Read - 2 minutes
ದೇಶಕ್ಕೆ ದೇಶವೇ ಗೌರಿಹಬ್ಬ ಗಣಪತಿ ಹಬ್ಬದ ಸಂಭ್ರಮದಲ್ಲಿದ್ದ ತವರು ಮನೆಯ ಮೇಲೆ ಮುನಿಸಿಕೊಂಡ ತಮಿಳುನಾಡಿನ ಅಮ್ಮ ಮುಖ್ಯಮಂತ್ರಿ ಜಯಲಲಿತಾ ತವರಿನ ಜಲದ ಪಾಲಿಗೆ ಹಠ ಬಿದ್ದು ಸುಪ್ರೀಂ ಕೋರ್ಟ್ ಕದತಟ್ಟಿ ಹೋರಾಡಿ ತವರು ಮನೆ ತಣ್ಣಗಿರಲಿ ಎನ್ನುವ ಬದಲು ತವರಿನ ಜೀವನದಿಯಾದ ಕರ್ನಾಟಕದ ಗಂಗೆ ಕಾವೇರಿಯ ತಣ್ಣೀರನ್ನೇ ಕಣ್ಣೀರಿಟ್ಟಾದರೂ ಕೊಡಿ ಎಂದು ಬೇಡಿಕೆ ಇಟ್ಟಿದ್ದರು.
ಇದು ಕನ್ನಡಿಗರ ಕಿಚ್ಚು ಹೆಚ್ಚಿಸಿ ದ್ವೇಷದ ಕಾವೇರುವಂತೆ ಕಾವೇರಿಯನ್ನು ಮಾರ್ಪಾಡು ಮಾಡುತ್ತಿರುವುದು ಅಮ್ಮನೆಂದು ಕರೆಸಿಕೊಳ್ಳುವ ಜಯಲಲಿತಾಗೆ ಶೋಭೆಯಲ್ಲ.
ಹಬ್ಬದ ಸಂಭ್ರಮವನ್ನು ಕ್ಷಣಾರ್ಧದಲ್ಲಿ ಕಿತ್ತೊಗಿಯಿತು ಕಾವೇರಿ ಜಲದ ಬಗೆಗಿನ ತೀರ್ಪು. ಹಬ್ಬದ ಊಟ ಮಾಡುವವರು ಒಮ್ಮೆಲೆ ಸುದ್ದಿನೋಡಿ ದಿಗ್ಬ್ರಾಂತರಾದರು. ಗೌರಮ್ಮನನ್ನು ಪೂಜಿಸಲು ಕರೆತಂದಾಗ ಮನೆಯ ಕಾವೇರಿ ಹೊರ ಹೋದಂತಾಯಿತು ಕರ್ನಾಟಕದ ಪರಿಸ್ಥಿತಿ.
ನೀರಿನ ವಿಷಯದಲ್ಲಿ ಕರ್ನಾಟಕ ಪದೇ ಪದೇ ಸೋಲುತ್ತಿರುವುದು ವಿಷಾದನೀಯವಾಗಿದೆ. ಅಕ್ರಮ ಆಸ್ತಿಗಳಿಕೆಯ ವಿಚಾರದಲ್ಲಿ ಜಯಲಲಿತಾ ಪರ ವಕೀಲತ್ತು ವಹಿಸಿದ್ದ ಫಾಲಿ ನಾರಿಮನ್ ಕರ್ನಾಟಕದ ಪರ ವಕೀಲ!!. ಸುಪ್ರೀಂ ಕೋರ್ಟಿನಲ್ಲಿ ಜಯಲಲಿತಾ ಪರ ವಕೀಲನೊಬ್ಬ ಮತ್ತೊಂದು ವಿಚಾರದಲ್ಲಿ ಜಯಲಲಿತಾ ಅಥವಾ ಅವರ ಸರ್ಕಾರದ ವಿರುದ್ಧ ವಾದಿಸುವುದನ್ನು ಅಪೇಕ್ಷಿಸುವುದಾದರೂ ಹೇಗೆ? ಕರ್ನಾಟಕಕ್ಕೆ ಈ ಸೋಲಿನ ಸರದಾರನನ್ನು ಬಿಟ್ಟು ಜಯಮ್ಮನ ಸಂಪತ್ತಿಗೆ ಸವಾಲ್ ಹಾಕುವ ಯಾವ ವಕೀಲನು ಕರ್ನಾಟಕದ ಪಾಲಿಗೆ ಇಲ್ಲವೇ? ಸರ್ಕಾರಕ್ಕೆ ಮತ್ತಾವ ವಕೀಲನನ್ನು ನೇಮಿಸುವ ತಾಕತ್ತು ಇಲ್ಲವೇ?
