ಶಿವಮೊಗ್ಗ, ಸೆ.9: ರಾಜ್ಯದ ಜೀವಜಲ ಕಾವೇರಿಯನ್ನು ತಮಿಳುನಾಡಿಗೆ ಬಿಡುವಂತೆ ನೀಡಿರುವ ಸುಪ್ರೀಂ ಕೋರ್ಟ್ ಆದೇಶ ಹಾಗೂ ಸೂಚನೆಗಿಂತ ಹೆಚ್ಚು ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಿದ್ದನ್ನು ಖಂಡಿಸಿ ವಿವಿಧ ಕನ್ನಡಪರ ಸಂಘಟನೆಗಳು ಇಂದು ಕರೆಕೊಟ್ಟಿದ್ದ ಕರ್ನಾಟಕ ಬಂದ್‌ಗೆ ನಗರದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಬಂದ್ ಹಿನೆಲೆಯಲ್ಲಿ ನಗರದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಜನರು ಪರದಾಡುವಂತಾಯಿತು.
ಇಂದು ಮುಂಜಾನೆಯಿಂದಲೇ ನಗರದ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಬಹುತೇಕ ಅಂಗಡಿ ಮಾಲಕರು ಗಿದ್ದು ಸ್ವಯಂ ಪ್ರೇರಿತರಾಗಿ ಬೆಂಬಲ ಸೂಚಿಸಿದ್ದರು. ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಿದ ಹಿನ್ನೆಲೆಯಲ್ಲಿ ಯಾವುದೇ ಶಾಲೆಗಳು ಬಾಗಿಲನ್ನು ತೆರೆಯಲಿಲ್ಲ. ಅನುದಾನ ಮತ್ತು ಅನುದಾನ ರಹಿತ ಶಾಲೆಗಳೂ ಬಂದ್‌ಗೆ ಬೆಂಬಲ ಸೂಚಿಸಿದ್ದವು. ಬಂದ್‌ಗೆ ಖಾಸಗೀ ಬಸ್ ಮಾಲಕರ ಸಂಘ ಬೆಂಬಲ ಸೂಚಿಸಿದ್ದರಿಂದ ಯಾವುದೇ ಬಸ್ಸುಗಳು ರಸ್ತೆಗಿಳಿಯಲಿಲ್ಲ. ಪರಿಣಾಮ ಪರ ಊರುಗಳಿಗೆ ಹೋಗಬೇಕಾದ ಪ್ರಯಾಣಿಕರು ಪರದಾಡುವ ಸ್ಥಿತಿ ಎದುರಾಯಿತು.
ಜಿಲ್ಲೆಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್, ಖಾಸಗಿ ನಗರಸಾರಿಗೆ ಬಸ್, ಆಟೋ ರಿಕ್ಷಾ, ಪ್ರವಾಸಿ ವಾಹನ, ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಹಲವು ವ್ಯಾಪಾರ ಕೇಂದ್ರಗಳು, ಖಾಸಗೀ ಸಂಸ್ಥೆಗಳು, ಚಲನಚಿತ್ರ ಮಂದಿರ, ಪೆಟ್ರೋಲ್ ಬಂಕ್ ಮಾಲಕರು ಬಂದ್‌ಗೆ ಬೆಂಬಲ ಸೂಚಿಸಿದ್ದರಿಂದ ಇವ್ಯಾವುದೇ ಸೇವೆಗಳು ಸಾರ್ವಜನಿಕರಿಗೆ ಲಭ್ಯವಾಗಲಿಲ್ಲ. ಜಿಲ್ಲಾ ಖಾಸಗೀ ಮತ್ತು ನಗರ ಸಾರಿಗೆ ಬಸ್ಸುಗಳ ಬಂದ್ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿರಲಿಲ್ಲವಾದರೂ ಬಸ್‌ಗಳ ಸುರಕ್ಷತೆ ದೃಷ್ಠಿಯಿಂದ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಬಸ್ ಸೌಲಭ್ಯವಿರದ ಕಾರಣದ ರೈಲ್ವೇ ನಿಲ್ದಾಣದಲ್ಲಿ ಜನಸ್ತೋಮ ಹೆಚ್ಚಾಗಿತ್ತು. ನಗರದ ಪ್ರಮುಖ ವಾಣಿಜ್ಯ ರಸ್ತೆಗಳಾದ ಗಾಂಧಿ ಬಜಾರ್, ದುರ್ಗಿಗುಡಿ, ನೆಹರೂ ರಸ್ತೆ, ಸವಳಂಗ ರಸ್ತೆಗಳಲ್ಲಿ ಶೇ.೯೦ ರಷ್ಟು ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಅಲ್ಲಲ್ಲಿ ಕೆಲವು ಅಂಗಡಿ ಮಾಲಕರು ಬಾಗಿಲನ್ನು ತೆರೆದು ವಹಿವಾಟು ಪ್ರಾರಂಭಿಸಲು ಮುಂದಾದರೂ ಬಂದ್ ತೀವ್ರತೆ ಹೆಚ್ಚಾಗುವುದನ್ನು ಅರಿತು ಸ್ವತಃ ಬಾಗಿಲು ಎಳೆದು ಮನೆ ದಾರಿ ಹಿಡಿದರು. ಇನ್ನೊಂದೆಡೆ ಕನ್ನಡಪರ ಹೋರಾಟ ಸಂಘಗಳು ಕೆಲವು ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿರುವ ಪ್ರಸಂಗವೂ ನಡೆಯಿತು.
