Read - 2 minutes
ಬೆಂಗಳೂರು. ಸೆ.13: ಕಾವೇರಿ ವಿವಾದದ ಹಿನ್ನೆಲೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆ, ನ್ಯಾಯಾಲಯದ ಆದೇಶ ಪಾಲಿಸಲು ಮತ್ತೆ ತಮಿಳುನಾಡಿಗೆ ನೀರು ಹರಿಸುವ ನಿರ್ಣಯ ಕೈಗೊಂಡಿದೆ.
ನಿನ್ನೆಯಿಂದ ಭುಗಿಲೆದ್ದಿದ್ದ ಹಿಂಸಾಚಾರದ ಹಿನ್ನೆಲೆಯಲ್ಲಿ ಇಂದು ತುರ್ತು ಸಚಿವ ಸಂಪುಟ ಸಭೆ ಕರೆಯಲಾಗಿತ್ತು. ಮತ್ತೊಮ್ಮೆ ಸುಪ್ರೀಂಕೋರ್ಟ್ ತೀರ್ಪುನಿಂದ ರಾಜ್ಯಕ್ಕೆ ಅನ್ಯಾಯವಾಗಿದ್ದು ತಮಿಳುನಾಡಿಗೆ ಕಾವೇರಿ ನೀರು ಹರಿಸದಿರಲು ಸಂಪುಟ ಸಭೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಲಾಗಿತ್ತು.
ಆದರೆ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಕ್ಕೂಟ ವ್ಯವಸ್ಥೆಯಲ್ಲಿ ಸಂವಿಧಾನಾತ್ಮಕವಾಗಿ ಆಯ್ಕೆಯಾದ ಸರ್ಕಾರ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಲು ಸಾಧ್ಯವಿಲ್ಲ. ನಮಗೆ ಅನ್ಯಾಯವಾಗಿದ್ದರು ನ್ಯಾಯಾಲಯ ಆದೇಶ ಪಾಲಿಸುತ್ತೇವೆ. ಹೀಗಾಗಿ ತಮಿಳುನಾಡಿಗೆ ನೀರು ಹರಿಸುತ್ತೇವೆ ಎಂದರು.
ನೀರು ಬಿಡುವುದರಿಂದ ಉದ್ರೇಕಕ್ಕೆ ಒಳಗಾಗಿ ಯಾರಾದರು ಗಲಾಟೆ ಮಾಡಿದರೆ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ. ಕಾನೂನು ಸುವ್ಯವಸ್ಥೆ ಪರಿಸ್ಥಿತಿಯನ್ನು ಉಕ್ಕಿನ ಕೈಗಳಿಂದ ನಿಯಂತ್ರಿಸಲಾಗುವುದು ಎಂದು ಹೇಳಿದರು.
ಎರಡು ರಾಜ್ಯದ ಜನರು ಶಾಂತಿ ಕಾಪಾಡಿಕೊಳ್ಳಬೇಕು. ಇಲ್ಲಿರುವ ತಮಿಳರ ರಕ್ಷಣೆಗೆ ನಮ್ಮ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಅದೇ ರೀತಿ ತಮಿಳುನಾಡಿನಲ್ಲಿರುವ ಕನ್ನಡಿಗರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಅಲ್ಲಿನ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದೇನೆ. ಅವರು ಕೂಡ ನಮಗೆ ಪತ್ರ ಬರೆದಿದ್ದಾರೆ ಎಂದು ಹೇಳಿದರು.
ಮಾಧ್ಯಮಗಳು ಪ್ರಚೋದನಾತ್ಮಕ ದೃಶ್ಯಗಳನ್ನು ಪ್ರಸಾರ ಮಾಡಬಾರದು ಎಂದು ಮನವಿ ಮಾಡಿದರು.
