ಬೆಂಗಳೂರು, ಸೆ.21: ಕಾವೇರಿ ವಿಚಾರದಲ್ಲಿ ರಾಜ್ಯಸರ್ಕಾರ ಕಠಿಣ ನಿರ್ಧಾರ ತಳೆದಿದ್ದು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡದಿರಲು ನಿರ್ಧರಿಸಿದೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ನಡೆದ ಮಂತ್ರಿಪರಿಷತ್ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗಿದ್ದು, ಈ ಕುರಿತಂತೆ ಸರ್ಕಾರ ಯಾವುದೇ ರೀತಿಯ ಅಧಿಕೃತ ಹೇಳಿಕೆ ನೀಡಿಲ್ಲ.
ಸಭೆಯಲ್ಲಿದ್ದ ಬಹುತೇಕ ಸಚಿವರ ನೀರು ಬಿಡುಗಡೆಗೆ ನಿರಾಕರಿಸುವಂತೆ ಒತ್ತಾಯಿಸಿದ್ದರು.
ಕೆಆರ್‌ಎಸ್‌ನಲ್ಲಿ ಈಗಾಗಲೇ ಕಾವೇರಿ ನೀರು ತಳಮಟ್ಟದಲ್ಲಿದೆ. ರಾಜ್ಯದ ಜನತೆಗೆ ಕುಡಿಯಲೂ ನೀರಿಲ್ಲ ಎಂಬ ಸ್ಥಿತಿ ಬಂದೊದಗಲಿದೆ. ನ್ಯಾಯಾಲಯದ ಆದೇಶದ ವಿರುದ್ಧ ಹಾಗೂ ಈ ವಿವಾದದ ವಿಚಾರದಲ್ಲಿ ಸರ್ಕಾರದ ನಡೆಯ ಕುರಿತು ಕಾವೇರಿ ಕೊಳ್ಳ ಹಾಗೂ ನಾಡಿನಾದ್ಯಂತ ಪ್ರತಿಭಟನೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ನೀರು ಬಿಡುಗಡೆ ಬೇಡ ಎಂಬ ಒತ್ತಾಯ ಹೆಚ್ಚಾಗಿತ್ತು ಎನ್ನಲಾಗಿದೆ.
ಸಭೆಯಲ್ಲಿದ್ದ ಕಾನೂನು ಸಚಿವ ಟಿ.ಬಿ. ಜಯಚಂದ್ರ, ನ್ಯಾ. ಲಲಿತ್ ಉದಯ್ ಮತ್ತೊಂದು ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ್ದಾರೆ. ಅದರಂತೆ,ಅನುಷ್ಠಾನ ಮಾಡಲು ಸಾಧ್ಯವಾಗದೇ ಇರುವ ತೀರ್ಪನ್ನ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆಯಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ನೀರು ಬಿಡಬೇಡಿ: ದೇವೇಗೌಡ
ಸುಪ್ರೀಮ್ ಕೋರ್ಟ್ ಆದೇಶದಂತೆ, ತಮಿಳುನಾಡಿಗೆ ೪೨ ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಬಾರದು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಈ ವಿಚಾರದಲ್ಲಿ ಇಂತಹ ನಿರ್ಧಾರ ತೆಗೆದುಕೊಂಡರೆ, ಸರ್ಕಾರದ ಜೊತೆಗೆ ಸದಾ ಇರುವುದಾಗಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭರವಸೆ ನೀಡಿದ್ದಾರೆ. ಈ ಕುರಿತು ಸುಮಾರು ೨೦ ನಿಮಿಷ ಮುಖ್ಯಮಂತ್ರಿ ಜೊತೆಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ.
Discussion about this post