ಉಡುಪಿ, ಸೆ:೨೩- ನಾಡಿನ ಸುಭಿಕ್ಷೆಗಾಗಿ ದೇಶಿ ಗೋವುಗಳ ರಕ್ಷಣೆಯ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಗೋಕಿಂಕರ ಯಾತ್ರೆ ಉಡುಪಿಗೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಸಭೆಯಲ್ಲಿ ಪೇಜಾವರ ಶ್ರೀಗಳು ಮಾತನಾಡಿದರು.
ಇದು ಕಿಂಕರ ಯಾತ್ರೆಯೂ ಹೌದು, ಶಂಕರ ಯಾತ್ರೆಯೂ ಹೌದು. ಈ ಯಾತ್ರೆಯ ಮೂಲಕ ನಾಡಿನ ಆಧ್ಯಾತ್ಮಿಕತೆ ಮತ್ತು ಭೌದ್ಧಿಕತೆ ಈ ಎರಡರಲ್ಲೂ ಪ್ರಗತಿ, ಸಮೃದ್ಧಿಯಾಗಲಿದೆ ಎಂದವರು ಆಶಿಸಿದರು.
ಈ ಸಂದರ್ಭದಲ್ಲಿ ಸಂಸ್ಕಾರ ಭಾರತಿಯ ಸಂಚಾಲಕ ಆದರ್ಶ ಗೋಖಲೆ ವಿಶೇಷ ಉಪನ್ಯಾಸ ನೀಡಿ, ಪ್ರಾಚೀನ ಗೋಆಧಾರಿತ ಕೃಷಿ ಜೀವನ ಪದ್ದತಿಯ ಬಗ್ಗೆ ನಾವು ಮತ್ತೊಮ್ಮೆ ಚಿಂತನೆ ನಡೆಸುವ ಕಾಲ ಸನ್ನಿಹಿತವಾಗಿದೆ. ನಮ್ಮ ಸಂಸ್ಕೃತಿ ಗೋವು ಆಧಾರಿತವಾಗಿದ್ದರಿಂದಲೇ ಜಗತ್ತಿನಾದ್ಯಂತ ಅನೇಕ ವರ್ಷಗಳ ಹಿಂದೆಯೇ ಗುರುತಿಸಿಕೊಂಡಿದೆ ಎಂದು ಹೇಳಿದರು.
ಪೇಜಾವರ ಮಠದ ಕಿರಿಯ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಹವ್ಯಕ ಸಭಾದ ಪದಾಧಿಕಾರಿಗಳಾದ ವೇದಿಕೆಯಲ್ಲಿ ಎಸ್.ಎಲ್. ಕಾರ್ಣಿಕ್, ಗುಣವಂತೇಶ್ವರ ಭಟ್, ಹರಿಪ್ರಸಾದ್ ಪೆರಿಯಪ್ಪು, ಯು.ವಿ. ಕೃಷ್ಣಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.















