Read - 2 minutes
ವಾಷಿಂಗ್ಟನ್, ಸೆ.16: ಐಎಸ್ಐಎಸ್ ಉಗ್ರರಿಂದ ಅಪಹರಣಕ್ಕೊಳಗಾಗಿ, ಲೈಂಗಿಕ ಗುಲಾಮಗಿರಿ, ಚಿತ್ರ ಹಿಂಸೆ, ನರಕಯಾತನೆ ಅನುಭವಿಸಿ ಅವರ ಪೈಶಾಚಿಕ ದುಷ್ಕೃತ್ಯಕ್ಕೆ ಸಿಲುಕಿಯೂ ಉಗ್ರರ ಕಪಿಮುಷ್ಟಿಯಿಂದ ತಪ್ಪಿಸಿಕೊಂಡು ಬಂದಿರುವ ಇರಾಕ್ ನ ನಾದಿಯಾ ಮುರಾಡ್ ಅವರನ್ನು ವಿಶ್ವ ಸಂಸ್ಥೆ ಇಂದು ತನ್ನ ಸಧ್ಬಾವನಾ ರಾಯಭಾರಿಯನ್ನಾಗಿ ನೇಮಕ ಮಾಡಿದೆ.
ಈಕೆಯ ಛಲ ಹಾಗೂ ದಿಟ್ಟತನದಿಂದ ಕೈಗೊಂಡಿರುವ ಮಾನವ ಕಳ್ಳಸಾಗಣೆಯ ವಿರುದ್ಧದ ಜನಜಾಗೃತಿ ಅಭಿಯಾನವನ್ನು ಪರಿಗಣಿಸಿ ವಿಶ್ವಸಂಸ್ಥೆಯು ಈಕೆಯನ್ನು ಮಾನವ ಕಳ್ಳಸಾಗಣೆ ಸೌಹಾರ್ದ ರಾಯಭಾರಿ (United Nations Goodwill Ambassador for human trafficking) ಯಾಗಿ ನೇಮಕ ಮಾಡಿದೆ. ಈ ಕುರಿತು ವಿಶ್ವ ಸಂಸ್ಥೆ ಅಧಿಕೃತ ಪ್ರಕಟಣೆ ಹೊರಡಿಸಿದೆ.
ನಾದಿಯಾ, ಮಾನವ ಕಳ್ಳ ಸಾಗಾಣೆಗೆ ಸಂಬಂಧಿಸಿದಂತೆ ಜನ ಜಾಗೃತಿ ಮೂಡಿಸುವ ಜವಾಬ್ದಾರಿ ಹೊರಲಿದ್ದಾರೆ. ಕಳ್ಳ ಸಾಗಾಣೆಗೆ ಬಲಿಯಾಗುತ್ತಿರುವರ ಸ್ಥಿತಿಗತಿ, ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ದೃಷ್ಟಿ ಹರಿಸಲಿದ್ದಾರೆ.
2014ರಲ್ಲಿ ಇರಾಕ್ ನ ಗ್ರಾಮವೊಂದರಲ್ಲಿ ನೆಲೆಸಿದ್ದ ನಾದಿಯಾಗೆ ಆಗಿನ್ನು 19 ವರ್ಷ. ಮುಸ್ಲಿಮೇತರ ಯಾಝಿದಿ ಸಮುದಾಯಕ್ಕೆ ಸೇರಿದವಳು ನಾದಿಯಾ. ಈ ವೇಳೆ ಆಕೆ ವಾಸವಾಗಿದ್ದ ಇರಾಕ್ ನ ಗ್ರಾಮವು ಐಎಸ್ಐಎಸ್ ಉಗ್ರರ ವಶವಾಯಿತು. ಹಾಗಾಗಿ ನಾದಿಯಾ ಹಾಗೂ ಆಕೆಯ ಸಮುದಾಯದ ಹಲವು ಯುವತಿಯರನ್ನು ಅಪಹರಿಸಿ, ಐಎಸ್ಐಎಸ್ ಉಗ್ರರು ತಮ್ಮ ಲೈಂಗಿಕ ಪೈಶಾಚಿಕ ಕೃತ್ಯಕ್ಕಾಗಿ ಗುಲಾಮರನ್ನಾಗಿ ಮಾಡಿಕೊಂಡರು.
ಆಕೆಯ ಕಣ್ಣೆದುರೇ ಆಕೆಯ ತಂದೆ, ತಾಯಿಯನ್ನು ಐಎಸ್ಐಎಸ್ ಉಗ್ರರು ಗುಂಡಿಟ್ಟು ಸಾಯಿಸಿದರು. ಐಎಸ್ಐಎಸ್ ಉಗ್ರರ ವಶದಲ್ಲಿದ್ದ ಮೂರು ತಿಂಗಳ ಅವಧಿಯಲ್ಲಿ ನಾದಿಯಾ ಮೇಲೆ ಉಗ್ರರು ದಿನ ನಿತ್ಯವೆಂಬಂತೆ ಹಲವು ಬಾರಿ ಅತ್ಯಾಚಾರ ನಡೆಸುತ್ತಿದ್ದರು. ಉಗ್ರರ ಮುಷ್ಟಿಯಲ್ಲಿ ನಾದಿಯಾ ಕ್ಷಣ ಕ್ಷಣಕ್ಕೂ ನರಕ ಯಾತನೆ, ಚಿತ್ರಹಿಂಸೆ ಅನುಭವಿಸಿದಳು.
