Read - 2 minutes
ಸಾಂವಿಧಾನಿಕ ಸಂಸ್ಥೆಯಾಗಿದ್ದರೂ ಲಂಚ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಸೇರಿದಂತೆ ಸ್ವಾರ್ಥ ರಾಜಕಾರಣದ ಪರಾಕಾಷ್ಟೆಯಲ್ಲಿ ಮುಳುಗೇಳುತ್ತಿರುವ ಕರ್ನಾಟಕ ಲೋಕಸೇವಾ ಆಯೋಗಕ್ಕೆ, ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾತಿ ಆಧಾರಿತ ತಜ್ಞರು ಎಂಬ ಪೆಡಂಭೂತವನ್ನು ಬಿಡಲು ಸಿದ್ಧವಾಗಿದೆ.
ಈ ಕುರಿತಂತೆ ವರದಿ ಪ್ರಕಟವಾಗಿದ್ದು, ರಾಜ್ಯ ಸರ್ಕಾರದ ಸ್ವಾರ್ಥ ರಾಜಕಾರಣಕ್ಕೆ ಕನ್ನಡಿ ಹಿಡಿದಂತಾಗಿದೆ. ಗೆಜೆಟೆಡ್ ಪ್ರೊಬೆಷನರ್ಸ್ ನೇಮಕಾತಿಯಲ್ಲಿ ಅವ್ಯವಹಾರ ನಡೆದು, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ ನಂತರವೂ ಕೆಪಿಎಸ್‌ಸಿ ಗೆ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿ ವೇಳೆ ವಿವಾದ ಸೃಷ್ಠಿಯಾಗಿತ್ತು.
ಲೋಕಾಯುಕ್ತದಲ್ಲಿ ಪ್ರಕರಣ ಹೊಂದಿರುವ ವ್ಯಕ್ತಿಗಳನ್ನು ಆಯೋಗಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಅಲ್ಲದೇ, ರಾಜಕೀಯ ಹಿನ್ನೆಲೆ ಹೊಂದಿರುವ ವ್ಯಕ್ತಿಯನ್ನು ಆಯೋಗಕ್ಕೆ ನೇಮಕ ಮಾಡಬಾರದು ಎಂಬ ನಿಯಮವಿದ್ದರೂ, ಕಡೆಗಳಿಗೆಯಲ್ಲಿ ಬುದ್ಧಿವಂತಿಕೆ ಪ್ರದರ್ಶಿಸಿದ ಸಿದ್ಧರಾಮಯ್ಯ ವಿ.ಆರ್. ಸುದರ್ಶನ್ ಅವರ ಹೆಸರು ಶಿಫಾರಸ್ಸು ಮಾಡಿದ್ದರು. ಆ ವೇಳೆ ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಹಾಗೂ ಕೆಪಿಎಸ್‌ಸಿ ವಿರುದ್ಧ ಆರೋಪಗಳು ಹೆಚ್ಚಾದ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ್ದ ಸಿದ್ದರಾಮಯ್ಯ ಇನ್ನು ಮುಂದೆ ಕೆಪಿಎಸ್‌ಸಿಯನ್ನು ಲಂಚರಹಿತವಾಗಿ ಮಾಡುವುದು ಮಾತ್ರವಲ್ಲದೇ, ಸ್ವಚ್ಛಗೊಳಿಸುತ್ತೇನೆ ಎಂದು ವೀರಾವೇಶದಿಂದ ಹೇಳಿದ್ದರು.
ಆದರೆ ಈಗ, ಸಾಮಾಜಿಕ ನ್ಯಾಯ ಎಂಬ ಮುಖವಾಡವನ್ನು ಕೆಪಿಎಸ್‌ಸಿಗೆ ಹೊದ್ದಿಸಲು ಯತ್ನಿಸಿ, ಅದರ ಹಿಂದೆ ಭ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತದ ಕರಾಳಮುಖವನ್ನು ರೂಪಿಸಹೊರಟಿರುವುದು ನಿಜಕ್ಕೂ ದುರಾದೃಷ್ಠದ ಸಂಗತಿ.
ಕೆಪಿಎಸ್‌ಸಿಯಲ್ಲಿನ ನೇಮಕಾತಿಯಲ್ಲಿ ಸಂದರ್ಶನದ ವಿಚಾರದಲ್ಲೇ ಭ್ರಷ್ಟಾಚಾರ ಆರೋಪ ಎಂದಿಗೂ ಕೇಳಿಬರುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಸಂದರ್ಶನದ ಗತಿಯನ್ನೇ ಬದಲಿಸುವಂತಹ ನಿರ್ಧಾರ ಕೈಗೊಳ್ಳುವುದು ನೇಮಕಾತಿಯ ವಿಶ್ವಾಸಾರ್ಹತೆ ಪ್ರಶ್ನಿಸುವುದಿರಲಿ, ಇದರ ನೈತಿಕತೆಯೇ ಪ್ರಶ್ನಾರ್ಹವಾಗುತ್ತದೆ.
