Read - 2 minutes
ಬೆಂಗಳೂರು, ಅ.10: ತುಮಕೂರು-ಎಲೆಕ್ಟ್ರಾನಿಕ್ ಸಿಟಿ ನಡುವೆ ಸಂಪರ್ಕ ಕಲ್ಪಿಸುವ ಪೆರಿಪೆರಲ್ ರಿಂಗ್ ರಸ್ತೆ ನಿರ್ಮಾಣದಲ್ಲಿ ಶಾಸಕ ಅಶೋಕ್ ಖೇಣಿ ಒಡೆತನದ ನೈಸ್ ಸಂಸ್ಥೆ 800 ಎಕರೆ ಜಮೀನನ್ನು ಭೂ ಕಬಳಿಕೆ ಮಾಡಿರುವುದು ಪತ್ತೆಯಾಗಿದೆ.
ಅಂದಾಜು ಎರಡೂವರೆ ಸಾವಿರದಿಂದ ಮೂರು ಸಾವಿರ ಕೋಟಿ ರೂ. ಬೆಲೆ ಬಾಳುವ ಈ ಜಮೀನನ್ನು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ನೈಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ಕಾನೂನು ಉಲ್ಲಂಘಿಸಿ ರಾಜ್ಯದ ಬೊಕ್ಕಸಕ್ಕೆ ಇಷ್ಟು ದೊಡ್ಡ ಮಟ್ಟದ ಹಣವನ್ನು ನಷ್ಟವುಂಟು ಮಾಡಿದ್ದಾರೆ ಎಂಬ ಸಂಗತಿಯನ್ನು ವಿಧಾನಸಭೆಯ ಸದನ ಸಮಿತಿ ಪತ್ತೆ ಹಚ್ಚಿದೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಅಧ್ಯಕ್ಷರಾಗಿರುವ ಸಮಿತಿಯಲ್ಲಿ 11 ಮಂದಿ ಸದಸ್ಯರಿದ್ದಾರೆ. ಸಮಿತಿಯು ನಡೆಸಿರುವ ತನಿಖೆಯಂತೆ ಅಶೋಕ್ ಖೇಣಿ ಒಟ್ಟು 800 ಎಕರೆ ಜಮೀನನ್ನು ಸರ್ಕಾರದ ಕಣ್ಣಿಗೆ ಮಣ್ಣೆರಚಿ ಕಬಳಿಕೆ ಮಾಡಿದ್ದಾರೆ. ಈ ಎಲ್ಲ ಜಮೀನನ್ನು ಹಿಂಪಡೆಯುವಂತೆ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಸರ್ಕಾರಿ ಅಧಿಕಾರಿಗಳು ಭಾಗಿ: ಅಶೋಕ್ ಖೇಣಿ ತುಮಕೂರು ಮತ್ತು ಎಲೆಕ್ಟ್ರಾನಿಕ್ ಸಿಟಿ ನಡುವೆ ಸಂಪರ್ಕ ಕಲ್ಪಿಸಲು ಆರು ಪಥದ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದರು. ಹೆಚ್ಚವರಿ ಜಮೀನು ಅಗತ್ಯವಿಲ್ಲದಿದ್ದರೂ ಟೌನ್ಶಿಪ್ ಮಾಡುವ ಉದ್ದೇಶದಿಂದ ಈ ಜಮೀನನ್ನು ಕಬಳಿಕೆ ಮಾಡಲಾಗಿದೆ ಎಂದು ಸಮಿತಿಯು ವರದಿಯಲ್ಲಿ ಉಲ್ಲೇಖ ಮಾಡಿದೆ.
ಅಶೋಕ್ ಖೇಣಿಗೆ ಕೆಐಎಡಿಬಿ, ಬಿಡಿಎ, ಕಂದಾಯ, ಬಿಬಿಎಂಪಿ, ನಗರಾಭಿವೃದ್ಧಿ , ಅರಣ್ಯ ಸೇರಿದಂತೆ ಕೆಲವು ಸರ್ಕಾರಿ ಅಧಿಕಾರಿಗಳು ನಿವೃತ್ತ ಕಾರ್ಯದರ್ಶಿಗಳು ಸೇರಿದಂತೆ ಐಎಎಸ್, ಕೆಎಎಸ್ ಅಧಿಕಾರಿಗಳು ಈ ಅಕ್ರಮದಲ್ಲಿ ಶಾಮೀಲಾಗಿದ್ದಾರೆ.
