Read - 2 minutes
ನವದೆಹಲಿ, ಸೆ.19: ಪಾಕಿಸ್ತಾನದ ಭಯೋತ್ಪಾದನ ಕೃತ್ಯಗಳಿಗೆ ಹೆಡೆಮುರಿ ಕಟ್ಟಲು ಭಾರತ ರಣತಂತ್ರ ರೂಪಿಸಿದೆ.
ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಭಯೋತ್ಪಾದನ ಕುಕೃತ್ಯಗಳಿಗೆ ಬ್ರೇಕ್ ನೀಡಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ.
ಮೂಲಗಳ ಪ್ರಕಾರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಡಗಿರುವ ಉಗ್ರರ ದಮನಗೊಳಿಸಲು ದಾಳಿ ನಡೆಸಲು ಭಾರತ ಸಜ್ಜುಗೊಳ್ಳಲಿದೆ.
ಈ ಮಧ್ಯೆ ಪಾಕಿಸ್ತಾನದ ಜೊತೆ ಆರ್ಥಿಕ ವ್ಯವಹಾರ ಸೇರಿದಂತೆ ಎಲ್ಲಾ ಸಂಬಂಧವನ್ನು ಕಡಿತಗೊಳಿಸುವ ಬಗ್ಗೆ ಚಿಂತನೆ ನಡೆದಿದೆ
ಎನ್ನಲಾಗಿದೆ. ಈ ಮಧ್ಯೆ ಪ್ರತ್ಯುತ್ತರ ನೀಡಲು ಸೇನೆ ಸದಾ ಸಿದ್ಧರಾಗುವಂತೆ ಪ್ರಧಾನಿ ಮೋದಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ವಿಶ್ವದಲ್ಲೇ ಪಾಕಿಸ್ತಾನದ ಭಯೋತ್ಪಾದನಾ ವಿರುದ್ಧ ಹೋರಾಡಲು ಸಹಕರಿಸಬೇಕೆಂದು ಭಾರತ ಮನವಿ ಮಾಡಲಿದೆ. ಪಠಾಣ್ ಕೋಟ್ ದಾಳಿ, ಪದೇ ಪದೇ ಗಡಿ ಉಲ್ಲಂಘನೆ, ನಿನ್ನೆ ಉರಿ ಮೇಲಿನ ದಾಳಿ ಸಪಾಕಿಸ್ತಾನದ ಉಗ್ರರದ್ದೇ ಕೈವಾಡ ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯಗಳಿದ್ದು, ಇದೀಗ ಪಾಕಿಸ್ತಾನ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ಭಾರತ ಬಂದಿದೆ.
ಪಾಕ್ ಗೆ ಸ್ಪಷ್ಟ ಸಂದೇಶ; ಕೇಂದ್ರಕ್ಕೆ ಮನವಿ
ಕಾಶ್ಮೀರದ ಉರಿ ವಲಯದಲ್ಲಿ ಪಾಕ್ ಭಯೋತ್ಪಾದಕರು ನಡೆಸಿದ ಯೋಧರ ಹತ್ಯಾಕಾಂಡ ಸಹನೆಯ ಕಟ್ಟೆ ಒಡೆಯುವಂತೆ ಮಾಡಿದೆ. ಭಾರತದ ಯೋಧರ ಮೇಲೆ ಪಾಕಿಸ್ತಾನಿ ಬೆಂಬಲಿತ ಉಗ್ರಗಾಮಿಗಳು ಪದೇ ಪದೇ ದಾಳಿ ನಡೆಸುತ್ತಿರುವುದರಿಂದ ಕೆರಳಿರುವ ಸೇನಾಪಡೆ ಗಡಿಯಾಚೆಗೆ ದಾಳಿ ನಡೆಸಿ ಭಯೋತ್ಪಾದಕರ ತರಬೇತಿ ಶಿಬಿರಗಳನ್ನು ಪುಡಿಗಟ್ಟಲು ಅವಕಾಶ ನೀಡುವ ಮೂಲಕ ಪಾಕ್ಗೆ ಸ್ಪಷ್ಟ ಎಚ್ಚರಿಕೆ ಸಂದೇಶ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಕೋರಿದೆ.
