ಒಡಿಶಾ, ಅ.18: ಕಳೆದ ರಾತ್ರಿಯಿಂದ ದೇಶದಲ್ಲಿ ಎರಡು ಕಡೆಯಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದ್ದು, ಒಟ್ಟು 25 ಮಂದಿ ಧಾರುಣವಾಗಿ ಸಾವನ್ನಪ್ಪಿದ್ದಾರೆ.
ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಪರಿಣಾಮ 23 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಳೆದ ರಾತ್ರಿ ಆಸ್ಪತ್ರೆಯ ಎರಡನೆ ಮಹಡಿಯಲ್ಲಿರುವ ಡಯಾಲಿಸಿಸ್ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಬೆಂಕಿಯ ಕೆನ್ನಾಲಿಗೆ ತುರ್ತು ಚಿಕಿತ್ಸಾ ಫಟಕಕ್ಕೂ ವ್ಯಾಪಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಹೆದರಿದ ರೋಗಿಗಳು, ದಾದಿಯರು ಹಾಗೂ ಇನ್ನಿತರೆ ಸಿಬ್ಬಂದಿ ವರ್ಗದವರು ದಿಕ್ಕಾಪಾಲಾಗಿ ಓಡಿದ್ದಾರೆ.
ಎಸ್ಯುಎಂ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ಅಗ್ನಿ ದುರಂತ ನಡೆದ ಸಂದರ್ಭದಲ್ಲಿ ೨ನೆಯ ಮಹಡಿಯಲ್ಲಿ ಸಾಕಷ್ಟು ಹೆಚ್ಚು ರೋಗಿಗಳಿದ್ದರು. ನಡೆಯಲು ಹಾಗೂ ಓಡಲು ಸಾಧ್ಯವಾಗದ ಕೆಲ ರೋಗಿಗಳು, ವೃದ್ಧರು ಅಸಹಾಯಕ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಧಾವಿಸಿದ್ದ 100 ಹೆಚ್ಚು ಅಗ್ನಿ ಶಾಮಕ ದಳ ಸಿಬ್ಬಂದಿಗಳು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಚರಣೆ ನಡೆಸಿ ರೋಗಿಗಳನ್ನು ರಕ್ಷಿಸಿದ್ದಾರೆ. ಬೆಂಕಿಯ ಎರಡನೆಯ ಮಹಡಿಯಲ್ಲಿ ಅಗ್ನಿ ದುರಂತ ಸಂಭವಿಸಿದ್ದರಿಂದ ಬೆಂಕಿಯ ಕೆನ್ನಾಲಿಗೆ ಹಾಗೂ ದಟ್ಟ ಹೊಗೆಯ ನಡುವೆ ರೋಗಿಗಳನ್ನು ಕೆಳಗೆ ಇಳಿಸಿಕೊಂಡು ಬರುವುದು ಕಷ್ಟಸಾಧ್ಯವಾಗಿತ್ತು. ಹೀಗಾಗಿ ಸಿಬ್ಬಂದಿಗಳು ಕಿಟಕಿ ಗಾಜುಗಳನ್ನು ಒಡೆದು ರೋಗಿಗಳನ್ನು ರಕ್ಷಣೆ ಮಾಡಲು ಆರಂಭಿಸಿದರು. ಕ್ರೇನ್ ಬಳಸಿ ರೋಗಿಗಳನ್ನು ಕೆಳಗೆ ಇಳಿಸಲಾಯಿತು.
ಅಪಾರ್ಟ್ಮೆಂಟ್ನಲ್ಲಿ ಬೆಂಕಿ: ಇಬ್ಬರ ಸಾವು
ಮುಂಬೈನಲ್ಲಿ ಅಪಾರ್ಟ್ಮೆಂಟ್ವೊಂದರಲ್ಲಿ ಸಂಭವಿಸಿದ ಭಾರೀ ಅಗ್ನಿ ಅನಾಹುತದಲ್ಲಿ ಇಬ್ಬರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ನಡೆದಿದೆ.
ದಕ್ಷಿಣ ಮುಂಬೈನ ಕುಫಿ ಪರೇಡ್ನಲ್ಲಿರುವ ಮೇಕರ್ ಟವರ್ ಎಂಬ ಬೃಹತ್ ಅಪಾರ್ಟ್ಮೆಂಟ್ನ 20 ಹಾಗೂ 21ನೆಯ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು. ಬೆಂಕಿಯ ಕೆನ್ನಾಲಿಗೆಗೆ ಇಬ್ಬರು ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ ಸುಮಾರು 6.30ರ ಸುಮಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಜಾಜ್ ಎಲೆಕ್ಟ್ರಿಕಲ್ಸ್ ಸಂಸ್ಥೆಯ ಮುಖ್ಯಸ್ಥ ಶೇಖರ್ ಬಜಾಜ್ ಅವರಿಗೆ ಸೇರಿದ ಅಪಾರ್ಟ್ಮೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಬೆಂಕಿಯ ಕೆನ್ನಾಲಿಗಿಗೆ ಅಕ್ಕಪಕ್ಕದ ಎರಡು ಅಪಾರ್ಟ್ಮೆಂಟ್ಗಳು ಸಂಪೂರ್ಣ ಸುಟ್ಟುಹೋಗಿದ್ದು, ಒಳಗಿದ್ದ ಪೀಠೋಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಘಟನೆಯಲ್ಲಿ ಅಪಾಯಕ್ಕೆ ಸಿಲುಕಿದ್ದ ಮೂವರನ್ನು ರಕ್ಷಿಸಲಾಗಿದ್ದು, ಈ ಪೈಕಿ ಒಂದು ಕೂಡ ಸೇರಿದೆ ಎಂದು ತಿಳಿದುಬಂದಿದೆ. ಈ ವರೆಗೂ ಅಗ್ನಿಶಾಮಕ ಸಿಬ್ಬಂದಿ ಒಟ್ಟು 11 ಮಂದಿಯನ್ನು ರಕ್ಷಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Discussion about this post