ಹೇಳಿದ್ದೊಂದು ಮಾಡಿದ್ದೊಂದು:
ರಸ್ತೆ ನಿರ್ಮಾಣ ಮಾಡುತ್ತೇನೆ ಎಂದು ಬೆಲೆ ಬಾಳುವ ಜಮೀನು ಪಡೆದಿದ್ದ ಅಶೋಕ್ ಖೇಣಿ ಮೂಲ ಒಪ್ಪಂದವನ್ನು ಗಾಳಿಗೆ ತೂರಿ ಬಹುತೇಕ ಕಡೆ ರಿಯಲ್ ಎಸ್ಟೇಟ್ ಉದ್ಯಮವನ್ನು ನಡೆಸಿದ್ದಾರೆ. ಇಲ್ಲಿಯೂ ಕೂಡ ಕೆಲವು ರಿಯಲ್ ಎಸ್ಟೇಟ್ ಉದ್ಯಮಿಗಳು ಶಾಮೀಲಾಗಿ ಜಮೀನನ್ನು ಕೊಳ್ಳೆ ಹೊಡೆದಿದ್ದಾರೆ.
ಮೂಲ ಒಪ್ಪಂದದ ಪ್ರಕಾರ ಕೆಐಎಡಿಬಿಯಿಂದ ಜಮೀನು ಪಡೆದಿದ್ದ ಅಶೋಕ್ ಖೇಣಿ ರಸ್ತೆ ನಿರ್ಮಾಣ ಮಾಡುವ ಬದಲು ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಟೌನ್ಶಿಪ್ ನಿರ್ಮಾಣ ಮಾಡಿದ್ದಾರೆ.
ರೈತರು ಮಕ್ಮಲ್ಟೋಪಿ: ಒಪ್ಪಂದದ ಪ್ರಕಾರ ರೈತರ ಪ್ರತಿ ಎಕರೆ ಜಮೀನಿಗೆ ಕನಿಷ್ಠ 60ರಿಂದ 70 ಲಕ್ಷ ರೂ. ಪರಿಹಾರ ನೀಡಬೇಕಿತ್ತು. ಕೆಐಎಡಿಬಿ ಮತ್ತು ಬಿಡಿಎ ಜೊತೆ ಮಾಡಿಕೊಂಡ ಒಪ್ಪಂದದಂತೆ ಎಲ್ಲಿಯೂ ಕೂಡ ಖೇಣಿ ರೈತರಿಗೆ ನ್ಯಾಯಬದ್ದವಾದ ಪರಿಹಾರವನ್ನು ನೀಡಿಲ್ಲ. ಇದು ಕೂಡ ವರದಿಯಲ್ಲಿ ಪತ್ತೆ ಮಾಡಲಾಗಿದೆ. ಕೇವಲ 25-30 ಲಕ್ಷ ರೂ. ಪರಿಹಾರ ನೀಡಿ ಮಕ್ಮಲ್ ಟೋಪಿ ಹಾಕಿ ಕೈ ತೊಳೆದುಕೊಳ್ಳಲಾಗಿದೆ. ಕೆಲವು ಕಡೆ ರೈತರು ತಮ್ಮ ಜಮೀನು ಕೊಡುವುದಿಲ್ಲ ಎಂದು ಪಟ್ಟು ಹಿಡಿದಾಗ ಬಲವಂತವಾಗಿಯೂ ಜಮೀನನ್ನು ಕಿತ್ತುಕೊಳ್ಳಲಾಗಿದೆ.
ಜಮೀನು ವಾಪಸ್ಸಾತಿಗೆ ಶಿಫಾರಸು:
ಸದನ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿರುವಂತೆ ಅಶೋಕ್ ಖೇಣಿ ಭೂ ಕಬಳಿಕೆ ಮಾಡಿರುವ 800 ಎಕರೆ ಜಮೀನನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವಂತೆ ಶಿಫಾರಸ್ಸು ಮಾಡಲಾಗಿದೆ. ಇದರ ಬೆಲೆ ಇದರ ಮಾರುಕಟ್ಟೆಯಲ್ಲಿ ಎರಡೂವರೆಯಿಂದ ಮೂರು ಸಾವಿರ ಕೋಟಿ ರೂ. ಆಗಿರುವ ಕಾರಣ ಒಂದಿಂಚು ಬಿಡದಂತೆ ಹಿಂಪಡೆಯಬೇಕೆಂದು ಮನವಿ ಮಾಡಲಾಗಿದೆ.
