ಉಡುಪಿ:ಸೆ.22: ಕಾಶ್ಮೀರದ ಉರಿಯಲ್ಲಿ ಈಚೆಗೆ ಭಯೋತ್ಪಾದಕರ ದಾಳಿಗೊಳಗಾಗಿ ಹುತಾತ್ಮರಾದ ವೀರಯೋಧರಿಗೆ ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ಬುಧವಾರ ನುಡಿನಮನ ಸಲ್ಲಿಸಲಾಯಿತು. ನಗರದ ಕ್ಲಾಕ್ಟವರ್ ಬಳಿ ಪಕ್ಷ ಪ್ರಮುಖರು ಹುತಾತ್ಮರಾದ 18 ಮಂದಿ ವೀರಯೋಧರಿಗೆ ನುಡಿನಮನ ಸಲ್ಲಿಸಿದರು.
ಮಾಜಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕೆ ತಂದುಕೊಟ್ಟ ಸ್ವಾತಂತ್ರ್ಯವನ್ನು ಉಳಿಸುವವರು ನಮ್ಮ ಸೈನಿಕರು. ಅಂಥ ಸೈನಿಕರಿಗೆ ನುಡಿನಮನ ಸಲ್ಲಿಸುವುದು ನಮ್ಮ ಕರ್ತವ್ಯ. ದೇಶದ ವಿಚಾರ ಬಂದಾಗ ರಾಜಕೀಯ ರಹಿತವಾಗಿ ಹೋರಾಡಬೇಕು. 18 ಮಂದಿ ಯೋಧರ ಸಾವು ಇಡೀ ದೇಶವನ್ನೇ ದಿಗ್ಭ್ರಮೆಗೊಳಿಸಿದೆ. ಅದರ ಪರರಿಣಾಮ ಕೆಲವೇ ದಿನಗಳಲ್ಲಿ ನಾವು ಕಾಣಲಿದ್ದೇವೆ. ಪಾಕಿಸ್ತಾನವನ್ನು ಸೆದೆಬಡಿಯುವ ಕಾರ್ಯ ಮುಂದಿನ ದಿನಗಳಲ್ಲಿ ನಡೆಯಬೇಕಿದೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಉಗ್ರರಿಗೆ ಬಂಬಲ ನೀಡುವ ಮೂಲಕ ಪಾಕಿಸ್ಥಾನ, ಭಾರತದ ವಿರುದ್ಧ ಪರೋಕ್ಷ ಯುದ್ಧ ಮಾಡುತ್ತಿದೆ. ಪಾಕಿಸ್ತಾನದ ಇಂಥ ಹೇಡಿತನವನ್ನು ವಿಶ್ವದ ಇತರ ರಾಷ್ಟ್ರಗಳೂ ಖಂಡಿಸುತ್ತಿವೆ. ಪದೇ ಪದೇ ಕದನವಿರಾಮ ಉಲ್ಲಂಘಿಸುತ್ತಿದೆ. ಪಾಕಿಸ್ತಾನ ಪರೋಕ್ಷ ಯುದ್ಧ ನಿಲ್ಲಿಸಬೇಕು ಎಂದು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಕೂಡಾ ಸೂಚಿಸಿದ್ದಾರೆ. ಆದರೆ, ಪಾಕಿಸ್ತಾನ ತನ್ನ ಹೇಡಿತನವನ್ನು ಮುಂದುವರಿಸುತ್ತಿದೆ. 18 ಮಂದಿ ಯೋದರ ಸಾವಿನಿಂದಾಗಿ ಇಡೀ ದೇಶವೇ ದುಃಖಿಸುವಂತಾಗಿದೆ. ಅದರ ಪರಿಣಾಮವನ್ನು ಪಾಕ್ ಸದ್ಯದಲ್ಲೇ ಎದುರಿಸಲಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಕಾರ್ಯದಶರ್ಿ ಯಶ್ಪಾಲ್ ಸುವರ್ಣ, ಜಿ. ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಯುವಮೋರ್ಚಾ ಅಧ್ಯಕ್ಷ ಶ್ರೀಶ ನಾಯಕ್, ಜಿ. ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಪ್ರಕಾಶ್ ಪೂಜಾರಿ, ಹೇಮಂತ್ ಕುಮಾರ್ ಉದ್ಯಾವರ, ನಯನ ಗಣೇಶ್ ಮೊದಲಾವರಿದ್ದರು
Discussion about this post