಿ, ಸೆ.6: ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇದೆ. ಆದ್ದರಿಂದ ಕಾವೇರಿ ನದಿ ನೀರಿನ ಲಭ್ಯತೆಯ ಬಗ್ಗೆ ಅಧ್ಯಯನ ಮಾಡಿ, ವಾಸ್ತವವನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಮನವರಿಕೆ ಮಾಡಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆ. ಆದರೆ ಮುಖ್ಯಮಂತ್ರಿಗಳು ಆ ರೀತಿ ಮಾಡದೇ ಇದ್ದುದರಿಂದ ಕಾವೇರಿ ನೀರಿನ ಹಂಚಿಕೆಯ ಬಗ್ಗೆ ರಾಜ್ಯಕ್ಕೆ ವಿರುದ್ಧವಾಗಿ ಸುಪ್ರೀಂ ಕೋರ್ಟ್ ತೀರ್ಪು ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ.
ಉಡುಪಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಜ್ಯದಲ್ಲಿ ಕುಡಿಯುವ ನೀರಿಗಾಗಿ ಪರದಾಟವಿದೆ. ರಾಜ್ಯದ ಯಾವುದೇ ಜಲಾಶಯದಲ್ಲಿ ನೀರಿಲ್ಲ, ಇಂಥಹ ಪರಿಸ್ಥಿತಿಯಲ್ಲಿ ಕಾವೇರಿ ನದಿ ನೀರಿನ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಪಾಲನೆ ಮಾಡಲು ಸಾಧ್ಯವಿಲ್ಲದಂತಹ ಆದೇಶವನ್ನು ಸುಪ್ರೀಂ ಕೋರ್ಟ್ ನೀಡಿದೆ ಎಂದರು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನಾದರೂ ಸರ್ಕಾರ ತಕ್ಷಣ ವಿಧಾನ ಮಂಡಲದ ಅಧಿವೇಶನ ಕರೆದು, ಎಲ್ಲರ ಅಭಿಪ್ರಾಯವನ್ನು ತೆಗೆದುಕೊಂಡು ಸುಪ್ರೀಂ ಕೋರ್ಟ್ಗೆ ಮೇಲ್ಮನವಿಯನ್ನು ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಒಂದು ಹನಿ ನೀರನ್ನು ಬಿಡಲು ಸಾಧ್ಯವಿಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ಗೆ ಮನವರಿಕೆ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಯಾವುದೇ ಸಂಬಂಧವಿಲ್ಲದಂತೆ ವರ್ತಿತ್ತಿದೆ. ತಮ್ಮ ರಾಜಕೀಯ ಲೆಕ್ಕಾಚಾರ, ನಿಗಮ ಮಂಡಳಿಗಳ ರಚನೆ, ಸಚಿವ ಸಂಪುಟ ವಿಸ್ತರಣೆ ಈ ಗೊಂದಲದಲ್ಲಿ ರಾಜ್ಯ ಸರ್ಕಾರ ಇದೆಯೇ ಹೊರತು, ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಥಿತಿಯಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಲೀ, ಕಾಂಗ್ರೆಸ್ ಮುಖಂಡರಾಗಲೀ ಇಲ್ಲ ಎಂದು ಯಡಿಯೂರಪ್ಪ ಸೋಮವಾರ ನಡೆದ ಸಂಪುಟ ವಿಸ್ತರಣೆಯ ಬಗ್ಗೆ ಟೀಕಿಸಿದರು.
Discussion about this post