ಬೆಂಗಳೂರು, ಸೆ,15: ಕಾವೇರಿ ವಿವಾದದಲ್ಲಿ ಸುಪ್ರೀಂಕೋರ್ಟ್ ಮತ್ತು ಮೇಲುಸ್ತುವಾರಿ ಸಮಿತಿ ತೀರ್ಪು ನೀಡುವ ಮೊದಲು ಕಾವೇರಿ ನದಿ ಪಾತ್ರದ ಜಲಾಶಯಗಳ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿಕೊಳ್ಳಬೇಕು ಎಂದು ಕಾನೂನು ತಜ್ಞರು ಸಲಹೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ನಿವೃತ್ತ ನ್ಯಾಯಾಧೀಶರು, ಮಾಜಿ ಅಡ್ವೋಕೇಟ್ ಜನರಲ್ ಗಳ ಜತೆ ಕಾವೇರಿ ನದಿ ವಿವಾದದ ಕಾನೂನು ಸಮರದ ಬಗ್ಗೆ ಮಹತ್ವದ ಚರ್ಚೆ ನಡೆಸಿದರು.
ಇದೇ 19ರಂದು ಕಾವೇರಿ ಮೇಲುಸ್ತುವಾರಿ ಸಮಿತಿಯ ಸಭೆ ನಡೆಯಲಿದೆ. 20ರಂದು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ. ಈ ಎರಡೂ ಸಂದರ್ಭಗಳಲ್ಲಿ ತೀರ್ಪು ಪ್ರಕಟಗೊಳ್ಳುವ ಮುನ್ನ ಜಲಾಶಯಗಳಲ್ಲಿ ಎಷ್ಟು ನೀರಿದೆ, ಕರ್ನಾಟಕಕ್ಕೆ ಅಗತ್ಯವಿರುವ ನೀರಿನ ಬೇಡಿಕೆ ಎಷ್ಟು, ತಮಿಳುನಾಡಿಗೆ ಎಷ್ಟು ನೀರು ಬಿಡಲಾಗಿದೆ ಮತ್ತು ಅಲ್ಲಿನ ಜಲಾಶಯಗಳ ಸ್ಥಿತಿಗತಿಗಳೇನು ಎಂಬ ಬಗ್ಗೆ ತಜ್ಞರ ಸಮಿತಿ ವಾಸ್ತವಾಂಶದ ಅಧ್ಯಯನ ನಡೆಸಬೇಕು. ಅನಂತರ ತೀರ್ಪು ನೀಡುವುದು ಸೂಕ್ತ ಎಂಬ ಪ್ರತಿಪಾದನೆಯನ್ನು ರಾಜ್ಯ ಸರ್ಕಾರ ಮಾಡಲಿ. ಇಲ್ಲದೇ ಹೋದರೆ ಮತ್ತೆ ಸುಪ್ರೀಂಕೋರ್ಟ್ ತಮಿಳುನಾಡಿಗೆ ಕಾವೇರಿ ನೀರು ಬಿಡಿ ಎಂದು ಆದೇಶ ನೀಡುವ ಸಾಧ್ಯತೆ ಇದೆ ಎಂದು ಹಿರಿಯ ನಿವೃತ್ತ ನ್ಯಾಯಾಧೀಶರು ಸಲಹೆ ನೀಡಿದ್ದಾರೆ.
ಸೆ.5ರ ತೀರ್ಪುನ ಮೇಲ್ಮನವಿ ಸಲ್ಲಿಸಿದ ಮೇಲೆ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಪ್ರಸ್ತಾಪಿಸಿದ್ದು, ಸರಿಯೇ, ತಪ್ಪೇ ಎಂದು ಮುಖ್ಯಮಂತ್ರಿಯವರು ನ್ಯಾಯಾಧೀಶರ ಅಭಿಪ್ರಾಯ ಕೇಳಿದ್ದಾರೆ.
ತಮಿಳುನಾಡಿಗೆ ನೀರು ಬಿಡಿಸುವುದು ಮೂಲ ಉದ್ದೇಶವಾಗಿತ್ತು. ಹೀಗಾಗಿ ಪ್ರತಿವಾದಿಯ ಯಾವುದಾದರು ಒಂದು ಲೋಪವನ್ನು ಎತ್ತಿ ಹಿಡಿದು ತೀರ್ಪು ನೀಡುವುದು ಸಾಮಾನ್ಯ, ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ ಎಂದು ಮೇಲ್ಮನವಿಯಲ್ಲಿ ಹೇಳಿರುವುದರಲ್ಲಿ ತಪ್ಪಿಲ್ಲ ಎಂದು ಅಭಿಪ್ರಾಯ ಕೇಳಿ ಬಂದಿದೆ.
