Read - < 1 minute
ಚೆನ್ನೈ, ಅ.4: ತಮಿಳುನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾ ಅನಾರೋಗ್ಯದ ಹಿನ್ನೆಲೆಯಲ್ಲಿ ಜ್ಯೋತಿಷಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಜ್ಯೋತಿಷಿಯೊಬ್ಬರ ಪ್ರಕಾರ, 2014ರಿಂದಲೇ ಜಯಲಲಿತಾ ಅವರಿಗೆ ಆರೋಗ್ಯ ಸಮಸ್ಯೆ ಇದೆ. ಇತ್ತೀಚೆಗಿನ ಸಮಸ್ಯೆಗೆ ಆಹಾರ ಮತ್ತು ಔಷಧಗಳ ಅಡ್ಡ ಪರಿಣಾಮ ಕಾರಣವಂತೆ.
ಸದ್ಯಕ್ಕೆ ಅವರಿಗೆ ಗುರು ದೆಸೆ ಶನಿ ಭುಕ್ತಿ ನಡೆಯುತ್ತಿದೆ.ಆರನೇ ಮನೆಯ ಅಧಿಪತಿಯಾದ ಶನಿಯು ವೃಶ್ಚಿಕದಲ್ಲಿದ್ದಾನೆ. ಕಿಡ್ನಿ ಹಾಗೂ ಬ್ಲಾಡರ್ ಸಮಸ್ಯೆಯಾಗುತ್ತದೆ.ಗುರು ಬಾಧಕ ಸ್ಥಾನದಲ್ಲಿದ್ದು, ಈ ರೀತಿಯಲ್ಲಿದ್ದಾಗ ದೃಷ್ಟಿಯಾಗುತ್ತದೆ ಅಥವಾ ಫುಡ್ ಪಾಯಿಸನ್ ಆಗುತ್ತದೆ. ಆದರೆ ಲಗ್ನಾಧಿಪತಿ ಗುರು ಆಕೆಗೆ ಒಳ್ಳೆಯದನ್ನು ಮಾಡ್ತಾನೆ. ಯುವ ವೈದ್ಯರೊಬ್ಬರು ಅವರ ಸಹಾಯಕ್ಕೆ ಬರುತ್ತಾರೆ ಎಂದಿದ್ದಾರೆ.
ಸದ್ಯಕ್ಕೆ ಜಯಲಲಿತಾ ಅವರು ಗುಣಮುಖರಾದರೂ ಇನ್ನು ಎರಡು ವರ್ಷ ಚೆನ್ನಾಗಿರಬಹುದು. 2019ರ ನಂತರ ಮತ್ತೆ ಅರೋಗ್ಯ ಸಮಸ್ಯೆಗಳಾಗುತ್ತವೆ ಎಂದು ಆ ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ.ಇನ್ನು ಖಾಸಗಿ ತಮಿಳು ವಾಹಿನಿಗಳು ಕೂಡ ಜ್ಯೋತಿಷಿಗಳ ಸಂದರ್ಶನ ಮಾಡಿ, ಜಯಲಲಿತಾ ಅವರ ಆರೋಗ್ಯದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿವೆ. ಅದಕ್ಕೆ ಇಬ್ಬರು ಜ್ಯೋತಿಷಿಗಳು ಉತ್ತರಿಸಿದ್ದಾರೆ.
ಜಯಲಲಿತಾ ಅವರಿಗೆ ಶನಿ ಭುಕ್ತಿ ನಡೆಯುತ್ತಿದೆ. ಆದಷ್ಟು ಬೇಗ ವಾಪಸ್ ಬರುತ್ತಾರೆ. ಸದ್ಯದ ಪರಿಸ್ಥಿತಿ ಕೇವಲ ತಾತ್ಕಾಲಿಕ ಎಂದಿದ್ದಾರೆ.ಮತ್ತೊಬ್ಬ ಜ್ಯೋತಿಷಿ ಹೇಳಿರುವಂತೆ, ಜಯಲಲಿತಾ ಅವರು ದೇವರ ಮೊರೆ ಹೋಗಬೇಕು.ಮತ್ತು ಅ.10ರ ನಂತರ ಎಲ್ಲಾ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಇನ್ನು ಅಪೋಲೋ ಆಸ್ಪತ್ರೆ ಹೊರಭಾಗದಲ್ಲಿ ಅನೇಕರು ಪೂಜೆ, ಪುನಸ್ಕಾರಗಳನ್ನು ಮಾಡುತ್ತಾ ಜಯಲಲಿತಾ ಅವರ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದಾರೆ.ಇನ್ನೇನು ಮುಖ್ಯಮಂತ್ರಿ ಆಸ್ಪತ್ರೆಯಿಂದ ಬಿಡುಗಡೆ ಆಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದ್ದರೂ ಗ್ರಹಗಳ ಸ್ಥಿತಿ ಕೇಳಿಕೊಂಡು, ಶುಭ ದಿನದ ಬಗ್ಗೆ ವಿಚಾರಿಸಿದ ನಂತರವಷ್ಟೇ ಡಿಸ್ಚಾರ್ಜ್ ಎನ್ನುತ್ತಿವೆ ಮೂಲಗಳು.
ಜಯಲಲಿತಾ ಅವರಿಗೆ ಜ್ಯೋತಿಷ್ಯದಲ್ಲಿ ಅಪಾರ ನಂಬಿಕೆ. ಸಂಖ್ಯಾಶಾಸ್ತ್ರದ ಪ್ರಕಾರ ತಮ್ಮ ಹೆಸರಿಗೆ ಇಂಗ್ಲಿಷ್ ನ ಎ ಅಕ್ಷರವನ್ನು ಸೇರಿಸಿಕೊಂಡಿದ್ದರು.
Discussion about this post