ಸೆ.5ರಂದು ಸುಪ್ರೀಂಕೋರ್ಟ್ ನೀಡಿದ ತೀರ್ಪಿನಲ್ಲಿ 10 ದಿನ 15 ಸಾವಿರ ಕ್ಯೂಸೆಕ್ಸ್ ನಂತೆ 1.5 ಲಕ್ಷ ಕ್ಯೂಸೆಕ್ಸ್ ನೀರು ಬಿಡಬೇಕಾಗಿತ್ತು. ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲ ತೀರ್ಪಿನಿಂದ ಅನ್ಯಾಯವಾಗಿದೆ ಎಂದು ರಾಜ್ಯ ಸರ್ಕಾರ ಮತ್ತೆ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ನಿನ್ನೆ ನಮ್ಮ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪ್ರತಿದಿನ 12 ಸಾವಿರ ಕ್ಯೂಸೆಕ್ಸ್ ನಂತೆ 20ರವರೆಗೆ 1.68 ಲಕ್ಷ ಕ್ಯೂಸೆಕ್ಸ್ ನೀರು ಬಿಡಿ ಎಂದು ಆದೇಶಿಸಿದೆ. ಪರಿಷ್ಕೃತ ತೀರ್ಪಿನಿಂದ ರಾಜ್ಯ ಸರ್ಕಾರ 18 ಸಾವಿರ ಹೆಚ್ಚುವರಿ ನೀರನ್ನು ತಮಿಳುನಾಡಿಗೆ ನೀರು ಬಿಡಬೇಕಿದೆ. ಇದನ್ನು ಪಾಲಿಸಲು ಸಾಧ್ಯವೇ ಇಲ್ಲ. ಆದರೂ ಅನಿವಾರ್ಯವಾಗಿ ನೀರು ಹರಿಸುತ್ತಿದ್ದೇವೆ ಎಂದು ಹೇಳಿದರು.
ನಿನ್ನೆ ನೀರಾವರಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲೂ ಯಾವುದೇ ತೀರ್ಮಾನವಾಗಿಲ್ಲ. ಮತ್ತೆ ಸೆ.19ರಂದು ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಸೆ.20ರಂದು ಸುಪ್ರೀಂಕೋರ್ಟ್ ರಾಜ್ಯ ಸರ್ಕಾರದ ಅರ್ಜಿಯ ವಿಚಾರಣೆ ನಡೆಸಲಿದೆ. ಇಲ್ಲಿ ನಮ್ಮ ಕಾನೂನು ಹೋರಾಟ ಮುಂದುವರೆಯಲಿದೆ. ಅ.18ರಂದು ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ತಕರಾರು ಅರ್ಜಿಯ ವಿಚಾರಣೆ ನಡೆಯಲಿದೆ. ಅದನ್ನು ಗಮನದಲ್ಲಿ ಇಟ್ಟುಕೊಂಡು ಕಾವೇರಿ ನೀರು ಬಿಡುತ್ತಿದ್ದೇವೆ ಎಂದು ಹೇಳಿದರು.
ಇದಕ್ಕೂ ಮುನ್ನ ಬೆಳಗ್ಗೆ ಸಿಎಂ ರಾಜೀನಾಮೆಗೆ ಮುಂದಾಗಲಿದ್ದಾರೆ, ಆದರೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡತೊಡಗಿತು. ತಕ್ಷಣ ಹಿರಿಯ ನಾಯಕರು ನ್ಯಾಯಾಲಯದ ಆದೇಶ ಉಲ್ಲಂಘನೆ ಮತ್ತು ರಾಜೀನಾಮೆಯಂತಹ ಕಟು ನಿರ್ಧಾರಗಳು ಬೇಡ ಎಂದು ಸಲಹೆ ಒತ್ತಡಗಳ ಮೂಲಕ ಸಮಾಧಾನಿಸಿದರು. ಹೀಗಾಗಿ ಸಿಎಂ ರಾಜೀನಾಮೆ ಪ್ರಹಸನ ಸಂಜೆ ವೇಳೆಗೆ ಸುಳ್ಳಾಯಿತು.
ಪ್ರಧಾನಿಯತ್ತ ಸಿಎಂ ಚಿತ್ತ!