ಪರಿಣಾಮಕಾರಿ ದಿಟ್ಟ ಪ್ರತ್ಯುತ್ತರ ನೀಡಿದೇ ಪಾಕಿಸ್ತಾನ ಮತ್ತು ಭಯೋತ್ಪಾದಕರ ದಾಳಿಗಳನ್ನು ಎಷ್ಟು ದಿನ ಹೀಗೆ ಸಹಿಸಿಕೊಳ್ಳಲು ಸಾಧ್ಯ ಎಂದು ಸೇನಾಪಡೆ ಉನ್ನತಾಧಿಕಾರಿಗಳು ಪ್ರಶ್ನಿಸಿದ್ದಾರೆ. ಗಡೆಯಾಚೆ ಸೇನಾ ಕಾರ್ಯಾಚರಣೆ ನಡೆಸಲು ಅವಕಾಶ ನೀಡಿದರೆ ಉಗ್ರರ ಹುಟ್ಟಡಗಿಸುವುದಾಗಿ ಅವರು ಹೇಳಿದ್ದಾರೆ.
ನಾವು ತಕ್ಕ ಪಾಠ ಕಲಿಸದೇ ಇರುವ ಕಾರಣ ಪಾಕಿಸ್ತಾನಿ ಸೇನೆ, ಐಎಸ್ಐ ಮತ್ತು ಭಯೋತ್ಪಾದಕರು ನಮ್ಮ ಮೇಲೆ ನಿರಂತರ ಆಕ್ರಮಣ ಮಾಡುತ್ತಿದ್ದಾರೆ. ಇನ್ನು ಸಹಿಸಲು ಸಾಧ್ಯವಿಲ್ಲ. ಪಾಕ್ಗೆ ಸ್ಪಷ್ಟ ಎಚ್ಚರಿಕೆ ಸಂದೇಶ ನೀಡಲು ಗಡಿಯಾಚೆ ಇರುವ ಭಯೋತ್ಪಾದಕರ ಶಿಬಿರಗಳನ್ನು ಧ್ವಂಸ ಮಾಡಲು ನಮಗೆ ಅನುಮತಿ ಕೊಡಿ ಎಂದು ಸೇನಾಧಿಕಾರಿಗಳು ಕೇಂದ್ರ ಸಕರ್ಾರವನ್ನು ಕೋರಿದ್ದಾರೆ.
26/11 ರಿಂದ ಪಠಾಣ್ ಕೋಟ್ವರೆಗೆ ಹಾಗೂ ಅಲ್ಲಿಂದ ನಿನ್ನೆ ನಡೆದ ಉರಿ ದಾಳಿಯವರೆಗಿನ ಘಟನೆಗಳನ್ನು ಉಲ್ಲೇಖಿಸಿ, ತಮ್ಮ ಮನವಿಯನ್ನು ಪರಿಗಣಿಸುವಂತೆ ಒತ್ತಡ ಹೇರುತ್ತಿದ್ದಾರೆ.
778 ಕಿ.ಮೀ. ಉದ್ದದ ಗಡಿ ನಿಯಂತ್ರಣ ರೇಖೆಯ ಅತ್ಯಂತ ಸೂಕ್ಷ ಪ್ರದೇಶಗಳಲ್ಲಿ ಸೇನಾ ಒತ್ತಡವನ್ನು ಹೆಚ್ಚಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡಲು ಪಾಕಿಸ್ತಾನ ಸೇನೆ ಹವಣಿಸುತ್ತಿದ್ದು, ಇದನ್ನು ಮಟ್ಟ ಹಾಕಬೇಕು ಎಂಬುದು ಸೇನಾಧಿಕಾರಿಗಳ ವಾದವಾಗಿದೆ.
ಆದರೆ ಗಡಿಯಾಚೆಗೆ ದಾಳಿ ನಡೆಸಲು ಭಾರತೀಯ ಸೇನಾಪಡೆಗಳಿಗೆ ಅವಕಾಶ ನೀಡಿದರೆ ಅದು ಪೂರ್ಣಪ್ರಮಾಣದ ಬಿಕ್ಕಟ್ಟಿಗೆ ಎಡೆ ಮಾಡಿಕೊಡುತ್ತದೆ ಎಂಬ ಆತಂಕವಿದೆ. ಈ ಹಿನ್ನೆಲೆಯಲ್ಲಿ ಈ ನಿಧರ್ಾರವನ್ನು ಪರಿಗಣಿಸಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ.