ತಮಿಳುನಾಡಿಗೆ ನೀರು ಬಿಡುವುದು ಮೂಲ ಉದ್ದೇಶವಿದ್ದಂತೆ ಕಾಣುತ್ತಿದೆ. ಹಾಗಾಗಿ ಸೆ.5ರ ಆದೇಶದಲ್ಲಿ ರಿಯಾಯ್ತಿ ನೀಡುವ ಬದಲು 18 ಸಾವಿರ ಕ್ಯೂಸೆಕ್ ಹೆಚ್ಚುವರಿ ನೀರು ಬಿಡುವಂತೆ ಮಾರ್ಪಡಿತ ಆದೇಶದಲ್ಲಿ ಸೂಚಿಸಲಾಗಿದೆ.
ಸೆ.18ರ ವಿಚಾರಣೆಯಲ್ಲಿ ಮತ್ತೊಮ್ಮೆ ಇನ್ನಷ್ಟು ಹೆಚ್ಚು ನೀರು ಬಿಡಿ ಎಂದು ಸೂಚಿಸುವ ಸಾಧ್ಯತೆಗಳಿವೆ. ರಾಜ್ಯ ಸರ್ಕಾರ ಇದಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಂಭವನೀಯ ವ್ಯತಿರಿಕ್ತ ತೀರ್ಪನ್ನು ತಪ್ಪಿಸಲು ರಾಜ್ಯ ಸರ್ಕಾರ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಕಾನೂನು ತಜ್ಞರು ಸಲಹೆ ನೀಡಿದ್ದು, ಯಾವ ಯಾವ ಅಂಶಗಳನ್ನು ವಾದಿಸಬೇಕು ಎಂಬ ತಾಂತ್ರಿಕ ಮಾಹಿತಿಗಳನ್ನೂ ನೀಡಿದ್ದಾರೆ.
ರಾಜ್ಯ ಸರ್ಕಾರ ಈವರೆಗೂ ನಡೆಸಿದ ಕಾನೂನು ಹೋರಾಟದ ಬಗ್ಗೆ ಸಭೆಯಲ್ಲಿ ಮೆಚ್ಚುಗೆ ಕೇಳಿಬಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಆದರೆ, ತೀರ್ಪುನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂಬ ಅಸಮಾಧಾನವೂ ವ್ಯಕ್ತವಾಗಿದೆ.
ಕಾವೇರಿ ವಿವಾದದಲ್ಲಿ ನ್ಯಾಯಾಲಯದ ತೀರ್ಪುನ ಹೊರತಾಗಿಯೂ ಪ್ರಧಾನ ಮಂತ್ರಿ ಮಧ್ಯಪ್ರವೇಶಿಸಿ ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥ ಪಡಿಸಲು ಕಾನೂನಿನಲ್ಲಿ ಅವಕಾಶವಿದೆ. ಇದಕ್ಕೆ ಅಗತ್ಯವಾದ ರಾಜಕೀಯ ಒತ್ತಡ ಹೇರಲು ಕ್ರಮ ಕೈಗೊಳ್ಳಬೇಕೆಂದು ಕಾನೂನು ತಜ್ಞರು ಸಲಹೆ ಮಾಡಿದ್ದಾರೆ.
ರಾಜ್ಯ ಸರ್ಕಾರ ಈವರೆಗೂ ಎಷ್ಟು ನೀರು ಬಿಟ್ಟಿದೆ, ಯಾವ ರೀತಿಯ ವಾದಗಳನ್ನು ಮಂಡಿಸಿದೆ, ತೀರ್ಪುನಿಂದ ರಾಜ್ಯಕ್ಕಾಗಿರುವ ನಷ್ಟ ಎಷ್ಟು ಎಂಬ ಮಾಹಿತಿಯನ್ನು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಸಭೆಯಲ್ಲಿ ವಿವರಿಸಿದ್ದಾರೆ.
ಅಗತ್ಯಬಿದ್ದರೆ ಮತ್ತೊಮ್ಮೆ ಕಾನೂನು ತಜ್ಞರ ಸಭೆ ಕರೆದು ಚರ್ಚಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.
ತಮಿಳುನಾಡು ಈಗಾಗಲೇ ಒಂದು ಸಾಂಬಾ ಬೆಳೆಯನ್ನು ಕೊಯ್ಲು ಮಾಡಿ ಮುಂದೆ ಬೆಳೆಯುವ ಎರಡನೇ ಸಾಂಬಾ ಬೆಳೆಗೆ ನೀರು ಕೇಳುತ್ತಿದೆ. ಆದರೆ, ಕರ್ನಾಟಕದಲ್ಲಿ ಕುಡಿಯುವ ನೀರಿನ ಅಗತ್ಯದ ಜತೆಗೆ ಮತ್ತು ಈಗ ಬೆಳೆದು ನಿಂತಿರುವ ರೈತರ ಬೆಳೆಗೆ ನೀರು ಕೇಳಲಾಗುತ್ತಿದೆ. ತಮಿಳುನಾಡು ಭವಿಷ್ಯದ ಲಾಭಗಳ ಬಗ್ಗೆ ಆಲೋಚಿಸುತ್ತಿರುವ ಕುರಿತು ಸುಪ್ರೀಂಕೋರ್ಟ್ ಹಾಗೂ ಕಾವೇರಿ ಮೇಲುಸ್ತುವಾರಿ ಸಮಿತಿಗೆ ಮನವರಿಕೆ ಮಾಡಿಕೊಡಬೇಕೆಂದು ನಿವೃತ್ತ ನ್ಯಾಯಾಧೀಶರು ತಿಳಿಸಿದ್ದಾರೆ.