ಪ್ರಮುಖವಾಗಿ ಹೋಟಾ ಸಮಿತಿಯ ಶಿಫಾರಸ್ಸಿನಂತೆ ಸಂದರ್ಶನದ ಸಮಯದಲ್ಲಿ ತಜ್ಞರ ಸಮಿತಿಯನ್ನು ನೇಮಕ ಮಾಡಬೇಕು, ಸಂದರ್ಶನ ಸಮಿತಿಯಲ್ಲಿರುವವರು ಶೈಕ್ಷಣಿಕ ಹಿನ್ನೆಲೆಯಲ್ಲಿರಬೇಕು. ಈ ಹಿನ್ನೆಲೆಯಲ್ಲಿ ಕೆಪಿಎಸ್‌ಸಿಗೆ ರಾಜಕೀಯ ಪ್ರೇರಿತವಾಗಿ ನೇಮಕವಾದ ಸದಸ್ಯರಿಗೆ ಸಂದರ್ಶನದಲ್ಲಿ ಯಾವುದೇ ರೀತಿಯ ಪ್ರಾಧಾನ್ಯತೆ ದೊರೆಯುವುದಿಲ್ಲ. ಹೀಗಾಗಿ, ಹಿಂಭಾಗಿಲಿನಿಂದ ದುಡ್ಡು ಮಾಡುವ ದಂಧೆಯನ್ನಾಗಿ ಈ ಸಂದರ್ಶನವನ್ನು ಮುಂದುವರೆಸಲು ರಾಜ್ಯ ಸರ್ಕಾರ ಈ ರೀತಿಯ ನಿರ್ಧಾರಕ್ಕೆ ಬಂದಿದೆ ಎನ್ನುವುದು ಸ್ಪಷ್ಟ.
ಹೋಟಾ ಸಮಿತಿಯ ಶಿಫಾರಸ್ಸಿನಂತೆ ಹಾಲಿ ಅಧ್ಯಕ್ಷರು ಹಾಗೂ ಸದಸ್ಯರು ಸಂದರ್ಶನ ನಡೆಸುವಂತಿಲ್ಲ. ಈಗಾಗಲೇ ಕೇಂದ್ರ ಲೋಕಸೇವಾ ಆಯೋಗದಲ್ಲಿರುವಂತೆ ಹಿರಿಯ ಸದಸ್ಯ ಸೇರಿದಂತೆ ನಾಲ್ವರು ತಜ್ಞರು ಸಮಿತಿಯಲ್ಲಿರುತ್ತಾರೆ. ಯುಪಿಎಸ್‌ಸಿ ಮಟ್ಟಿಗೆ ನೋಡುವುದಾದರೆ, ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು, ಭ್ರಷ್ಟಾಚಾರ ರಹಿತವಾಗಿ ನೇಮಕಾತಿ ಪ್ರಕ್ರಿಯೆಯನ್ನು ನಡೆಸುತ್ತಿರುವುದರ ಪರಿಣಾಮ, ದಕ್ಷ ಅಧಿಕಾರಿಗಳು ಅಧಿಕಾರಶಾಹಿಯಲ್ಲಿ ಸೇರ್ಪಡೆಗೊಳ್ಳುತ್ತಿದ್ದಾರೆ.
ಆದರೆ, ಈಗಾಗಲೇ ಲಂಚ ಹಾಗೂ ಸ್ವಜನಪಕ್ಷಪಾತದಲ್ಲಿ ಮಿಂದೇಳುತ್ತಿರುವ ಕೆಪಿಎಸ್‌ಸಿಯನ್ನು ಶುದ್ಧಿಕರಿಸುವುದು ಬಿಟ್ಟು, ಜಾತಿ ಆಧಾರಿತವಾಗಿ ತಜ್ಞರ ಸಮಿತಿಯನ್ನು ನೇಮಕ ಮಾಡಲು ಹೊರಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ವ್ಯವಸ್ಥೆಯನ್ನು ಏನು ಮಾಡಲು ಹೊರಟಿದೆ.
ರಾಜ್ಯ ಸರ್ಕಾರಿ ವ್ಯವಸ್ಥೆಯಲ್ಲಿ ಪ್ರಮುಖ ಭಾಗವಾಗಬಲ್ಲ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿ ಅತ್ಯಂತ ಪಾರದರ್ಶಕ ಹಾಗೂ ಸ್ವಜನ ಪಕ್ಷಪಾತದಿಂದ ಮುಕ್ತವಾಗಿದ್ದರೆ ಮಾತ್ರ ಉತ್ತಮ ವ್ಯಕ್ತಿಗಳು ಅಧಿಕಾರಿಗಳಾಗಿ ಹೊರಬರಲು ಸಾಧ್ಯ.