೧೮೭೦ ರಲ್ಲಿ ಮೈಸೂರು ಸಂಸ್ಥಾನಕ್ಕೂ ಮದ್ರಾಸ್ ಸಂಸ್ಥಾನಕ್ಕೂ ಆದ ಒಪ್ಪಂದಕ್ಕೆ ಕಟ್ಟುಬಿದ್ದು ತಮಿಳುನಾಡು ಇಂದಿಗೂ ನೀರು ಕೇಳುವುದಾದರೆ, ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಸಂಸ್ಥಾನ ಮಾಡಿದ್ದ ಎಲ್ಲಾ ಅಭಿವೃದ್ಧಿ ಹಾಗೂ ಆಸ್ತಿಗಳಿಗೂ ಸಹ ಮೈಸೂರು ಮಹಾರಾಜರೆ ಈಗಲೂ ಹಕ್ಕುದಾರರಾಗಿರುತ್ತಾರೆ ಅಲ್ಲವೇ? ಸ್ವತಂತ್ರ್ಯವಾಗಿದ್ದ ಮೈಸೂರು ಸಂಸ್ಥಾನವು ವಿಶ್ವೇಶ್ವರಯ್ಯನವರ ಮಾರ್ಗದರ್ಶನದಲ್ಲಿ ಪೂರ್ಣ ಪ್ರಮಾಣದ ಕೃಷ್ಣರಾಜ ಸಾಗರ ಅಣೆಕಟ್ಟನ್ನು ನಿರ್ಮಿಸಲು ಹೊರಟಾಗ ಅದನ್ನು ಕೇವಲ ಹನ್ನೊಂದು ಟಿಎಂಸಿಗೆ ಸೀಮಿತ ಗೊಳಿಸಿ ನೀರನ್ನು ಶೇಖರಿಸಲು ಅನುಮತಿ ನೀಡಿ ಮದ್ರಾಸ್ ರಾಜ್ಯಕ್ಕೆ ನೀರನ್ನು ಬಿಡಬೇಕೆಂದು ಮದ್ರಾಸನ್ನು ಆಳುತ್ತಿದ್ದ ಬ್ರಿಟೀಷ್ ಸರ್ಕಾರ ೧೮೮೧ರಲ್ಲಿ ತಾಕೀತು ಮಾಡಿತ್ತು.