ಪಾಕ್ ಮೇಲೆ ಸಮರಕ್ಕೆ ಹೆಚ್ಚಿದ ಒತ್ತಡ :
ಕಾಶ್ಮೀರದ ಉರಿ ವಲಯದಲ್ಲಿ ನಡೆದ ಉಗ್ರರ ದುಷ್ಕೃತ್ಯಕ್ಕೆ ದೇಶದೆಲ್ಲೆಡೆ ಆಕ್ರೋಶ ಭುಗಿಲೆದ್ದಿದೆ. ಪಾಕಿಸ್ತಾನದ ಮೇಲೆ ಯುದ್ಧ ಮಾಡಬೇಕೆಂಬ ಒತ್ತಡ ಕೇಂದ್ರ ಸರ್ಕಾರದ ಮೇಲೆ ಹೆಚ್ಚಿದೆ. ಇದಕ್ಕೆ ಪೂರಕ ಎಂಬಂತೆ ಪಾಕ್ ನೆಲದಿಂದ ಆಗುತ್ತಿರುವ ಭಯೋತ್ಪಾದನೆಯನ್ನು ನಿಗ್ರಹಿಸುವ ಸಲುವಾಗಿ ಮಿಲಿಟರಿ ಕಾರ್ಯಾಚರಣೆ ನಡೆಸುವ ಆಯ್ಕೆ ಸೇರಿದಂತೆ ಅದರ ಮೇಲೆ ತುರ್ತಾಗಿ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಎಂದು ಮಾಜಿ ಸೇನಾಧಿಕಾರಿಗಳೂ ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಉಗ್ರರ ದಾಳಿ: ತಳ್ಳಿ ಹಾಕಿದ ಪಾಕ್
ಇಸ್ಲಮಾಬಾದ್: ಜಮ್ಮು-ಕಾಶ್ಮೀರದ ಉರಿ ವಲಯದಲ್ಲಿ ನಡೆದ ಉಗ್ರರ ದಾಳಿಯ ಹಿಂದೆ ಪಾಕ್ ಕೈವಾಡವಿರುವ ಬಗ್ಗೆ ಭಾರತದ ಆರೋಪವನ್ನು ಪಾಕ್ ತಳ್ಳಿಹಾಕಿದೆ.
ಈ ಮೂಲಕ ಮತ್ತೊಮ್ಮೆ ಪಾಕ್ ಬಣ್ಣ ಬದಲಾಯಿಸಿದೆ. ಪ್ರತಿ ಬಾರಿ ಭಾರತದ ಮೇಲಿನ ದಾಳಿಯ ಹಿಂದೆ ಪಾಕ್ ಕೈವಾಡವಿರುವ ಬಗ್ಗೆ ಸಾಕ್ಷ್ಯಗಳು ದೊರೆತರೂ ಆರೋಪ ತಳ್ಳಿಹಾಕುವಂತೆ ಈ ಬಾರಿಯೂ ಪಾಕ್ ತನ್ನ ಹಳೇ ಚಾಳಿಯನ್ನೇ ಮುಂದುವರಿಸಿದೆ.
ಪಾಕ್ ನ ವಿದೇಶಾಂಗ ಕಾರ್ಯಾಲಯದ ವಕ್ತಾರ ನಫೀಸ್ ಜಾಕರಿಯಾ ಮಾಧ್ಯಮಗಳ ಮುಂದೆ ಜಮ್ಮು-ಕಾಶ್ಮೀರದ ಉಗ್ರರ ದಾಳಿ ಹಿಂದೆ ಪಾಕಿಸ್ತಾನದ ಕೈವಾಡವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಭಾರತದಲ್ಲಿ ಯಾವುದೇ ದಾಳಿ ನಡೆದರೂ ಪಾಕ್ ಮೇಲೆ ಆರೋಪ ಬರುವುದು ಸಹಜ, ಆದರೆ ಭಾರತ ಸಾಕ್ಷ್ಯಗಳನ್ನು ಈವರೆಗೂ ಒದಗಿಸದೇ ಸುಮ್ಮನೆ ಬಾಯಿ ಮಾತಿನ ಆರೋಪ ಮಾಡುತ್ತಿದೆ ಎಂದು ಹೇಳಿದ್ದಾರೆ.
Discussion about this post