ಆದರೆ, ಇದರಲ್ಲೂ ಜಾತಿ ಆಧಾರಿತವಾಗಿ ತಜ್ಞರ ನೇಮಕಾತಿಯನ್ನು ಸರ್ಕಾರ ಮಾಡಹೊರಟಿದೆ ಎಂದರೆ, ಇದೇನು ಎಸ್‌ಡಿಎಂಸಿ ಕಮಿಟಿಯೇ ಅಥವಾ ಸಾರ್ವಜನಿಕ ಜಾತ್ರಾ ಸಮಿತಿಯೇ ಸಾಮಾಜಿಕ ನ್ಯಾಯ ಎನ್ನಲು.
ಹಳ್ಳಹಿಡಿದು ಹೋಗಿರುವ ವ್ಯವಸ್ಥೆಯನ್ನು ಸರಿಪಡಿಸಲು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳ ಅಗತ್ಯವಿದೆಯೇ ಹೊರತು ಜಾತಿ ಆಧಾರಿತ ವ್ಯಕ್ತಿಗಳಲ್ಲ. ಯಾವುದೇ ವರ್ಗಕ್ಕೆ ಸೇರಿದ ವ್ಯಕ್ತಿಯಾಗಿದ್ದರೂ ಇಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆಯೇ ಮುಖ್ಯವಾಗುತ್ತದೆ. ಸರ್ಕಾರ ಚಿಂತನೆಯಂತೆ ಜಾತಿ ಆಧಾರಿತವಾಗಿ ತಜ್ಞರ ನೇಮಕಾತಿ ಆಗಿದ್ದೇ ಆದಲ್ಲಿ, ಇದರಲ್ಲಿ ಸ್ವಜನ ಪಕ್ಷಪಾತ ನಡೆಯುವುದಿಲ್ಲ ಎಂಬ ಖಾತರಿಯೇನು?
ಸಂವಿಧಾನದ ಪೀಠಿಕೆಯಲ್ಲೇ ಭಾರತವನ್ನು ಜಾತ್ಯತೀತ ರಾಷ್ಟ್ರ ಎಂದು ಹೇಳಲಾಗಿದ್ದರೂ, ಪ್ರತಿಯೊಂದರಲ್ಲೂ ಜಾತಿ ಹಾಗೂ ಧರ್ಮವೇ ಇಂದು ಮುಖ್ಯವಾಗಿರುವುದಕ್ಕೆ ರಾಜಕಾರಣದಲ್ಲಿ ಜಾತಿ ಬೆರೆತಿರುವುದೇ ಕಾರಣ. ಆದರೆ, ರಾಜ್ಯ ಆಡಳಿತಶಾಹಿ ವ್ಯವಸ್ಥೆಯಲ್ಲಿ ಪ್ರಮುಖ ಭಾಗವಾಗುವ ಗೆಜೆಟೆಡ್ ಪ್ರೊಬೆಷನರ್ಸ್ ನೇಮಕಾತಿ ಸಮಿತಿಯ ತಜ್ಞರ ಸಮಿತಿ ನೇಮಕಾತಿಯಲ್ಲೇ ಈ ರೀತಿ ಜಾತಿ ಎಂಬ ಪೆಡಂಭೂತವನ್ನು ಬಿಟ್ಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಇನ್ನಾವ ರೀತಿಯ ಸಾಮಾಜಿಕ ನ್ಯಾಯ ಒದಗಿಸುತ್ತದೆ? ಇಂತಹ ಗುರುತರ ಹಾಗೂ ಸೂಕ್ಷ್ಮ ನೇಮಕಾತಿಯಲ್ಲೂ ಜಾತಿ ಎನ್ನುವ ಕಾಂಗ್ರೆಸ್, ಗಡಿಯಲ್ಲಿ ಶತ್ರುಗಳ ವಿರುದ್ಧ ಮುನ್ನುಗ್ಗಿ ಹೋರಾಡಲು ಜಾತಿ ಆಧಾರಿತ ಮೀಸಲಾತಿ ನೀಡಿ ಎಂದು ಪ್ರಯತ್ನಪಡುವುದಿಲ್ಲವೇಕೆ?
ಒಟ್ಟಿನಲ್ಲಿ ಈಗಾಗಲೇ ಕುಲಗೆಟ್ಟು ಹೋಗಿ, ಭ್ರಷ್ಟಾಚಾರದ ಕೂಪವಾಗಿರುವ ಕೆಪಿಎಸ್‌ಸಿಯನ್ನು ಮತ್ತಷ್ಟು ಪಾತಾಳಕ್ಕೆ ತಳ್ಳಿ, ವೋಟ್‌ಬ್ಯಾಂಕ್‌ನ್ನು ಗಟ್ಟಿ ಮಾಡಿಕೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎನ್ನುವುದು ಸ್ಪಷ್ಟ.
Discussion about this post