ಆ ಆದೇಶವನ್ನೇ ಮೂಲವಾಗಿಟ್ಟುಕ್ಕೊಂಡು ತಮಿಳುನಾಡು ಪ್ರತಿ ವರ್ಷ ತನ್ನ ಖ್ಯಾತೆಯನ್ನು ತೆಗೆಯುತ್ತಿದೆ. ಇದುವರಗೆ ಆಳಿದ ಎಲ್ಲಾ ಸರ್ಕಾರಗಳು ನ್ಯಾಯಧೀಕರಣದ ಹೆಸರಲ್ಲಿ ಕೇಂದ್ರ ಮತ್ತು ಕೋರ್ಟಿನ ಮುಂದೆ ಮಂಡಿಯೂರಿ ನಡುಬಗ್ಗಿಸಿ ನಿಂತಿರುವವರೆ. ರಾಜಕೀಯವಾಗಿ ನಮ್ಮ ರಾಜ್ಯವು ಪ್ರಬಲವಾಗದಿರುವುದೇ ನಮ್ಮ ಎಲ್ಲಾ ಸೋಲಿಗೂ ಕಾರಣ. ಜಾತಿ ಮತ್ತು ಜಿಲ್ಲೆಗಳ ವ್ಯಾಪ್ತಿಗೆ ಸೀಮಿತವಾಗಿರುವ ನಮ್ಮ ಎಲ್ಲಾ ನಾಯಕರು ರಾಜ್ಯದ ಸಮಗ್ರ ಹಿತದೃಷ್ಟಿಯಿಂದ ಆಲೋಚಿಸಿರುವುದೂ ಹಾಗೂ ಆಲೋಚಿಸುವುದು ಸಹ ಕಡಿಮೆ. ನಮ್ಮ ಸಾಂಸದರಂತೂ ಅಪರಂಜಿಗಳು, ಮಾತಾಡಿ ವರಿಷ್ಠ ಮಂಡಳಿಯ ಅಥವಾ ಹೈಕಮಾಂಡ್‌ನ ನಿಷ್ಠೂರ ಮಾಡಿಕೊಳ್ಳುವುದಿಲ್ಲ. ಏಕೆಂದರೆ ಇವರು ಅಲ್ಲಿಗೆ ಹೋಗಿರುವುದು ಹೈಕಮಾಂಡ್‌ನ ಗುಲಾಮಗಿರಿ ಮಾಡಲು ನಮ್ಮ ಪರ ಮಾತನಾಡುವುದಕ್ಕಲ್ಲ.
ಮಹದಾಯಿಯಲ್ಲಿ ಸೋತು ಸುಣ್ಣವಾಗಿದ್ದ ನಾವು ಕಾವೇರಿಯಲ್ಲಿ ಚೇತರಿಸಿಕೊಳ್ಳಲೂ ಸಾಧ್ಯವಿಲ್ಲ. ಮಹದಾಯಿಯಲ್ಲಿ ಅಮ್ಮ.. ತಾಯಿ.. ಎಂದು ಬೇಡುವ ಬದಲು ಸಂಸತ್ ಸದಸ್ಯರು ಲೋಕಸಭೆಯಲ್ಲಿ ನಿಷ್ಠೂರ ನಡೆಯನ್ನು ತೆಗೆದುಕೊಂಡು ಲೋಕಸಭೆಯ ಭಾವಿಗೆ ಇಳಿದಿದ್ದರೆ ಇಡೀ ದೇಶದ ಗಮನವನ್ನು ಸಮಸ್ಯೆಯ ಕಡೆಗೆ ತರಬಹುದಿತ್ತು. ಆಗ ಪ್ರಧಾನಿ ಮೋದಿಯಾದಿಯಾಗಿ ಇನ್ನುಳಿದವರು ಸಹ ನಮ್ಮ ಸಮಸ್ಯೆಯನ್ನು ಆಲಿಸುತ್ತಿದ್ದರು, ನೆರವಿಗೂ ಬರುತ್ತಿದ್ದರು.
ಆದರೆ ನಮ್ಮ ಸಂಸತ್ ಸದಸ್ಯರು ತಮ್ಮ ವಾಕ್ಚಾತುರ್ಯವನ್ನು ತೋರಿಸಲು ಎಲ್ಲಾ ಸಮಸ್ಯೆಗೂ ಸೋನಿಯಾರ ಗೋವಾ ಭಾಷಣವೇ ಕಾರಣವೆಂದು ಹೇಳಿ ಉದ್ದುದ್ದ ಪುಂಕಾನು ಪುಂಕಾನುವಾಗಿ ಮಾತನಾಡಿ ಸಮಸ್ಯೆಯನ್ನು ಮತ್ತಷ್ಟು ರಾಜಕೀಯಗೊಳಿಸಿ ಸಮಸ್ಯೆಯನ್ನು ಜೀವಂತವಿಡಲು ಪ್ರಯತ್ನಿಸಿ ಸಮಸ್ಯೆಯನ್ನು ಬಗೆಹರಿಸದೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ನಗ್ನಸತ್ಯ.
