Read - < 1 minute
ಶಿವಮೊಗ್ಗ, ಸೆ. ೧೦: ನಿನ್ನೆ ರಾತ್ರಿ ಇಲ್ಲಿನ ಹರಕೆರೆಯಲ್ಲಿ ಗಣಪತಿ ವಿಸರ್ಜನೆಯ ಮೊದಲು ನಡೆದ ಮೆರವಣಿಗೆಯ ವೇಳೆ ಕಿಡಿಗೇಡಿಗಳ ಗುಂಪೊಂದು ಕಲ್ಲು ತೂರಾಟ ನಡೆಸಿದ್ದರಿಂದ ೭ ಜನರಿಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರನ್ನು ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ನಿನ್ನೆ ಸಂಜೆ ಸುಮಾರು ೮:೧೫ರ ರ ವೇಳೆಗೆ ಹರಕೆರೆಯ ನಂದಿಬಸವೇಶ್ವರ ಯುವಕರ ವಿದ್ಯಾಗಣಪತಿ ಸಮಿತಿಯವರು ಪೂಜಿಸಿದ ಗಣಪತಿಯ ಮೆರವಣಿಗೆ ಸೇವಾಲಾಲ್ ವೃತ್ತದ ಬಳಿ ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಸುಮಾರು ೧೫ ರಿಂದ ೨೦ರಷ್ಟಿದ್ದ ಯುವಕರ ತಂಡವೊಂದು ಮೆರವಣಿಗೆಯ ದಾರಿಯಲ್ಲಿ ಅಡ್ಡ ನಿಂತು ಕಲ್ಲು ತೂರಾಟ ಆರಂಭಿಸಿದ್ದಲ್ಲದೆ ಮೆರವಣಿಗೆಯಲ್ಲಿದ್ದವರಿಗೆ ಅವಾಚ್ಯ ಶಬ್ದಗಳಿಂದ ಒಂದೇ ಸಮನೆ ನಿಂದಿಸಿದರೆನ್ನಲಾಗಿದೆ. ಜೊತೆಗೆ ಡೊಳ್ಳು ಬಾರಿಸುತ್ತಿದ್ದ ಯುವರಿಕಗೆ ಕಲ್ಲಿನಿಂದ ಹೊಡೆದರು. ಇದನ್ನು ಮೆರವಣಿಯೆಲ್ಲಿದ್ದ ಮೂಡಲಪ್ಪ ಮತ್ತಿತರರರು ಪ್ರಶ್ನಿಸಿದಾಗ ಅವರಿಗೆ ಕತ್ತಿಯಿಂದ ಕಡಿಯಲಾಗಿದೆ. ಮೂಡಲಪ್ಪ ಅವರ ಬೆರಳು ಮತ್ತು ತೊಡೆಗೆ ಗಾಯವಾಗಿದೆ.
ಇಷ್ಟೇ ಅಲ್ಲದೆ, ಅವಾಚ್ಯವಾಗಿ ಅವರನ್ನೂ ನಿಂದಿಸಲಾಗಿದೆ. ಹಬ್ಬ ಆಚರಿಸಿದ ಬ್ಗಗೆ ಕೆಟ್ಟದಾಗಿ ಬೈದರೆನ್ನಲಾಗಿದೆ. ಈ ವೇಳೆ ಮೆರವಣಿಯಲ್ಲಿದ್ದ ಪುಷ್ಟಾ, ಉಮಾ, ರತ್ನಮ್ಮ, ಗಿರೀಶ್ ಆವರು ಮೂಡಲಪ್ಪ ಪರ ನಿಂತಾಗ ಕಿಡಿಗೇಡಿಗಳು ಇನ್ನಷ್ಟು ವಾಗ್ವಾದ ನಡೆಸಿ ಗಲಾಟೆಗೆ ಮುಂದಾದರು. ಆದರೆ ಜನರು ಸೇರತೊಡಗಿದಾಗ ಅಲ್ಲಿಂದ ಕಾಲ್ಕಿತ್ತರೆಂದು ತುಂಗಾನಗರ ಠಾಣೆಗೆ ಈ ಸಂಬಂಧ ದೂರು ನೀಡಿರುವ ಚೇತನ್‌ಕುಮಾರ್ (೨೯) ಎನ್ನುವವರು ವಿವರಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಮಹಮ್ಮದ್ ರಫಿಕ್ (೨೦) ಹರೆಕೆರೆ ಎನ್ನುವವರೂ ಸಹ ಇನ್ನೊಂದು ದೂರು ನೀಡಿ, ಮೆರವಣಿಗೆ ವೇಳೆ ಇದ್ದಕ್ಕಿದ್ದಂತೆ ಕಲ್ಲು ತೂರಾಟ ಆರಂಭವಾಯಿತು. ಸುಮಾರು ೭ರಿಂದ ೧೦ ಜನರಿದ್ದ ಗುಂಪು ಈ ಕೃತ್ಯ ಎಸಗಿದೆ. ತಾನು ಮೆರವಣಿಗೆಯನ್ನು ನಿಂತು ವೀಕ್ಷಿಸುತ್ತಿದ್ದ ವೇಳೆ ನಿನಗೇನು ಇಲ್ಲಿ ಕೆಲಸ ಎಂದು ಹೇಳಿ ನಿಂದಿಸಿ ಗಲ್ಲಕ್ಕೆ ಮತ್ತು ತೊಡೆಗೆ ರಾಡಿನಿಂದ ಹಲ್ಲೆ ನಡೆಸಿದ್ದಾರೆ. ಅವರಿಂದ ತಪ್ಪಿಸಿಕೊಂಡು ಬಂದು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿರುವುದಾಗಿ ಅವರು ವಿವರಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹರಕೆರೆಯಲ್ಲಿ ಹೆಚ್ಚಿನ ಬಂದೋಬಸ್ತ್ ಹಾಕಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠ ಅಭಿನವ್ ಖರೆ, ಹೆಚ್ಚುವರಿ ಎಸ್‌ಪಿ ವಿನ್ಸೆಂಟ್ ಶಾಂತಕುಮಾರ್, ಡಿವೈಎಸ್‌ಪಿ ಮಂಜುನಾಥ್ ಶೆಟ್ಟಿ, ಎಸ್‌ಐ ಸುಭಾಶ್ಚಂದ್ರ ಧಾವಿಸಿ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಕ್ರಮಕೈಗೊಂಡಿದ್ದಾರೆ.
ನಿನ್ನೆ ರಾತ್ರಿ ನಡೆದ ಕಿಡಿಗೇಡಿ ಕೃತ್ಯದ ವೇಳೆ ಮುಕ್ತಿಯಾರ್, ನವೀದ್, ಆಫ್ರೀದಿ, ಸಕ್ಲೇನ್, ತೌಫಿಕ್, ಇಮ್ರಾನ್, ಸಮೀರ್, ಮುಕ್ತಾರ್, ನಾಸೀರ್, ಮತ್ತು ಅಂಜುಂ ಸೇರದಿದಂತೆ ೧೫ರಿಂದ ೨೯ರಷ್ಟು ಯುವಕರಿದ್ದರು ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿ ನಾಸಿಮ್ ಮತ್ತು ಜಾಫರ್ ಎನ್ನುವವರನ್ನು ಬಂಧಿಸಲಾಗಿದೆ. ಗಾಯಗೊಂಡ ಮೂಡಲಪ್ಪ, ಚೇತನ್‌ಕುಮಾರ್, ಪುಷ್ಟಾ, ಉಮಾ, ರತ್ನಮ್ಮಾ, ಗಿರೀಶ್ ಮತ್ತು ರಫೀಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Discussion about this post