ಏನಿದು ಯೋಜನೆ: ಬೆಂಗಳೂರು ಸುತ್ತಮುತ್ತ ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ಪೆರಿಪೆರಲ್ ರಸ್ತೆ ನಿರ್ಮಾಣ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಒಪ್ಪಂದದ ಪ್ರಕಾರ ತುಮಕೂರು-ಎಲೆಕ್ಟ್ರಾನಿಕ್ ಸಿಟಿ ನಡುವೆ 41 ಕಿ.ಮೀ ರಸ್ತೆ ನಿರ್ಮಾಣ ಮಾಡಬೇಕಿತ್ತು. ಕೈಗಾರಿಕೆ, ವಾಣಿಜ್ಯ, ವಸತಿ, ವಿದ್ಯುತ್ ಸ್ಥಾವರ, ಕೈಗಾರಿಕಾ ಸ್ಥಾವರಗಳು, ನೀರು ಸಂಸ್ಕರಣಾ ಘಟಕಗಳು ಸೇರಿದಂತೆ ಮೂಲ ಸೌಕರ್ಯ ಅಭಿವೃದ್ಧಿ ಒಳಗೊಂಡಂತೆ ವೇಗರಸ್ತೆಗಳು ನಿರ್ಮಿಸಲು ಸರ್ಕಾರದ ನಡುವೆ ಒಪ್ಪಂದವಾಗಿತ್ತು.
ಇದೆಲ್ಲವನ್ನು ಉಲ್ಲಂಘಿಸಿದ ನೈಸ್ ಸಂಸ್ಥೆ ಕ್ರಿಯಾ ಒಪ್ಪಂದವನ್ನೇ ಗಾಳಿಗೆ ತೂರಿರುವುದು ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವಲ್ಲಿ ವಿಫಲವಾಗಿದೆ ಎಂಬುದನ್ನು ದೃಢೀಪಡಿಸಿದೆ.
ನೈಸ್ ಸಂಸ್ಥೆ ಕಾನೂನು ಬಾಹಿರವಾಗಿ ಭೂ ಕಬಳಿಕೆ ಮಾಡಿರುವ ವಿಷಯ ವಿಧಾನಮಂಡಲದ ಉಭಯ ಸದನಗಳಲ್ಲಿ ಭಾರೀ ಸದ್ದು ಮಾಡಿತ್ತು. ಬಹುತೇಕ ಎಲ್ಲ ಪಕ್ಷಗಳ ಸದಸ್ಯರ ಇದರ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅಂದಿನ ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪನವರಿಗೆ ಮನವಿ ಮಾಡಿದ್ದರು.
ಸದಸ್ಯರ ಕೋರಿಕೆಯಂತೆ ವಿಧಾನಸಭೆಯಲ್ಲಿ ಚರ್ಚಿಸಿ 23-7-2014ರಂದು 11 ಸದಸ್ಯರುಳ್ಳ ಸದನ ಸಮಿತಿಯನ್ನು ರಚನೆ ಮಾಡಲಾಗಿತ್ತು.
ಸದ್ಯದಲ್ಲೇ ವರದಿ: ಸರಿ ಸುಮಾರು ಎರಡು ವರ್ಷ ತನಿಖೆ ನಡೆಸಿರುವ ಸಮಿತಿಯು ಹಲವಾರು ಅಧಿಕಾರಿಗಳು, ರೈತರು ಹಾಗೂ ಸಾರ್ವಜನಿಕರಿಂದ ಮಾಹಿತಿ ಪಡೆದು ಸಮಗ್ರ ವರದಿಯನ್ನು ಸಿದ್ದಪಡಿಸಿದೆ. ಇನ್ನೆರಡು ವಾರದಲ್ಲಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರಿಗೆ ವರದಿ ಸಲ್ಲಿಕೆಯಾಗಲಿದೆ.
ಸಮಿತಿಯ ಸದಸ್ಯರು
ಟಿ.ಬಿ.ಜಯಚಂದ್ರ – ಅಧ್ಯಕ್ಷರು
ಪ್ರಿಯಾಂಕ ಎಂ.ಖರ್ಗೆ – ಸದಸ್ಯರು
ಜೆ.ಆರ್. ಲೋಬೋ – ಸದಸ್ಯರು
ಬಸವರಾಜ ರಾಯರೆಡ್ಡಿ -ಸದಸ್ಯರು
ಡಾ.ರಫೀಕ್ ಅಹಮದ್.ಎಸ್ -ಸದಸ್ಯರು
ಎಸ್.ಟಿ. ಸೋಮಶೇಖರ್ -ಸದಸ್ಯರು
ಎಸ್.ಆರ್. ವಿಶ್ವನಾಥ್ -ಸದಸ್ಯರು
ಸತೀಶ್ ರೆಡ್ಡಿ. ಎಂ -ಸದಸ್ಯರು
ಕೆ.ಎಂ. ಶಿವಲಿಂಗೇಗೌಡ-ಸದಸ್ಯರು
ಪಿ.ಆರ್. ಸುಧಾಕರ್ ಲಾಲ್ -ಸದಸ್ಯರು
ಬಿ.ಆರ್. ಪಾಟೀಲ್ -ಸದಸ್ಯರು
Discussion about this post