Read - < 1 minute
ನವದೆಹಲಿ, ಸೆ.14: ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ತಂದೆಗೇ ತಿರುಗೇಟು ನೀಡಿದ್ದಾರೆ. ಇದರೊಂದಿಗೆ ಉತ್ತರ ಪ್ರದೇಶದ ಆಡಳಿತಾರೂಢ ಪಕ್ಷದ ಕುಟುಂಬ ರಾಜಕೀಯ ಬಿಕ್ಕಟ್ಟು ಹೊಸ ಸ್ವರೂಪ ಪಡೆದಿದೆ.
ತಾವು ಹೊಂದಿದ್ದ ಪಕ್ಷದ ಮುಖ್ಯಸ್ಥ ಹುದ್ದೆಯನ್ನು ಸಹೋದರ ಶಿವಪಾಲ್ ಯಾದವ್ ಗೆ ಮುಲಾಯಂ ನೀಡಿದ ಕೆಲವೇ ಗಂಟೆಗಳಲ್ಲಿ ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಚಿಕ್ಕಪ್ಪನನ್ನು ಸಂಪುಟ ಹುದ್ದೆಯಿಂದ ಕಿತ್ತುಹಾಕಿದ್ದಾರೆ. ಶಿವಪಾಲ್ ಯಾದವ್ ಬಂಜರು ಭೂಮಿ ಅಭಿವೃದ್ಧಿ ಖಾತೆ ನಿರ್ವಹಿಸುತ್ತಿದ್ದರು.
ಶಿವಪಾಲ್ ಅವರ ಆತ್ಮೀಯ ವಲಯದ ದೀಪಕ್ ಸಿಂಘಾಲ್ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕಿತ್ತುಹಾಕಿದ ಬೆನ್ನಲ್ಲೇ ಶಿವಪಾಲ್ ಯಾದವ್ ಅವರ ಸ್ಥಾನಕ್ಕೂ ಚ್ಯುತಿ ಬಂದಿದೆ. ಶಿವಪಾಲ್ ಯಾದವ್ ಅವರಿಗೆ ನಿಷ್ಠರಾಗಿದ್ದ ಗಾಯತ್ರಿ ಪ್ರಜಾಪತಿ ಹಾಗೂ ರಾಜಕಿಶೋರ್ ಸಿಂಗ್ ಅವರನ್ನು ಸೋಮವಾರ ಅಖಿಲೇಶ್ ಸಂಪುಟದಿಂದ ಹೊರ ಹಾಕಿದ್ದರು.
ಸಂಪುಟದಿಂದ ಇಬ್ಬರನ್ನು ಪದಚ್ಯುತಗೊಳಿಸಿದ ಬೆನ್ನಲ್ಲೇ ಮುಲಾಯಂ ಸಿಂಗ್ ಯಾದವ್, ಶಿವಪಾಲ್ ಅವರನ್ನು ಪಕ್ಷದ ಉತ್ತರ ಪ್ರದೇಶ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಿದ್ದರು. ಕಳೆದ ಜೂನ್ ನಿಂದಲೇ ಪಕ್ಷದ ಕುಟುಂಬ ಕಲಹ ಮುಂದುವರಿಯುತ್ತಿದ್ದು, ಕ್ವಿಮ್ಜ್ ಏಕ್ತಾ ದಳ ಜತೆಗೆ ಮೈತ್ರಿ ಮಾಡಿಕೊಳ್ಳುವ ಶಿವಪಾಲ್ ಯಾದವ್ ಪ್ರಯತ್ನಕ್ಕೆ ಅಖಿಲೇಶ್ ತಡೆ ಒಡ್ಡಿದ್ದರು.
Discussion about this post