ಬೆಂಗಳೂರು, ಸೆ.7: ರಾಜ್ಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ವಿಧಾನಮಂಡಲ ಅಧಿವೇಶನದಲ್ಲಿ ಶಾಸಕರು ಪ್ರಸ್ತಾಪಿಸದಿದ್ದರೆ, ಸ್ವಯಂಪ್ರೇರಿತವಾಗಿ ಅಂತಹ ಸಮಸ್ಯೆಗಳ ಕುರಿತು ಚರ್ಚೆಯನ್ನು ಕೈಗೆತ್ತಿಕೊಳ್ಳುವುದಾಗಿ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ್ ಹೇಳಿದ್ದಾರೆ.
ಇಂದಿಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಅವರು,ಈ ವಿಷಯ ತಿಳಿಸಿದರಲ್ಲದೆ,ಪ್ರಚಾರದ ಗೀಳಿಗೆ ಬಿದ್ದು ಟಿವಿ,ಪೇಪರುಗಳಲ್ಲಿ ಬಂದ ವಿಷಯವನ್ನೇ ಕೈಗೆತ್ತಿಕೊಂಡು ಚರ್ಚೆಸುವ ಕೆಲಸ ನಡೆಯುತ್ತಿದೆ.ಇದಕ್ಕೆ ತಡೆ ಬೀಳಲೇಬೇಕು ಎಂದು ಹೇಳಿದರು.
ಇದಕ್ಕಾಗಿ ವಿಧಾನಮಂಡಲ ತಡೆರಹಿತವಾಗಿ ನಡೆಯಬೇಕು ಎಂಬ ಕಾರಣಕ್ಕಾಗಿ ಕಲಾಪ ನಿಯಮಾವಳಿ ಸಮಿತಿ ರಚನೆಯಾಗಿದ್ದು ಇನ್ನು ಮುಂದೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯ ತನಕ ಕಲಾಪ ನಡೆಯಲೇಬೇಕು.ಒಂದು ವೇಳೆ ಧರಣಿ ಸೇರಿದಂತೆ ಯಾವುದೇ ಬಗೆಯಲ್ಲಿ ಕಲಾಪಕ್ಕೆ ಅಡ್ಡಿ ಮಾಡಲು ಯತ್ನಿಸಿದರೆ ಅಂತಹ ಶಾಸಕರನ್ನು ನಿರ್ದಾಕ್ಷಿಣ್ಯವಾಗಿ ಸದನದಿಂದ ಹೊರಹಾಕುವುದಾಗಿ ಅವರು ಹೇಳಿದರು.
ಇತ್ತೀಚಿನ ದಿನಗಳಲ್ಲಿ ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರತಿಂಬಿಸುವ ಪ್ರಶ್ನೋತ್ತರ ಕಲಾಪ ಸರಿಯಾಗಿ ನಡೆಯುತ್ತಿಲ್ಲ. ಬದಲಿಗೆ ನಿಲುವಳಿ ಸೂಚನೆ ತಂದು ಆನಂತರ ಧರಣಿ ಶುರು ಮಾಡಿ ಇಡೀ ಕಲಾಪವೇ ನಡೆಯದಂತೆ ಮಾಡಲಾಗುತ್ತಿದೆ.
ಒಬ್ಬ ವ್ಯಕ್ತಿ ತೀರಿಕೊಂಡರು ಎಂಬ ಸಣ್ಣ ಘಟನೆಯನ್ನು ಹಿಡಿದುಕೊಂಡು ಧರಣಿ ನಡೆಸಿದ ಫಲವಾಗಿ 1.74 ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಚರ್ಚೆಯೇ ಇಲ್ಲದೆ ಅಂಗೀಕಾರವಾಯಿತು.ಹನ್ನೊಂದು ಮಹತ್ವದ ಬಿಲ್ಲುಗಳು ಅಂಗೀಕಾರ ಪಡೆದವು ಎಂದು ವಿಷಾದಿಸಿದರು.
ಇದು ನಿಲ್ಲಬೇಕು. ಇನ್ನು ಮುಂದೆ ನಿಲುವಳಿ ಸೂಚನೆ ಮಂಡಿಸಲು ಮಧ್ಯಾಹ್ನ 3 ಗಂಟೆಯ ನಂತರವೇ ಅವಕಾಶ ನೀಡಲಾಗುವುದು ಎಂದ ಅವರು, ತದ ನಂತರ ಬೇಕಿದ್ದರೆ ನಡು ರಾತ್ರಿ 12 ಗಂಟೆಯವರೆಗೆ ಚರ್ಚೆ ನಡೆಯಲಿ.ಆದರೆ ದಿನಕ್ಕೆ ಕನಿಷ್ಟ ನಾಲ್ಕು ಗಂಟೆಗಳ ಕಾಲ ಕಲಾಪ ನಡೆಯಲೇಬೇಕು ಎಂದರು.
ಜೈಲಿಗೆ ಕಳಿಸಲು ಶಿಫಾರಸು
ಕೆರೆ ಒತ್ತುವರಿ ಹಾಗೂ ರಾಜಾಕಾಲುವೆ ಒತ್ತುವರಿಗೆ ಕಾರಣರಾದ ಭೂ ಮಾಫಿಯಾದವರು, ಬಿಲ್ಡರುಗಳು ಹಾಗೂ ಇದಕ್ಕೆ ಅವಕಾಶ ಮಾಡಿಕೊಟ್ಟಿರುವ ಅಧಿಕಾರಿಗಳನ್ನು ಬಿಡುವುದಿಲ್ಲ. ಬದಲಿಗೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ನಿಶ್ಛಿತ ಎಂದರು.
Discussion about this post