ಇಸ್ಲಾಮಾಬಾದ್, ಸೆ.23: ಉರಿ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ಥಾನದ ನಡುವಿನ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ, ಯುದ್ಧ ಘೋಷಣೆಯಾಗುತ್ತದೆಯಾ ಎಂಬ ಚರ್ಚೆ ಈಗ ಆರಂಭವಾಗಿದೆ.
ಇದರ ಬೆನ್ನಲ್ಲೇ ವಿವಾದ ಕುರಿತಂತೆ ಮಾತನಾಡಿರುವ ಪಾಕ್ ವಿದೇಶ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಜೀಜ್, ಕಾಶ್ಮೀರ ಸಹಿತವಾಗಿ ಬಾಕಿ ಇರುವ ಎಲ್ಲ ವಿವಾದಗಳ ಕುರಿತು ಭಾರತದೊಂದಿಗೆ ನಿಶ್ಯಸ್ತ್ರ ಮಾತುಕತೆ ನಡೆಸಲು ಪಾಕಿಸ್ಥಾನ ಸಿದ್ಧವಿದೆ ಎಂದು ಹೇಳಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಭಾರತವು ಪಾಕಿಸ್ಥಾನದ ವಿರುದ್ಧ ರಾಜತಾಂತ್ರಿಕ ಮಹಾ ವಿಜಯವನ್ನು ಸಾಧಿಸಿದ ಪರಿಣಾಮಾಗಿ ಇಸ್ಲಾಮಾಬಾದ್ ಈಗ ಹಠಾತ್ತನೆ ಮೆತ್ತಗಾಗಿದ್ದು ಭಾರತದೊಂದಿಗೆ ತಾನು ನಿಶ್ಶಸ್ತ್ರ ಮಾತುಕತೆಗೆ ಸಿದ್ಧಿವಿರುವುದಾಗಿ ಹೇಳಿದೆ.
ಉರಿ ಸೇನಾ ಶಿಬಿರದ ಮೇಲೆ ಪಾಕ್ ಉಗ್ರರು ಕಳೆದ ಭಾನುವಾರ ನಸುಕಿನ ವೇಳೆ ದಾಳಿ ನಡೆಸಿ ೧೮ ಭಾರತೀಯ ಯೋಧರನ್ನು ಕೊಂದ ಬಳಿಕ ಉಭಯ ದೇಶಗಳ ನಡುವಿನ ಉದ್ವಿಗ್ನತೆಯು ಪರಾಕಾಷ್ಠೆಗೇರಿತ್ತು. ತದನಂತರದಲ್ಲಿ ಭಾರತ, ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಪಾಕಿಸ್ಥಾನವು ಭಯೋತ್ಪಾದಕ ದೇಶವೆಂದು ಹೇಳಿತ್ತಲ್ಲದೆ ಸಮಗ್ರ ಅಂತರ‌್ರಾಷ್ಟ್ರೀಯ ಸಮುದಾಯ ಪಾಕಿಸ್ಥಾನವನ್ನು ದೂರ ಇರಿಸುವಂತೆ ಕರೆ ಮಾಡಿತ್ತು. ಆನಂತರದ ಬೆಳವಣಿಗೆಯಲ್ಲಿ ಪಾಕಿಸ್ಥಾನ ಕೊಂಚ ಬೇರೆಯದ್ಧೇ ವರಸೆ ಆರಂಭಿಸಿದೆ.
ಈ ಕುರಿತಂತೆ ಮಾತನಾಡಿದ್ದ ವಿಶ್ವಸಂಸ್ಥೆ ಅಧ್ಯಕ್ಷ ಬಾನ್ ಕಿ ಮೂನ್, ಪಾಕ್ ಪ್ರಧಾನಿ ನವಾಜ್ ಷರೀಫ್ ಅವರಿಗೆ ಕಾಶ್ಮೀರ ವಿವಾದದಲ್ಲಿ ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸುವುದಿಲ್ಲ. ಕಾಶ್ಮೀರ ಸಹಿತವಾಗಿ ಯಾವುದೇ ವಿವಾದವನ್ನು ಪಾಕಿಸ್ಥಾನವು ಭಾರತದೊಂದಿಗೆ ಮಾತುಕತೆಯ ಮೂಲಕವೇ ಬಗೆ ಹರಿಸಿಕೊಳ್ಳಬೇಕು ಎಂದು ಸ್ಪಷ್ಟವಾಗಿ ಹೇಳಿದ್ದರು.
ಆನಂತರ ಪಾಕಿಸ್ಥಾನವು ಭಯೋತ್ಪಾದಕ ದೇಶವೆಂಬುದನ್ನು ಅಧಿಕೃತವಾಗಿ ಪರಿಗಣಿಸಲು ಅಮೆರಿಕ ಸಂಸತ್ತಿನಲ್ಲಿ ವಿಧೇಯಕದ ಮಂಡನೆಯೂ ಆಗಿತ್ತು.
ಇದೀಗ ಈ ಎಲ್ಲ ವ್ಯತಿರಿಕ್ತ ಬೆಳವಣಿಗೆಗಳಿಂದ ಕಂಗೆಟ್ಟಿರುವ ಪಾಕಿಸ್ಥಾನ, ಭಾರತದೊಂದಿಗೆ ತಾನು ನಿಶ್ಶಸ್ತ್ರ ಮಾತುಕತೆಗೆ ಸಿದ್ಧ ಎಂದು ಹೇಳಿದೆ.
Discussion about this post