ಬೆಂಗಳೂರು, ಸೆ.7: ಅಮೃತವನ್ನು ಕೊಡುವ ಗೋವಿಗೆ ನಾವು ಪ್ಲಾಸ್ಟಿಕ್ ರೂಪದ ವಿಷವನ್ನು ಕೊಡಬಾರದು, ಮಾನವರಿಗೆ ಮಾತ್ರ ಬದುಕುವ ಹಕ್ಕಿದೆ ಎಂಬುದರಲ್ಲಿ ಅರ್ಥವಿಲ್ಲ. ಎಲ್ಲ ಜೀವಿಗಳಿಗೂ ಬದುಕುವ ಹಕ್ಕಿದೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.
ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿ ‘ಮರ್ನೆವಾಲಾ ಕ್ಯಾ ನಹಿ ಕಾಯೇಗಾ’ ಎಂಬ ಹಿಂದಿ ನುಡಿಗಟ್ಟನ್ನು ಉಲ್ಲೇಖಿಸಿ ಮಾತನಾಡಿದ ಶ್ರೀಗಳು, ಇಂದು ಕಾಡಿನ ನಾಶ, ಗೋಮಾಳ- ಕೆರೆಗಳ ಅತಿಕ್ರಮಣಗಳಿಂದಾಗಿ ಹಸುಗಳಿಗೆ ಮೇವು ಇಲ್ಲದಂತಾಗಿ, ತಿನ್ನಲು ಏನೂ ಇಲ್ಲದ ಅವು ಬೀದಿಬದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ವಸ್ತುಗಳನ್ನು ತಿನ್ನುತ್ತಿವೆ. ಪ್ಲಾಸ್ಟಿಕ್ ಜೀರ್ಣವಾಗದೆ, ಮಾರಣಾಂತಿಕೆ ನೋವಿನೊಂದಿಗೆ ಸಾವನ್ನಪ್ಪುತ್ತಿವೆ. ಹಾಗಾಗಿ ಗೋವುಗಳು ಸಂಚರಿಸುವ ಜಾಗಗಳನ್ನು ಪ್ಲಾಸ್ಟಿಕ್ ಮುಕ್ತವಾಗಿಸುವುದು ಅನಿವಾರ್ಯವಾಗಿದೆ ಎಂದರು.
ಪ್ಲಾಸ್ಟಿಕ್ ಕುರಿತು ಜಾಗೃತಿ ಮೂಡಿಸಲು ಹಾಗೂ ಗೋವು ಸಂಚರಿಸುವ ಜಾಗಗಳನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಕುರಿತು ಶ್ರೀರಾಮಚಂದ್ರಾಪುರಮಠವು ಬೃಹತ್ ಆಂದೋಲನವನ್ನು ಹಂಬಿಕೊಂಡಿದ್ದು, ‘ಅಮೃತಪಥ’ ಎಂದು ಹೆಸರಿಸಲಾಗಿದೆ. ಗೋವಿನ ಬಗ್ಗೆ ಕಳಕಳಿ ಇರುವವರೆಲ್ಲರೂ ಈ ಆಂದೋಲನದಲ್ಲಿ ಭಾಗವಹಿಸಬಹುದಾಗಿದ್ದು, ಗೋವುಗಳಿಗೆ ಮೃತ್ಯುಪಥವಾಗಿರುವ ಪರಿಸರವನ್ನು ಅಮೃತಪಥವನ್ನಗಿಸಬೇಕಾಗಿದೆ. ಇದು ಸರ್ಕಾರದ ಕರ್ತವ್ಯವಾಗಿದ್ದು, ಸ್ವಚ್ಛಭಾರತ ಅಭಿಯಾನದಂತಹ ಯೋಜನೆಗಳನ್ನುಈ ದಿಶೆಯಲ್ಲಿ ಬಳಸಲು ಸರ್ಕಾರಗಳು ಗಮನ ಹರಿಸಬೇಕಾಗಿದೆ ಎಂದರು.
ಬೀದರ್ ಚಿದಂಬರಾಶ್ರಮದ ಷ. ಬ್ರ. ಶ್ರೀಶ್ರೀ ಶಿವಕುಮಾರ ಮಹಾಸ್ವಾಮಿಗಳು, ಸಂತಸಂದೇಶ ನೀಡಿ, ಗಂಗಾಮಾತಾ, ಗೋಮಾತಾ, ಗೀತಾಮಾತ ಹಾಗೂ ಭಾರತಮಾತಾ ನಮಗೆ ಪವಿತ್ರವಾಗಿದ್ದು, ನಮ್ಮ ಮಕ್ಕಳಿಗೆ ನಾವು ಸಂಸ್ಕಾರವನ್ನು ನೀಡದಿರುವ ಪರಿಣಾಮ ಅವರಿಗೆ ಇವುಗಳ ಬಗ್ಗೆ ಅರಿವಿಲ್ಲ ಎಂದು ವಿಷಾಧಿಸಿದ ಅವರು, ಶ್ರೀರಾಮಚಂದ್ರಾಪುರಮಠದ ಮಂಗಲ ಗೋಯಾತ್ರೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಕರೆ ನೀಡಿದರು.
ಕಲಾವಿದರಾಗಿ, ಕಲೆಗಳ ಮೂಲಕವೇ ಗೋಸೆವೆಯಲ್ಲಿ ತೊಡಗಿಕೊಂಡಿರುವ ಶ್ರೀಧರಹೊಳ್ಳ ದಂಪತಿಗಳು ಹಾಗೂ ಪಂಚಗವ್ಯ ಗುರುಕುಲಮ್ ನ ಆಚಾರ್ಯ ನಿರಂಜನ ವರ್ಮಾಜಿ ಅವರಿಗೆ ಪೂಜ್ಯ ಶ್ರೀಗಳು ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದರು. ಶ್ರೀಭಾರತೀಪ್ರಕಾಶನವು ಹೊರತಂದ ಋಗ್ವೇದ ಪಂಚ ಸೂಕ್ತ ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ದೃಶ್ಯ ಮುದ್ರಿಕೆಯನ್ನು ಸಾನ್ನಿಧ್ಯವಹಿಸಿದ್ದ ಸಂತರು ಲೋಕಾರ್ಪಣೆ ಮಾಡಿದರು. ಸಭಾಕಾರ್ಯಕ್ರಮದ ನಂತರ ಕಲಾರಾಮ ವೇದಿಕೆಯಲ್ಲಿ ಸುಬ್ರಹ್ಮಣ್ಯಂ ಅಕ್ಯಾಡಮಿ ಆಫ ಪರ್ಫಾರ್ಮಿಂಗ್ ಆರ್ಟ ವಿದ್ಯಾರ್ಥಿಗಳ ವಾಯೋಲಿನ್ ವಾದನ ನಡೆಯಿತು.
ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಪಂಚಗವ್ಯ ಗುರುಕುಲಮ್ ಇದರ ಸದಸ್ಯರು ಉಪಸ್ಥಿತರಿದ್ದು ಶ್ರೀಗಳಿಂದ ಆಶೀರ್ವಾದ ಪಡೆದರು. ಶ್ರೀಮಠದ ಪದಾಧಿಕಾರಿಗಳು, ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.
Discussion about this post