ಉಡುಪಿ: ಅ.19: ಬುದ್ದಿಜೀವಿಗಳೇ ನಿಮಗೆ ತಾಕತ್ತಿದ್ದರೇ, ನೀವು ನಿಜವಾಗಿಯೂ ಜಾತ್ಯತೀತರಾಗಿದ್ದರೇ, ಮೊದಲು ಮಸೀದಿಗೆ ಮುತ್ತಿಗೆ ಹಾಕಿ, ಅಲ್ಲಿರುವ ಅಸ್ಪೃಶ್ಯತೆಯನ್ನು ನಿವಾರಣೆ ಮಾಡಿ, ನಂತರ ಮಠದಲ್ಲಿರುವ ಅಸ್ಪೃಶ್ಯತೆಯ ಬಗ್ಗೆ ಮಾತನಾಡಿ ಎಂದು ಶ್ರೀರಾಮ್ ಸೇನೆಯ ನಾಯಕ ಪ್ರಮೋದ್ ಮುತಾಲಿಕ್ ಸವಾಲು ಹಾಕಿದ್ದಾರೆ.
ಬುಧವಾರ ಉಡುಪಿ ಕೃಷ್ಣಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣಮಠಕ್ಕೆ ಎಲ್ಲರಿಗೂ ಪ್ರವೇಶ ಇಲ್ಲ, ಅಲ್ಲಿ ಅಸ್ಪೃಶ್ಯತೆ ಇದೆ ಎಂದು ಹೇಳುವ ಬುದ್ದಿಜೀವಿಗಳೇ ಮಸೀದಿಯಲ್ಲಿ ಎಲ್ಲರಿಗೂ ಪ್ರವೇಶ ಇದೆಯಾ ಎಂದು ಪ್ರಶ್ನಿಸಿದರು.
ಬೆರಳೆಣಿಕೆಯಷ್ಟಿರುವ ಬುದ್ದಿಜೀವಿಗಳಿಗೆ ನಿಜವಾಗಿಯೂ ದಲಿತರ ಬಗ್ಗೆ ಕಾಳಜಿ ಇಲ್ಲ, ಅವರು ಬೂಟಾಟಿಕೆ, ನಾಟಕ ಮಾಡುತ್ತಿದ್ದಾರೆ. ಮಠದಲ್ಲಿ ದಲಿತರು ಸಹಭೋಜನ ಮಾಡಿದಾಕ್ಷಣ ದಲಿತರ ಉದ್ಧಾರ ಅಗುತ್ತದೆ ಎನ್ನುವುದು ಭ್ರಮೆ ಎಂದು ಮುತಾಲಿಕ್ ಹೇಳಿದರು.
ಯಾರೇ ಆಗಲಿ ಕೃಷ್ಣಮಠಕ್ಕೆ, ಪೇಜಾವರ ಶ್ರೀಗಳಿಗೆ ಅವಮಾನ ಮಾಡಿದರೇ ಅದಕ್ಕೆ ಶ್ರೀರಾಮ ಸೇನೆ ಅವಕಾಶ ನೀಡುವುದಿಲ್ಲ, ಸೇನೆ ಸಂಪೂರ್ಣವಾಗಿ ಶ್ರೀಗಳ ಜೊತೆಗಿದೆ ಎಂದರು.
Discussion about this post