ಬೆಂಗಳೂರು, ಅ.19: ರಾಜಾ ಕಾಲುವೆ ಒತ್ತುವರಿ ವಿಚಾರದಲ್ಲಿ ನಟ ದರ್ಶನ್‌ಗೆ ಸೇರಿದ ಜಾಗದಲ್ಲಿನ ಅಕ್ರಮ ಒತ್ತುವರಿಯನ್ನು ತೆರವುಗೊಳಿಸುವ ವಿವಾದ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು, ದರ್ಶನ್ ನಿವಾಸ ಸೇರಿದಂತೆ 69 ನಿವೇಶನಗಳನ್ನುತೆರವುಗೊಳಿಸುವುದಾಗಿ ಬೆಂಗಳೂರು ಜಿಲ್ಲಾಡಳಿತ ಹೇಳಿದೆ.
ಈ ಕುರಿತಂತೆ ಇಂದು ಮಾತನಾಡಿರುವ ಬೆಂಗಳೂರು ಜಿಲ್ಲಾಧಿಕಾರಿ ವಿ. ಶಂಕರ್, ಇದೇ ಅ.22ರಂದು ಅಂದರೆ ಶನಿವಾರ ತೆರವು ಕಾರ್ಯಾಚರಣೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದೇ ಅ.22ರಂದು ವಿವಾದಿತ ಪ್ರದೇಶದಲ್ಲಿರುವ ನಟ ದರ್ಶನ್ ನಿವಾಸ ಮತ್ತು ಎಸ್‌ಎಸ್ ಆಸ್ಪತ್ರೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತೇವೆ. ಒತ್ತುವರಿ ಜಾಗದಲ್ಲಿ ನಿರ್ಮಿಸಿರುವ ದರ್ಶನ್ ಮನೆ ಹಾಗೂ ಆಸ್ಪತ್ರೆಯನ್ನು ನಾವು ಧ್ವಂಸಗೊಳಿಸುವುದಿಲ್ಲ. ಆದರೆ ಈ ಒತ್ತುವರಿ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯುತ್ತೇವೆ. ವಿವಾದಿತ ಜಾಗದಲ್ಲಿ ಇದು ಸರ್ಕಾರದ ಆಸ್ತಿ ಎಂದು ಬೋರ್ಡ್ ಹಾಕುತ್ತೇವೆ ಎಂದು ಹೇಳಿದ್ದಾರೆ.
ನಗರದ ರಾಜರಾಜೇಶ್ವರಿ ನಗರದಲ್ಲಿರುವ ಐಡಿಯಲ್ ಹೋಮ್ ಒತ್ತುವರಿ ತೆರವು ಹಿನ್ನೆಲೆಯಲ್ಲಿ, ಇಲ್ಲಿನ 7 ಎಕರೆ 31 ಗುಂಟೆಯನ್ನು ಸರ್ಕಾರದ ಜಾಗ ಎಂದು ನಾಮಫಲಕ ಹಾಕಿ ಒತ್ತುವರಿ ವಶಕ್ಕೆ ಪಡೆಯಲಾಗುವುದು. ಇನ್ನು ಒತ್ತುವರಿದಾರರಿಗೆ ಚರಾಸ್ತಿ ಖಾಲಿ ಮಾಡಲು 2 ದಿನ ಅವಕಾಶ ನೀಡಲಾಗುವುದು ಎಂದು ಶಂಕರ್ ತಿಳಿಸಿದ್ದಾರೆ.
Discussion about this post