ಬೆಂಗಳೂರು, ಆ.31: ನಗರದಲ್ಲಿನ ಪಿಜಿಗಳಲ್ಲಿ ನಡೆಯುವ ಅಕ್ರಮ ಚುಟುವಟಿಕೆಗೆ ಕಡಿವಾಣ ಹಾಕಲು ಕಡ್ಡಾಯವಾಗಿ ಎಲ್ಲ ಪಿಜಿಗಳಲ್ಲೂ ಸಿಸಿ ಟಿವಿ ಅಳವಡಿಕೆ ಮತ್ತು ಸೆಕ್ಯೂರಿಟಿ ಗಾರ್ಡ್ ನೇಮಿಸಬೇಕು ಎಂದು ಮಹಿಳೆ ಮಕ್ಕಳಿನ ಮೇಲಿನ ಶೋಷಣೆ, ದೌರ್ಜನ್ಯ ಅತ್ಯಾಚಾರ ನಿಯಂತ್ರಿಸುವ ವರದಿ ನೀಡಲು ರಚಿತವಾದ ತಜ್ಞರ ಸಮಿತಿಯ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಪಿಜಿಯಲ್ಲೂ ಸಿಸಿಟಿವಿ ಸೆಕ್ಯೂರಿಟಿ ಗಾರ್ಡ್ ವ್ಯವಸ್ಥೆಯೊಂದಿಗೆ ಕಡ್ಡಾಯವಾಗಿ ರಿಜಿಸ್ಟ್ರೇಷನ್ ಮಾಡಿಸಿರಬೇಕು, ಪಿಜಿಯಲ್ಲಿ ತಂಗುವವರ ಗುರುತಿನ ಚೀಟಿಯೊಂದಿಗೆ ದಾಖಲಾತಿ ಮಾಡಿಕೊಳ್ಳಬೇಕು ಆಗ ಮಾತ್ರ ಪಿಜಿಗಳಲ್ಲಿ ಎದುರಾಗುತ್ತಿರುವ ಸಮಸ್ಯೆ ನಿವಾರಣೆ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಇತ್ತೀಚೆಗೆ ಪರಪ್ಪನ ಅಗ್ರಹಾರ ಬಳಿಯ ಪಿಜಿಯೊಂದರಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಆದರೆ ಈ ಪಿಜಿಗೆ ಯೋಜನಾ ಮಂಜೂರಾತಿ, ವಾಣಿಜ್ಯ ಬಳಕೆ ಮಂಜೂರಾತಿ ನೀಡಲಾಗಿದೆಯೇ ಎಂಬ ತಪಾಸಣೆ ನಡೆಯಬೇಕಿದ್ದು, ನಗರದ ಆಗ್ನೇಯ ವಿಭಾಗದಲ್ಲಿ 7ರಿಂದ 8 ಸಾವಿರ ಪಿಜಿಗಳು ತಲೆಎತ್ತಿವೆ. ಇದರಲ್ಲಿ ಶೇ.60ರಷ್ಟು ಪುರುಷರು ಶೇ.40ರಷ್ಟು ಮಹಿಳೆಯರು ಇದ್ದಾರೆ.
ಸಾಲು ಸಾಲು ಪಿಜಿಗಳು ಇದ್ದರೂ ಅನುಮತಿ ಪಡೆದಿಲ್ಲ. ನೋಂದಣಿ ಮಾಡಿಸಿಲ್ಲ. ಭದ್ರತೆಯನ್ನು ಒದಗಿಸಿಲ್ಲ ಎಂದು ಹೇಳಿದರು.
ಎಲೆಕ್ಟ್ರಾನಿಕ್ ಸಿಟಿ ಬಳಿಯ ವೆಂಕಟ ನವೀನ್ ಎಂಬುವರಿಗೆ ಸೇರಿದ ಪಿಜಿಯಲ್ಲಿ ಇದೇ 16ರಂದು ತಮಿಳುನಾಡಿನಿಂದ ಬೆಂಗಳೂರಿಗೆ ಬಂದಿದ್ದ 20 ವರ್ಷದ ಯುವತಿ ತಂಗಿದ್ದರು. ಆಕೆಯ ಮೇಲೆ ನಡೆದಿರುವ ಅತ್ಯಾಚಾರ ಕುರಿತಂತೆ 27ರಂದು ದೂರು ದಾಖಲಾಗಿಸಲಾಗಿತ್ತು.
ಇದರ ವಿಚಾರಣೆಗೆ ಮೂರು ಇನ್ಸ್ಪೆಕ್ಟರ್ಗಳ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಈ ಸಂಬಂಧ ಮೂವರನ್ನು ವಶಕ್ಕೆ ಪಡೆದಿದ್ದು , ಓರ್ವನನ್ನು ಬಂಧಿಸಲಾಗಿದೆ.
ಪಿಜಿಗಳಲ್ಲಿ ಮೂಲ ಸೌಲಭ್ಯ ಅಳವಡಿಸುವ ಕುರಿತಂತೆ ಶೀಘ್ರ ವರದಿ ಸಲ್ಲಿಸಲಾಗುವುದು, ಮುಖ್ಯಮಂತ್ರಿಯವರಿಗೂ ಪತ್ರ ಬರೆಯಲಾಗುವುದು ಎಂದು ಮಾಹಿತಿ ನೀಡಿದರು.
Discussion about this post