ಕಾವೇರಿ ನೀರನ್ನು ನಿಲ್ಲಿಸುವುದರಿಂದ ಆಗಬಹುದಾದ ಸಾಧಕ-ಬಾಧಕಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಯಾವುದೇ ಕಾರಣಕ್ಕೂ ಅಂತಹ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ, ಒಕ್ಕೂಟ ವ್ಯವಸ್ಥೆಯಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ಧಿಕ್ಕಿರಿಸಿ ನೀರು ನಿಲ್ಲಿಸಿದರೆ ರಾಜ್ಯ ಸರ್ಕಾರದ ಮೇಲೆ ನ್ಯಾಯಾಂಗ ನಿಂದನೆಯ ಆರೋಪ ಬರುತ್ತದೆ. ಜಲಾಶಯಗಳನ್ನು ಕೇಂದ್ರ ಸರ್ಕಾರ ತನ್ನ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಇನ್ನೂ ಮುಂದುವರೆದು ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಅವಕಾಶವಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ನೈತಿಕ ಶಕ್ತಿ:
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಇಂದಿನ ಸಭೆಯಲ್ಲಿ ಕಾನೂನು ಹೋರಾಟದ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ. ನಿವೃತ್ತ ನ್ಯಾಯಾಧೀಶರು ಹಾಗೂ ಅಡ್ವೋಕೇಟ್ ಜನರಲ್ಗಳ ಸಲಹೆಗಳಿಂದ ನಮ್ಮ ಹೋರಾಟಕ್ಕೆ ನೈತಿಕ ಶಕ್ತಿ ಹೆಚ್ಚಾಗಿದೆ. ಬಹಳಷ್ಟು ಉತ್ತಮ ಸಲಹೆಗಳು ಬಂದಿವೆ ಎಂದು ಹೇಳಿದರು.
ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ರಾಜ್ಯದ ಹಿತದೃಷ್ಟಿಯಿಂದ ಬೆಂಗಳೂರು, ಮೈಸೂರು ಮತ್ತು 600 ಹಳ್ಳಿಗಳ ಕುಡಿಯುವ ನೀರು ಪೂರೈಕೆಯನ್ನು ಗಮನದಲ್ಲಿಟ್ಟುಕೊಂಡು ಇಂದು ಚರ್ಚೆ ನಡೆಸಲಾಗಿದೆ. ನಾವು ವಾಸ್ತವ ಚಿತ್ರಣವನ್ನು ತಿಳಿಸಿದ್ದೇವೆ. ಕಾನೂನು ತಜ್ಞರ ಸಲಹೆಗಳನ್ನು ಚಾಚೂತಪ್ಪದೆ ಅಳವಡಿಸಿಕೊಂಡು ಮುಂದೆ ಕಾನೂನು ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಹೇಳಿದರು.
ನಿವೃತ್ತ ನ್ಯಾಯಮೂರ್ತಿಗಳಾದ ರಾಮಾಜೋಯಿಸ್, ಎ.ಜೆ. ಸದಾಶಿವ, ವಿಶ್ವನಾಥ ಶೆಟ್ಟಿ, ರಾಜೇಂದ್ರಬಾಬು, ಎನ್.ಕುಮಾರ್, ಮಾಜಿ ಅಡ್ವೋಕೇಟ್ ಜನರಲ್ಗಳಾದ ಬಿ.ವಿ.ಆಚಾರ್ಯ, ಅಶೋಕ್ ಹಾರ್ನಳ್ಳಿ, ಪ್ರೊ.ರವಿವರ್ಮಕುಮಾರ್, ಹಾಲಿ ಅಡ್ವೋಕೇಟ್ ಜನರಲ್ ಮಧುಸೂಧನ್ ನಾಯಕ್, ಸುಪ್ರೀಂಕೋರ್ಟ್ ವಕೀಲ ಮೋಹನಕಾತರಕಿ, ಸರ್ಕಾರದ ಮುಖ್ಯಕಾರ್ಯದರ್ಶಿ ಅರವಿಂದ ಜಾಧವ್, ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ಸಿಂಗ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
Discussion about this post