ರಾಷ್ಟ್ರಮಟ್ಟದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುವವರಿಗೆ
ಇಲ್ಲಿನ ಕೆ.ಕೆ.ಪೈ ಟ್ರಸ್ಟ್ ನೀಡುವ ಕೆ.ಕೆ.ಪೈ ರಾಷ್ಟ್ರೀಯ ಬ್ಯಾಂಕಿಂಗ್ ಪ್ರಶಸ್ತಿಗೆ
ವಿಜಯಾ ಬ್ಯಾಂಕಿನ ಮಾಜಿ ಅಧ್ಯಕ್ಷ ಪ್ರಕಾಶ ಮಲ್ಯ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಪ್ರಶಸ್ತಿ ಪ್ರದಾನ ಸಮಾರಂಭ ಅಕ್ಟೋಬರ್ 9ರಂದು ಸಂಜೆ 4 ಗಂಟೆಗೆ ಮಣಿಪಾಲದ
ಟ್ಯಾಪ್ಮಿಯಲ್ಲಿ ನಡೆಯಲಿದೆ ಎಂದು ಟ್ರಸ್ಟಿ ನ ಕಾರ್ಯದರ್ಶಿ ಡಾ.ಕೆ.ಕೆ.ಅಮ್ಮಣ್ಣಾಯ
ತಿಳಿಸಿದ್ದಾರೆ.
2006ರಿಂದ 2008ರವರೆಗೆ ವಿಜಯಾ ಬ್ಯಾಂಕಿನ ಅಧ್ಯಕ್ಷರಾಗಿದ್ದ ಪ್ರಕಾಶ ಮಲ್ಯ
ಬ್ಯಾಂಕಿನ ಸರ್ವತೋಮುಖ ಪ್ರಗತಿಯನ್ನು ಸಾಧಿಸುವಲ್ಲಿ ಯಶಸ್ವಿಯಾದರು. ಅವರು ಅಧಿಕಾರ
ವಹಿಸಿಕೊಳ್ಳುವ ಮೊದಲಿನ 3 ತಿಂಗಳ ಅವಧಿಯಲ್ಲಿ ನಷ್ಟ ಅನುಭವಿಸಿದ ಬ್ಯಾಂಕು, ನಂತರದ
ಮೂರೇ ತಿಂಗಳ ಅವಧಿಯಲ್ಲಿ 72.62 ಕೋಟಿ ರು. ಲಾಭ ಗಳಿಸುವಂತೆ ಅವರು ಮಾಡಿದ್ದರು.
ಮಾತ್ರವಲ್ಲ 2006 – 07ರಲ್ಲಿ ವಿಜಯ ಬ್ಯಾಂಕು 331 ಕೋಟಿ ರು. ಮತ್ತು 2007 –
08ರಲ್ಲಿ 361 ಕೋಟಿ ರು. ನಿವ್ವಳ ಲಾಭ ಗಳಿಸಿತ್ತು.
ಈ 2 ವರ್ಷಗಳಲ್ಲಿ ಬ್ಯಾಂಕಿನ ಒಟ್ಟು ವ್ಯವಹಾರ ಕೂಡ 44770 ಕೋಟಿ ರು.ಗಳಿಂದ 79971
ಕೋಟಿ ರು.ಗೆ ಏರಿತು. ಶಾಖೆಗಳ ಸಂಖ್ಯೆ 793ರಿಂದ 1051ಕ್ಕೆ, ಎ.ಟಿ.ಎಂ.ಗಳ ಸಂಖ್ಯೆ
128ರಿಂದ 272ಕ್ಕೆ ಹೆಚ್ಚಿದವು.
ಅವರ ಈ ಸಾಧನೆಗಳನ್ನು ಗಮನಿಸಿ ಪ್ರಶಸ್ತಿ ಆಯ್ಕೆ ಸಮಿತಿ ಅವರನ್ನು ಈ ಪ್ರಶಸ್ತಿಗೆ
ಆಯ್ಕೆ ಮಾಡಿದೆ.
ಮಲ್ಯ ಅವರು 1973ರಲ್ಲಿ ಕೆನರಾ ಬ್ಯಾಂಕಿನ ಅಧಿಕಾರಿಯಾಗಿ ಬ್ಯಾಂಕಿಂಗ್
ಕ್ಷೇತ್ರಕ್ಕೆ ಕಾಲಿಟ್ಟರು. ನಂತರ ಅವರು ಸಿಂಡಿಕೇಟ್ ಬ್ಯಾಂಕಿನ ಕಾರ್ಯಕಾರಿ
ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಪ್ರಸ್ತುತ ಪ್ರಸ್ತುತ ಲಕ್ಷ್ಮೀವಿಲಾಸ
ಬ್ಯಾಂಕಿನ ನಿರ್ದೇಶಕ, ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಶನಿನ ನಿರ್ದೇಶಕರೂ ಆಗಿದ್ದಾರೆ.
Discussion about this post