Read - < 1 minute
ಬೆಂಗಳೂರು, ಸೆ.2: ಕೆಎಸ್ ಟಿಡಿಸಿ ದಸರಾ ಪ್ರಯುಕ್ತ ವಿಶೇಷ ರೈಲು ಸೇವೆ ನೀಡಲು ನಿರ್ಧರಿಸಿದ್ದು, ಅ.1ರಿಂದ ಬೆಂಗಳೂರು-ಮೈಸೂರು ನಡುವೆ ಗೋಲ್ಡನ್ ಚಾರಿಯೆಟ್ ಸಂಚರಿಸಲಿದೆ.
ಈ ಸೇವೆಯಲ್ಲಿ ಒಂದು ದಿನ ಮತ್ತು ಎರಡು ರಾತ್ರಿಗಳ ಪ್ರಯಾಣವಿರುತ್ತದೆ. ಪ್ರಯಾಣಿಕರಿಗೆ ಜಂಬೂಸವಾರಿ ವೀಕ್ಷಿಸಲು ಗೋಲ್ಡನ್ ಪಾಸ್ ಕೂಡ ನೀಡಲಾಗುತ್ತದೆ. ಒಬ್ಬ ಪ್ರಯಾಣಿಕನಿಗೆ 30 ಸಾವಿರ ರೂ.ಗಳ ದರವನ್ನು ನಿಗದಿ ಮಾಡಲಾಗಿದೆ.
ಕರ್ನಾಟಕ ರಾಜ್ಯ ಪ್ರವಾಸ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ) ಗೋಲ್ಡನ್ ಚಾರಿಯೆಟ್ನ ಬೋಗಿಗಳ ಬಣ್ಣ ಮಾಸಿರುವ ಹಿನ್ನೆಲೆಯಲ್ಲಿ ನವೀನ ರೂಪ ನೀಡಲು ಮುಂದಾಗಿದೆ. ದುಬಾರಿ ದರದಿಂದಾಗಿ ಆದಾಯದಲ್ಲಿ ಕುಸಿತ ಕಂಡಿರುವ ಗೋಲ್ಡನ್ ಚಾರಿಯೆಟ್ಗೆ ಕಾಯಕಲ್ಪ ನೀಡಲಾಗುತ್ತಿದೆ. ರೈಲಿನ ಹೊರ ಭಾಗದಲ್ಲಿ ಅಳವಡಿಸಫಲಾಗಿರುವ ರೈಲು ಸೇವೆಯ ಸ್ಟಿಕರ್ಗಳನ್ನು ಬದಲಿಸಲು ಕೆಎಸ್ಟಿಡಿಸಿ ಗುತ್ತಿಗೆಗೆ ಆಹ್ವಾನ ನೀಡಿದೆ.
ಗೋಲ್ಡನ್ ಚಾರಿಯೆಟ್ನಲ್ಲಿ 18 ಬೋಗಿಗಳಿದ್ದು, ಜಿಮ್, ಸ್ಪಾ, ರೆಸ್ಟೋರೆಂಟ್, ಬಾರ್ಗಳಿಗೆ ಪ್ರತ್ಯೇಕ ಬೋಗಿಗಳಿವೆ. ಹೊಸದಾಗಿ ಸ್ಟಿಕರ್ ಅಳವಡಿಸುವವರು ಯಾವ ಬೋಗಿಯಲ್ಲಿ ಏನೇನಿದೆ ಎಂಬುದನ್ನು ಬಿಂಬಿಸಬೇಕಾಗಿದೆ. ಎಲ್ಲ ಬೋಗಿಯ ಅಳತೆ 13,800 ಚ.ಮೀ. ಉದ್ದವಿದ್ದು, ಸ್ಟಿಕರ್ ಅಂಟಿಸಬೇಕಿದೆ. ಈಗಿರುವ ಸ್ಟಿಕರನ್ನು ಬದಲಿಸಿ ಗುತ್ತಿಗೆ ಪಡೆಯುವ ಸಂಸ್ಥೆ ಹೊಸದಾಗಿ ಡಿಸೈನ್ ಸಿದ್ಧಪಡಿಸಿ ಕೆಎಸ್ ಟಿಡಿಸಿಗೆ ಸಲ್ಲಿಸಬೇಕು.
Discussion about this post