ನವದೆಹಲಿ, ಅ.13: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿರುವ ಸರ್ಜಿಕಲ್ ಸ್ಟ್ರೈಕ್ ಸತ್ಯಕ್ಕೆ ದೂರವಾದದ್ದು, ಸೀಮಿತ ದಾಳಿ ನಡೆಸಿರುವುದು ನಿಜವಾಗಿದ್ದರೆ, ಪಾಕಿಸ್ಥಾನ ಕೂಡಲೇ ಭಾರತಕ್ಕೆ ದಿಟ್ಟ ಪ್ರತ್ಯುತ್ತರ ನೀಡುತ್ತಿತ್ತು ಎಂದುಭಾರತದಲ್ಲಿರುವ ಪಾಕಿಸ್ಥಾನ ಹೈಕಮಿಷನರ್ ಅಬ್ದುಲ್ ಬಸಿತ್ ಹೇಳಿದ್ದಾರೆ.
ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿದ ಬಸಿತ್, ಭಾರತೀಯ ಸೇನೆ ಸುಳ್ಳು ಹೇಳುತ್ತಿದೆ. ಪಿಓಕೆಯಲ್ಲಿ ಯಾವುದೇ ರೀತಿಯ ದಾಳಿ ನಡೆದಿಲ್ಲ. ಭಾರತೀಯ ಸೈನಿಕರು ಕೇವಲ ಗಡಿ ನಿಯಂತ್ರ ರೇಖೆ ದಾಟಿದ್ದಾರೆಯೇ ಹೊರತು ಎಲ್ಓಸಿ ಗಡಿ ದಾಟಿಲ್ಲ. ಭಾರತ ಸುಳ್ಳಿನ ಕತೆಕಟ್ಟಿ ವಿಶ್ವದ ಕಣ್ಣಿಗೆ ಮಣ್ಣೆರಚಲು ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೀಮಿತ ದಾಳಿ ಕುರಿತು ವಿಡಿಯೋಗಳ ಸಾಕ್ಷಿಯೂ ಇದೆ ಎಂದು ಭಾರತ ಸುಳ್ಳುಹೇಳುತ್ತಿದ್ದು, ಸೆ.29 ರಂದು ಯಾವುದೇ ರೀತಿಯ ಸೀಮಿತ ದಾಳಿ ನಡೆದಿಲ್ಲ. ಭಾರತೀಯ ಸೇನೆಯಿಂದ ಗಡಿ ನುಸುಳಿವಿಕೆಯಷ್ಟೇ ನಡೆದಿದೆ. ಪರಿಣಾಮ ಪಾಕಿಸ್ಥಾನ ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ. ಒಂದು ವೇಳೆ ಸೀಮಿತ ದಾಳಿ ನಡೆದಿದ್ದೇ ಆಗಿದ್ದರೆ, ಪಾಕಿಸ್ಥಾನ ಕೂಡಲೇ ಭಾರತಕ್ಕೆ ದಿಟ್ಟ ಉತ್ತರ ನೀಡುತ್ತಿತ್ತು. ಭಾರತದ ಸೀಮಿತ ದಾಳಿ ಹೇಳಿಕೆಯನ್ನು ಪಾಕ್ ಪ್ರಧಾನಿ ತಳ್ಳಿಹಾಕಿದ್ದಾರೆ ಎಂದು ತಿಳಿಸಿದರು.
ಭಾರತ ಎಲ್ಲಾ ರೀತಿಯಲ್ಲಿಯೂ ನಮ್ಮ ಸಹಕಾರದ ಬಾಗಿಲನ್ನು ಮುಚ್ಚಿಸುತ್ತಿದೆ. ಉರಿ ದಾಳಿಯ ನಂತರ ಭಾರತ ಪಾಕಿಸ್ಥಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಬಿಂಬಿಸುವ ಮೂಲಕ ಸಹಕಾರದ ಎಲ್ಲಾ ದಾರಿಗಳನ್ನು ತಾನಾಗಿಯೇ ಮುಚ್ಚಿಕೊಂಡಿದೆ. ಉರಿ ದಾಳಿ ಬಳಿಕ ಸಾರ್ಕ್ ಶೃಂಗಸಭೆಯಲ್ಲಿ ಭಾಗವಹಿಸುವುದಕ್ಕೆ ಭಾರತ ನರ್ಕಾರ ಸೂಚಿಸಿತ್ತು. ಇದರ ಪರಿಣಾಮ ಬಾಂಗ್ಲಾದೇಶ, ಭೂತಾನ್ ಹಾಗೂ ಅಫ್ಘಾನಿಸ್ತಾನ ಕೂಡ ಶೃಂಗಸಭೆಯಲ್ಲಿ ಭಾಗವಹಿಸುವುದನ್ನು ರದ್ದು ಪಡಿಸಿತು. ಇದರಿಂದ ಎಲ್ಲಾ ದೇಶಗಳಿಗೂ ನಷ್ಟ ಹಾಗೂ ಹಿನ್ನಡೆಯುಂಟಾಗಿದೆ ಎಂದರು.
ಅಲ್ಲದೇ ಮುಂದಿನ ವರ್ಷ ಪಾಕಿಸ್ಥಾನ ಮತ್ತೆ ಶೃಂಗಸಭೆಯನ್ನು ನಡೆಸಲಿದೆ ಎಂಬ ವಿಶ್ವಾಸ ನಮಗಿದೆ. ಮುಂದಿನ ವರ್ಷ ಸಾಧ್ಯವಾಗದಿದ್ದರೆ, ಮತ್ತೆ ಮುಂದಿನ ವರ್ಷ ಪ್ರಯತ್ನ ಪಡುತ್ತೇವೆಂದು ಹೇಳಿದ್ದಾರೆ.
Discussion about this post