ಶಿವಮೊಗ್ಗ ನಗರ ಸೂಕ್ಷ್ಮ ಪ್ರದೇಶವಾದ ಕಾರಣ ಜಿಲ್ಲಾ ಪೊಲೀಸ್ ವರಿಷ್ಠ ಅಭಿನವ ಖರೆ ನಗರದಾದ್ಯಂತ ಕಟ್ಟೆಚ್ಚರ ವಹಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಅಲ್ಲಲ್ಲಿ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿತ್ತು. ವಿವಿಧ ಕನ್ನಡಪರ ಸಂಘಟನೆಗಳು ಮುಂಜಾನೆಯಿಂದಲೇ ಬಸ್ಟಾಂಡ್, ಎಎ ವೃತ್ತ, ಗೋಪಿ ವೃತ್ತ, ಮಹಾವೀರ ವೃತ್ತಗಳಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಒಟ್ಟಾರೆ ನೀರಿಗಾಗಿ ಕನ್ನಡಿಗರು ಹಮ್ಮಿಕೊಂಡಿದ್ದ ಹೋರಾಟ ರಾಜ್ಯದಲ್ಲಿ ಯಶಸ್ವಿಯಾಗಿದ್ದು ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ.
ಬಂದ್ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ ನಿಲ್ಧಾಣ ಬಿಕೋ ಎನ್ನುತ್ತಿತ್ತು. ದೂರದ ಊರುಗಳಿಗೆ ಹೋಗುವವರು ಸ್ವಲ್ಪ ಕಾಲ ತೊಂದರೆ ಅನುಭವಿಸುವಂತಾಯಿತು. ಇತ್ತೀಚಿಗೆ ನಡೆದ ಬಂದ್‌ಗಳಲ್ಲಿ ಕಾವೇರಿ ನೀರಿಗಾಗಿ ನಡೆದ ಈ ಬಂದ್ ಅತ್ಯಂತ ಯಶಸ್ವಿಯಾಗಿದೆ.
ಭದ್ರಾವತಿಯಿಂದ ಶಿವಮೊಗ್ಗಕ್ಕೆ ಸಂಚರಿಸುತ್ತಿದ್ದ ಟ್ಯಾಕ್ಸಿಯನ್ನು ಕೆಲವು ಕನ್ನಡಪರ ಸಂಘಟನೆಗಳು ಬಲವಂತವಾಗಿ ನಿಲ್ಲಿಸಿದ ಪ್ರಸಂಗ ಕಂಡು ಬಂದಿರು. ಕೆಲವು ಕಡೆ ರೈತ ಸಂಘ ಬಾಗಿಲು ಮುಚ್ಚಿಸಿದರು. ನೆಹರೂ ರಸ್ತೆ, ಸವಳಂಗ ರಸ್ತೆ, ಸಾಗರ ರಸ್ತೆ, ತೀರ್ಥಹಳ್ಳಿ ರಸ್ತೆ, ಗಾಂಧಿಬಜಾರ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿದ್ದವು.
ಯಾವ ಸೇವೆ ಲಭ್ಯವಿತ್ತು?
ಆಸ್ಪತ್ರೆಗಳು, ಹಾಲು ಸರಬರಾಜು, ಪತ್ರಿಕೆ, ಟ್ಯಾಕ್ಸಿ…
ಯಾವ ಸೌಲಭ್ಯ ಲಭ್ಯವಿರಲಿಲ್ಲ?
ಆಟೋ, ಅಂಗಡಿ ಮುಂಟ್ಟು, ನಗರ ಸಾರಿಗೆ, ಕೆಎಸ್‌ಆರ್‌ಟಿಸಿ ಬಸ್, ಮೆಡಿಕಲ್ ಶಾಪ್, ಚಿತ್ರಮಂದಿರಗಳು
ಕರ್ನಾಟಕ ಬಂದ್‌ಗೆ ಶಿವಮೊಗ್ಗ ಜವಳಿ ಸಂಘ ಸಹ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿತ್ತು. ಇದರಂತೆ ಸಂಘದ ಎಲ್ಲಾ ಸದಸ್ಯರು ಇಂದು ತಮ್ಮ ಅಂಗಡಿಗಳನ್ನು ಮುಚ್ಚಿ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿದ್ದರು.
Discussion about this post