Read - < 1 minute
ನವದೆಹಲಿ, ಅ.13: ಜಮ್ಮುವಿನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ (ಐಐಎಂ) ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಜಮ್ಮುವಿನಲ್ಲಿ 62 ಕೋಟಿ ರೂ ವೆಚ್ಚದಲ್ಲಿ ಐಐಎಂ ಪ್ರಾರಂಭಿಸಲು ಸಮ್ಮತಿ ನೀಡಲಾಗಿದೆ. ಐಐಎಂ ಪ್ರಾರಂಭಕ್ಕೆ ಜಮ್ಮು ಸೊಸೈಟಿ ರೆಪ್ರೆಸೆಂಟೇಷನ್ ಕಾಯ್ದೆ 1860 ರ ಅಡಿಯಲ್ಲಿ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
2016 ರಿಂದ 2020 ರ ವರೆಗೆ ಜಮ್ಮುವಿನಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಹಳೆಯ ಕಟ್ಟಡದಲ್ಲಿ ಐಐಎಂ ತರಗತಿಗಳು ನಡೆಯಲಿವೆ. ನಂತರ ಜಮ್ಮುವಿನಲ್ಲಿ ನಿರ್ಮಾಣವಾಗಲಿರುವ ಪ್ರತ್ಯೇಕ ಕ್ಯಾಂಪಸ್ ನಲ್ಲಿ ಐಐಎಂ ಕಾರ್ಯನಿರ್ವಹಿಸಲಿವೆ. ಜಮ್ಮು-ಕಾಶ್ಮೀರಕ್ಕೆ ಪ್ರಧಾನಿ ನೀಡುವ ಅಭಿವೃದ್ಧಿ ಪ್ಯಾಕೇಜ್ ಅಡಿಯಲ್ಲಿ ಈ ಐಐಎಂ ಪ್ರಾರಂಭವಾಗಲಿದೆ. ಇದು ದೇಶದ 20 ನೆಯ ಐಐಎಂ ಆಗಿರಲಿದೆ.
2016-17 ನೇ ಸಾಲಿನಲ್ಲಿ ಮ್ಯಾನೇಜ್ ಮೆಂಟ್ ವಿಭಾಗದ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಗೆ 54 ವಿದ್ಯಾರ್ಥಿಗಳು ಪ್ರವೇಶ ಪಡೆಯುವ ನಿರೀಕ್ಷೆ ಇದ್ದು, 4 ನೇ ವರ್ಷದಲ್ಲಿ ವಿದ್ಯಾರ್ಥಿಗಳ ಸಂಖ್ಯೆ 120 ಕ್ಕೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಐಐಎಂ ಗಾಗಿ ಪ್ರತ್ಯೇಕ ಕ್ಯಾಂಪಸ್ ನಿರ್ಮಾಕ್ಕಾಗಿ ಯೋಜನಾ ವರದಿ ತಯಾರಿಸಲಾಗುತ್ತಿದ್ದು, ಸಂಬಂಧಪಟ್ಟ ಇಲಾಖೆಗೆ ಯೋಜನಾ ವರದಿ ಸಿದ್ಧವಾದ ನಂತರ ಕ್ಯಾಂಪಸ್ ನಿರ್ಮಾಣ ಕಾಮಗಾರಿ ಪ್ರಾರಂಭವಾಗಲಿದೆ.
Discussion about this post