ಬೆಂಗಳೂರು, ಅ:19: ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಪರಿಷ್ಕೃತ ವೇತನ, ತುಟ್ಟಿಭತ್ಯೆ, ಮಧ್ಯಾಹ್ನದ ಬಿಸಿಯೂಟವನ್ನು ಮುಂದಿನ ತಿಂಗಳಿನಿಂದ ಜಾರಿಗೊಳಿಸಲಾಗುವುದು ಎಂದು ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್ ಭರವಸೆ ನೀಡಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಸಂಘದಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಪರಿಷ್ಕರಿಸಿದ ಕನಿಷ್ಠ ವೇತನ, ತುಟ್ಟಿ ಭತ್ಯೆ, ಸಂಕಷ್ಟ ಭತ್ಯೆಯನ್ನು ಮುಂದಿನ ತಿಂಗಳಿನಿಂದ ನೀಡಲಾಗುವುದು ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆಯೂ ಜಾರಿಗೆ ಬರಲಿದೆ ಎಂದರು.
ಆಗಸ್ಟ್ ತಿಂಗಳಿನಲ್ಲಿ ಪರಿಷ್ಕರಣೆಗೊಂಡಿರುವ ವೇತನ ಇಲ್ಲಿಯವರೆಗೂ ನೀಡಿಲ್ಲ. ತುಟ್ಟಿಭತ್ಯೆ, ಸಂಕಷ್ಟಭತ್ಯೆಯನ್ನೂ ನೀಡಿಲ್ಲ ಎಂದು ಕಾರ್ಮಿಕರು ಆರೋಪಿಸಿದರು.
ಪೊರಕೆ, ಗ್ಲೌಸ್, ಹಾಗೂ ಕೆಲಸಕ್ಕೆ ಬೇಕಾದ ಸಾಮಗ್ರಿಗಳು ನೀಡುವಂತೆ ಒತ್ತಾಯಿಸಿದರು. ಗುತ್ತಿಗೆ ರದ್ದುಪಡಿಸಬೇಕು, ಪರಿಷ್ಕರಿಸಿದ 15 ಸಾವಿರ ರೂ. ವೇತನವನ್ನು ನೀಡಬೇಕು. ಪ್ರತಿತಿಂಗಳು 10ರಂದು ಸಂಬಳ ನೀಡಬೇಕು ಎಂಬುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಪೌರಕಾರ್ಮಿಕರು ಆಯುಕ್ತರಲ್ಲಿ ಮನವಿ ಮಾಡಿದರು. ಸಮಸ್ಯೆಗಳನ್ನು ಆಲಿಸಿದ ಆಯುಕ್ತರು ಶೀಘ್ರದಲ್ಲೇ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು.
Discussion about this post