ಕಾವೇರಿ ವಿವಾದದಲ್ಲಿ ರಾಜ್ಯ ಸರ್ಕಾರ ರಾಜಕೀಯವಾಗಿಯೂ ಯೋಚಿಸಬೇಕು ಎಂದು ಕಾಂಗ್ರೆಸ್ನ ಹಿರಿಯ ನಾಯಕರು ಸಲಹೆ ನೀಡಿದ ಬೆನ್ನಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮಧ್ಯಸ್ಥಿಕೆ ವಹಿಸಲು ಆಗ್ರಹಿಸಲು ಮುಂದಾಗಿದ್ದಾರೆ.
ರಾಜ್ಯದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್ ಇಂದು ಪ್ರಧಾನ ಮಂತ್ರಿ ಕಚೇರಿಗೆ ಮನವಿ ಸಲ್ಲಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿಗೆ ಸಮಯ ನೀಡುವವಂತೆ ಮನವಿ ಮಾಡಿದ್ದಾರೆ. ಬಹುತೇಕ ನಾಳೆ ಪ್ರಧಾನಿ ಕಚೇರಿಯಿಂದ ಸಮಯ ಸಿಗುವ ನಿರೀಕ್ಷೆ ಇದೆ.
ಕಾವೇರಿ ವಿವಾದದಲ್ಲಿ ಮಧ್ಯ ಪ್ರವೇಶಿಸಬೇಕು. ತಮಿಳುನಾಡು ಮತ್ತು ಕರ್ನಾಟಕದ ಮಖ್ಯಮಂತ್ರಿಗಳ ಸಭೆ ನಡೆಸಿ ಸಂಧಾನ ನಡೆಸಬೇಕು. ಕರ್ನಾಟಕಕ್ಕೆ ನ್ಯಾಯ ಕೊಡಿಸಬೇಕು ಎಂದು ಪ್ರಧಾನಿ ಅವರಲ್ಲಿ ಮನವಿ ಮಾಡುತ್ತೇನೆ. ನಾಳೆ ನಾನೊಬ್ಬನೆ ಪ್ರಧಾನಿ ಅವರನ್ನು ಭೇಟಿ ಮಾಡುತ್ತಿರುವುದಾಗಿ ಸಿದ್ದರಾಮಯ್ಯ ಇಂದು ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ರಕ್ಷಣೆಗೆ ನಮ್ಮ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಯಾವುದೇ ರೀತಿಯಲ್ಲೂ ವಿಫಲವಾಗಿಲ್ಲ ಎಂದು ಸಮರ್ಥಿಸಿಕೊಂಡರು.
ಪ್ರಧಾನಿ ಸಲಹೆ:
ಕಾವೇರಿ ಹಿಂಸಾಚಾರದಿಂದ ತೀವ್ರ ನೋವಾಗಿದ್ದು, ಯಾವುದೇ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕೆಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.
ಕಾವೇರಿ ಹಿಂಸಾಚಾರ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ, ಹಿಂಸೆಯಿಂದ ಪರಿಹಾರ ಸಿಗಲ್ಲ, ಮಾತುಕತೆ ಮೂಲಕ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಮನವಿ ಮಾಡಿದರು.
ಕಾವೇರಿ ವಿಚಾರದಲ್ಲಿ ಪ್ರಧಾನಿ ಮೋದಿ ಅವರ ಮಧ್ಯಸ್ಥಿಕೆ ವಹಿಸುವಂತೆ ಒತ್ತಾಯ ಕೇಳಿಬರುತ್ತಿದ್ದ ಬೆನ್ನಲ್ಲೇ ಪ್ರಧಾನಿ ಅವರು ಈ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಆದರೆ ಮಧ್ಯಪ್ರವೇಶ ವಹಿಸುವ ಬಗ್ಗೆಯೂ ಪ್ರಧಾನಿ ಆಸಕ್ತಿ ತೋರಿಸಿಯೂ ಇಲ್ಲ, ಬದಲಾಗಿ ಎರಡೂ ರಾಜ್ಯದ ಮುಖ್ಯಮಂತ್ರಿ ಸಭೆ ನಡೆಸಿ, ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸಲಹೆ ಮಾತ್ರ ನೀಡಿದ್ದಾರೆ.