ತಮಿಳುನಾಡಿಗೆ ಕದ್ದು ಮುಚ್ಚಿ ರಾತ್ರಿ ನೀರು ಬಿಡುವ ಕಳ್ಳರಾಜಕಾರಣಿಗಳು ನಮ್ಮವರು. ಕನ್ನಡ ಹೋರಾಟಗಾರರನ್ನು ಪ್ರತಿಭಟನಾ ನಿರತ ರೈತರನ್ನು ಬಡಿಯುವ, ಹೊಡೆಯುವ ಜೈಲಿಗಟ್ಟುವ ಸರ್ಕಾರಕ್ಕೇನು ಗೊತ್ತು ರೈತರ ಕಷ್ಟ. ಸರ್ವೋಚ್ಛ ನ್ಯಾಯಲಯದಲ್ಲಿ ನಮ್ಮಪಾಲಿಗೆ ಸೋಲಿನ ಸರದಾರನಾಗಿರುವ ಫಾಲಿ ನಾರಿಮನ್ ಎಂದಾದರು ಬಂದು ನಮ್ಮ ರಾಜ್ಯದ ಬರ ಪರಿಸ್ಥಿತಿ ನೋಡಿದ್ದಾರೆಯೆ?
ನೀರು ಬಿಡುವ ಮೊದಲು ಸರ್ಕಾರ ನಮ್ಮ ರಾಜ್ಯಕ್ಕೆ ಬಂದೊದಗುವ ಬರ ಪರಿಸ್ಥಿತಿಯಲ್ಲಿ ಇಟ್ಟುಕೊಂಡಿರುವ ಪರಿಹಾರ ಮಾರ್ಗಗಳನ್ನು ಬಹಿರಂಗ ಪಡಿಸಲಿ. ನೀರು ಖಾಲಿಯಾದ ಮೇಲೆ ಕುಡಿಯುವ ನೀರಿಗೆ ಪರಿಹಾರ ಮಾರ್ಗಗಳೇನು? ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಬಿಡುವ ಬದಲು ನಮ್ಮ ಕೆರೆ ಕಟ್ಟೆಗಳಿಗೆ ಸಣ್ಣಪುಟ್ಟ ಅಣೆಕಟ್ಟುಗಳಿಗೆ ಮಳೆಯಿಲ್ಲದ ಈ ಸಂದರ್ಭದಲ್ಲಿ ನೀರು ತುಂಬಿಸಬಹುದಿತ್ತು. ಆದರೆ ಇದ್ಯಾವುದು ಮಾಡದ ಸರ್ಕಾರ ಮಂಡಿಯೂರಿ ಕುಳಿತುಕೊಳ್ಳಲು ನಿರ್ಧರಿಸಿ ಇಂದಿನಿಂದಲೇ ಅಲ್ಪ ಪ್ರಮಾಣದ ನೀರು ಬಿಡಲು ತೀರ್ಮಾನಿಸಿರುವುದು ಅವಮಾನಿಯ. ನೀರು ಬಿಡದಿರಲು ನಿಮ್ಮ ತೀರ್ಮಾನವಿದ್ದಿದ್ದರೆ ಕೆಆರ್‌ಎಸ್ ಅಣೆಕಟ್ಟಿಗೆ ಅಷ್ಟೊಂದು ಬಂದೋಬಸ್ತ್ ಒದಗಿಸುತ್ತಿದ್ದರೆ ನೀವು? ನಾಟಕವಾಡುವುದನ್ನು ಬಿಟ್ಟು ಕರ್ನಾಟಕದ ಪರ ನಿಲ್ಲಿ ಎಂಬುದಷ್ಟೆ ಕನ್ನಡಿಗರ ಆಶಯ.
Discussion about this post