ನವದೆಹಲಿ, ಅ.6: ಭಾರತೀಯ ಯೋಧರು ಪಿಒಕೆ ಗಡಿಯಲ್ಲಿ ನುಗ್ಗಿ ಉಗ್ರರನ್ನು ಬೇಟೆಯಾಡಿದ ಹಿನ್ನೆಲೆಯಲ್ಲಿ ಸೇಡು ತೀರಿಸಿಕೊಳ್ಳಲು ಮುಂದಾಗಿರುವ ಪಾಕ್ ಪ್ರಾಯೋಜಿತ ಉಗ್ರರು ಪ್ಯಾರಾಚೂಟ್ ಮೂಲಕ ಭಾರತ ಪ್ರವೇಶಿಸಿ, ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದ್ದು, ಗುಪ್ತಚರ ಇಲಾಖೆ ಭಾರತೀಯ ಸೇನೆ ಹಾಗೂ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಸೀಮಿತ ದಾಳಿ ನಂತರ ಪಾಕ್ ಗಡಿಯಲ್ಲಿಯೇ ಹದ್ದುಗಳಂತೆ ಕಾದು ಕುಳಿತಿರುವ ಉಗ್ರರು, ಭಾರತದ ಗಡಿ ಪ್ರವೇಶಿಸಲು ಸತತವಾಗಿ ಯತ್ನ ನಡೆಸುತ್ತಿದ್ದಾರೆ. ಅಲ್ಲದೆ, ಪ್ಯಾರಾಚೂಟ್ ಮೂಲಕ ಗಡಿ ಪ್ರವೇಶಿಸಲು ಯೋಜನೆ ರೂಪಿಸಿದ್ದು, ಭಾರತದಲ್ಲಿ ಆತ್ಮಹತ್ಯಾ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಈ ಕುರಿತಂತೆ ಗುಜರಾತ್ ಭದ್ರತಾ ಇಲಾಖಾ ಅಧಿಕಾರಿಯೊಬ್ಬರಿಗೆ ಮಾಹಿತಿಗಳು ಲಭಿಸಿದ್ದು, ಪಾಕ್ ಮೂಲಕ ಲಷ್ಕರ್ ಉಗ್ರ ಸಂಘಟನೆ ಈ ಸಂಚನ್ನು ರೂಪಿಸಿದೆ ಎಂದು ಹೇಳಿಕೆ ನೀಡಿದ್ದಾರೆ.
ಗುಪ್ತಚರ ಇಲಾಖೆಯ ಮಾಹಿತಿ ಹಿನ್ನೆಲೆಯಲ್ಲಿ ಆಕಾಶದಲ್ಲಿ ಹಾರಾಟ ನಡೆಸುವ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಡಲು ಸೂಚಿಸಲಾಗಿದೆ. ಅಲ್ಲದೇ, ದೇಶದಲ್ಲಿ ನಡೆಯುವ ಎಲ್ಲ ರೀತಿಯ ಹಾರಾಟಗಳ ಮೇಲೆ ಹದ್ದಿನ ಕಣ್ಣಿಡಲು ಸೂಚಿಸಲಾಗಿದ್ದು, ಹೈಅಲರ್ಟ್ ಘೋಷಿಸಲಾಗಿದೆ.
Discussion about this post