ತಾಳ್ಮೆ ಇರಲಿ:
ತಾಳ್ಮೆ ಇರಬೇಕು, ತಾಳ್ಮೆ ಕಳೆದುಕೊಂಡರೆ ಅನಾಹುತ ಗ್ಯಾರಂಟಿ ಹೀಗಾಗಿ ಸ್ವಲ್ಪ ವ್ಯವಧಾನವಿರಲಿ ಎಂಬುದು ಸಿಎಂ ಉವಾಚ. ಸುದ್ದಿಗೋಷ್ಠಿ ಮೊದಲು ಇದನ್ನು ಪತ್ರಕರ್ತರಿಗೆ ಕಿವಿಮಾತು ಹೇಳಿದ, ಮುಖ್ಯಮಂತ್ರಿ ಸಿದ್ದರಾಮಯ್ಯ ನಮಗೆ ಕಷ್ಟಕರ ಪರಿಸ್ಥಿತಿ ಇದ್ದರೂ ಸಹ, ಸಂವಿಧಾನ ಚೌಕಟ್ಟಿನಲ್ಲಿರುವ ಕಾರಣ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಥವಾ ತಿರಸ್ಕಾರ ಮಾಡದೇ ತಮಿಳುನಾಡಿಗೆ ನೀರು ಬಿಟ್ಟಿದ್ದೇವೆ ಎಂದು ವಿವರಣೆ ಆರಂಭಿಸಿದರು.
ನಿನ್ನೆಯ ಆದೇಶ ಕೊನೆಯ ಆದೇಶವಲ್ಲ, ಸೆ.20 ರಂದು ಮತ್ತೆ ವಿಚಾರಣೆಗೆ ಬರಲಿದ್ದು, ಸಮರ್ಥ ವಾದ ಮಂಡಿಸಲಿದ್ದೇವೆ ಎಂದು ಭರವಸೆ ನೀಡಿದರು.
ಕಾನೂನು ಸುವ್ಯವಸ್ಥೆ ಕೈಗೆತ್ತಿಕೊಂಡರೆ ಕಠಿಣ ಕ್ರಮ:
ಯಾರೇ ಆಗಲಿ ಕಾನೂನನ್ನು ಕೈಗೆತ್ತಿಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡದೇ, ಶಾಂತಿಯತವಾಗಿರಲು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನು ಕೆಲವೆಡೆ ಪರಿಸ್ಥಿತಿ ಸಹಜ ಸ್ಥಿತಿಯತ್ತ ಮರಳಿದ್ದು, ಕರ್ಫ್ಯೂ ಹಿಂಪಡೆಯುವ ಬಗ್ಗೆ ಆಯುಕ್ತರೇ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದರು.
ಪ್ರಚೋದನಕಾರಿ ದೃಶ್ಯ ತೋರಿಸಬೇಡಿ: ಸಿಎಂ ಕಿವಿಮಾತು
ಮಾಧ್ಯಮಗಳು ಪ್ರಚೋದನಕಾರಿ ದೃಶ್ಯ ತೋರಿಸದಂತೆ ಸಿಎಂ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ. ಸಣ್ಣ ಪುಟ್ಟ ಘಟನೆಯನ್ನೂ ದೃಶ್ಯ ಮಾಧ್ಯಮಗಳು ಬಿಂಬಿಸುವುದರಿಂದ ಹಿಂಸಾತ್ಮಕತೆಗೆ ತಿರುಗುವಂತೆ ಮಾಡುತ್ತದೆ, ಹಾಗೆಂದು ಮಾಧ್ಯಮಗಳು ಪ್ರಚೋದನಾತ್ಮಕತೆ ಮಾಡುತ್ತಿದ್ದಾರೆ ಎಂಬ ಅರ್ಥವಲ್ಲ, ಮಾಧ್ಯಮಗಳು ಸಾಕಷ್ಟು ಸಹಕರಿಸಿವೆ ಎಂದು ತಿಳಿಸಿದರು.
Discussion about this post