ಒಂದು ದಿನ ನಾದಿಯಾ ಐಎಸ್ಐಎಸ್ ಉಗ್ರರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಳು; ಆದರೆ ದುರದೃಷ್ಟವಶಾತ್ ಸಿಕ್ಕಿ ಬಿದ್ದಳು. ಆಗ ಆರು ಮಂದಿ ಪುರುಷರು, ಆಕೆ ಪ್ರಜ್ಞಾಹೀನಳಾಗುವ ತನಕವೂ, ಆಕೆಯ ಮೇಲೆ ನಿರಂತರ ಅತ್ಯಾಚಾರ ನಡೆಸಿದರು. ಆಕೆಯೇ ಹೇಳುವಂತೆ ಐಎಸ್ಐಎಸ್ ಉಗ್ರರಿಂದ ನಾದಿಯಾ ಅನುಭವಿಸಿದ ಯಾತನೆ ಶಬ್ದಗಳಲ್ಲಿ ಹೇಳಲಾಗದು. ಅಷ್ಟಾದರೂ ಮುಂದೊಂದು ದಿನ ನಾದಿಯಾ ಐಎಸ್ಐಎಸ್ ಉಗ್ರರ ಕಪಿ ಮುಷ್ಟಿಯಿಂದ ಪಾರಾಗುವಲ್ಲಿ ಯಶಸ್ವಿಯಾದಳು.
ಅಲ್ಲಿಂದ ಓಡಿ ಬಂದು ತಪ್ಪಿಸಿಕೊಂಡ ಬಂದ ನಾದಿಯಾಗೆ ಮುಸ್ಲಿಮರ ಮನೆಯಲ್ಲಿ ಆಶ್ರಯ ಸಿಕ್ಕಿದ್ದು, ಅವರು ಆಕೆ ಕುರ್ದಿಸ್ತಾನದಿಂದ ತಪ್ಪಿಸಿಕೊಂಡು ಬರಲು ಸಹಾಯ ಮಾಡಿದರು. ಉಗ್ರರಿಂದ ತಪ್ಪಿಸಿಕೊಂಡ ನಾದಿಯಾ ಜರ್ಮನಿಯಲ್ಲಿ ಆಶ್ರಯ ಪಡೆದು ಸಹಜಸ್ಥಿತಿಗೆ ಮರಳಿದ್ದರು.
2015ರಲ್ಲಿ ನಾದಿಯಾ ವಿಶ್ವಸಂಸ್ಥೆಯ ಪರಿಷತ್ ಸಭೆಯಲ್ಲಿ ತನ್ನ ನರಕಯಾತನೆಯ ಬದುಕನ್ನು, ಉತ್ತರ ಇರಾಕ್ ನಲ್ಲಿ ಐಎಸ್ಐಎಸ್ ಉಗ್ರರು ಮಹಿಳೆಯರ ಮೇಲೆ ನಡೆಸುತ್ತಿರುವ ಪೈಶಾಚಿಕ ಲೈಂಗಿಕ ದೌರ್ಜನ್ಯಗಳನ್ನು ಪರಿಪರಿಯಾಗಿ ವಿವರಿಸಿ ಹೇಳಿದ್ದಳು.
ನಾದಿಯಾ ಮುರಾದ್ ಈಗ ಅಂತಿಮವಾಗಿ ಜರ್ಮನಿಯಲ್ಲಿ ರಾಜಕೀಯ ಆಸರೆ ಪಡೆದಿದ್ದಾಳೆ. ಅಲ್ಲಿ ಆಕೆಗೆ ಯೋಗ್ಯ ವೈದ್ಯಕೀಯ ಚಿಕಿತ್ಸೆಯನ್ನೂ ನೀಡಲಾಗಿದೆ. ಐಎಸ್ಐಎಸ್ ಉಗ್ರರಿಂದ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿರುವ ಮಹಿಳೆಯರನ್ನು ಅಂತರ್ರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ನಲ್ಲಿ ಪ್ರತಿನಿಧಿಸುತ್ತಿರುವ ಅಮಲ್ ಕ್ಲೂನಿ ಅವರನ್ನು ನಾದಿಯಾ ಈಗಾಗಲೇ ಭೇಟಿಯಾಗಿದ್ದಾಳೆ.
ಮಾನವ ಕಳ್ಳಸಾಗಣೆ, ಮಹಿಳೆಯರು ಮತ್ತು ಮಕ್ಕಳ ಮೇಲಿನ ಜನಾಂಗೀಯ ದೌರ್ಜನ್ಯ, ಐಎಸ್ಐಎಸ್ ಉಗ್ರರ ಪೈಶಾಚಿಕ ಕೃತ್ಯ ಇತ್ಯಾದಿಗಳ ಬಗ್ಗೆ ವಿಶ್ವಾದ್ಯಂತ ಜನಜಾಗೃತಿ ಹುಟ್ಟಿಸುವುದಕ್ಕಾಗಿ ನಾದಿಯಾ ತನ್ನದೇ ಆದ ವೆಬ್ ಸೈಟ್ ಆರಂಭಿಸಿದ್ದಾಳೆ.
ಆಕೆಯ ದಿಟ್ಟತನದ ಹೋರಾಟಕ್ಕೆ ಪೂರ್ಣ ಬೆಂಬಲ ನೀಡುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯು ಆಕೆಯನ್ನು ತನ್ನ ಸದ್ಭಾವನಾ ರಾಯಭಾರಿಯನ್ನಾಗಿ ನೇಮಿಸಿಕೊಂಡಿದೆ.
Discussion about this post