ಪಣಜಿ:ಅ:16:ಭಯೋತ್ಪಾದನೆ ಜಾಗತಿಕ ಮತ್ತದ ಸಮಸ್ಯೆಯಾಗಿದ್ದು, ಬಿಕ್ಸ್ ಸಮೂಹ ರಾಷ್ಟ್ರಗಳು ಭಯೋತ್ಪಾದನೆಯ ವಿರುದ್ಧ ಧ್ವನಿ ಎತ್ತಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಗೋವಾದ ರಾಜಧಾನಿ ಪಣಜಿಯಲ್ಲಿ ನಡೆಯುತ್ತಿರುವ ಎರಡು ದಿನಗಳ ಬ್ರಿಕ್ಸ್ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬ್ರಿಕ್ಸ್ ರಾಷ್ಟ್ರದ ನಾಯಕರುಗಳಾದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್, ದಕ್ಷಿಣ ಆಫ್ರಿಕಾ ಅಧ್ಯಕ್ಷ ಜೇಕಬ್ ಜುಮಾ, ಬ್ರೆಜಿಲ್ ಅಧ್ಯಕ್ಷ ಮಿಷೆಲ್ ಟೆಮೆರ್ ಅವರನ್ನು ಸ್ವಾಗತಿಸಿದರು. ಭಯೋತ್ಪಾದನೆಯು ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಗೆ ತೊಡಕಾಗಿದ್ದು, ಬ್ರಿಕ್ಸ್ ದೇಶಗಳು ಭಯೋತ್ಪಾದನೆ ವಿರುದ್ಧ ಹೋರಾಡಬೇಕಿದೆ ಎಂದರು.
ದುರಂತವೆಂದರೆ ಭಯೋತ್ಪಾದನೆಯ ಮದರ್ ಶಿಪ್ ಭಾರತದ ನೆರೆ ರಾಷ್ಟ್ರವೇ ಆಗಿದೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಪ್ರಧಾನಿ, ವಿಶ್ವಾದ್ಯಂತದ ಉಗ್ರಗಾಮಿ ಘಟಕಗಳು ಅದರ ಜೊತೆಗೆ ಸಂಪರ್ಕಹೊಂದಿವೆ. ಈ ರಾಷ್ಟ್ರ ಭಯೋತ್ಪಾದನೆಗೆ ಬೆಂಬಲವನ್ನು ನೀಡುತ್ತಿದೆ ಮಾತ್ರವಲ್ಲ, ರಾಜಕೀಯ ಲಾಭಕ್ಕಾಗಿ ಭಯೋತ್ಪಾದನೆ ನ್ಯಾಯೋಚಿತ ಎಂಬ ಮನಃಸ್ಥಿತಿಯನ್ನೂ ಹುಟ್ಟು ಹಾಕಿ ಪೋಶಿಸುತ್ತಿದೆ ಎಂದೂ ಮೋದಿ ಹೇಳಿದ್ದಾರೆ.
ಗಡಿಯಾಚೆಯ ಭಯೋತ್ಪಾದನೆ ವಿಚಾರದಲ್ಲಿ ರಷ್ಯಾದಿಂದ ಪ್ರಬಲ ಬೆಂಬಲ ವ್ಯಕ್ತವಾಗಿದೆ. ಆದರೆ ಗಡಿಯಾಚೆಯ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನೆರವಾಗುವ ಬಗ್ಗೆ ಅಥವಾ ಪಾಕಿಸ್ತಾನದಂತಹ ಉಗ್ರಗಾಮಿಗಳ ಆಡುಂಬೊಲ ವಿರುದ್ಧ ಜಾಗತಿಕ ಅಭಿಪ್ರಾಯ ರೂಪಿಸುವ ಭಾರತದ ಯತ್ನಕ್ಕೆ ಸಹಕರಿಸುವ ಬಗ್ಗೆ ಚೀನಾ ತನ್ನ ಬದ್ಧತೆ ಪ್ರದರ್ಶಿಸಿಲ್ಲ ಎನ್ನಲಾಗಿದೆ.
ಇನ್ನು ಭಯೋತ್ಪಾದನೆ ನಿಗ್ರಹದ ವಿಷಯದಲ್ಲಿ ಭಾರತ ಹಾಗೂ ಚೀನಾ ವಿಭಿನ್ನ ಅಭಿಪ್ರಾಯ ಹೊಂದಿರುವುದು ಸರಿಯಲ್ಲ. ಯಾವ ದೇಶವೂ ಭಯೋತ್ಪಾದನೆಯಿಂದ ಪೂರ್ಣವಾಗಿ ಸುರಕ್ಷಿತವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು, ಚೀನಾ ಅಧ್ಯಕ್ಷ ಕ್ಸಿ ಜಿನ್ ಅವರಿಗೆ ದ್ವಿಪಕ್ಷೀಯ ಮಾತುಕತೆ ವೇಳೆ ಹೇಳಿದ್ದಾರೆ. ಆದರೆ, ಮಸೂದ್ ಅಜರ್ ಸೇರಿದಂತೆ ಪಾಕಿಸ್ತಾನದಲ್ಲಿರುವ ಉಗ್ರರಿಗೆ ವಿಶ್ವಸಂಸ್ಥೆ ಮೂಲಕ ನಿಷೇಧ ಹೇರುವ ಭಾರತದ ಪ್ರಯತ್ನಕ್ಕೆ ಬೆಂಬಲ ನೀಡುವ ಬಗ್ಗೆ ಚೀನಾ ಯಾವುದೇ ಭರವಸೆ ನೀಡಲಿಲ್ಲ. ಮಸೂದ್ ಅಜರ್ ಸೇರಿದಂತೆ ಹಲವು ಭಯೋತ್ಪಾದಕರಿಗೆ ವಿಶ್ವಸಂಸ್ಥೆ ಮೂಲಕ ನಿಷೇಧ ಹೇರುವುದನ್ನು ಚೀನಾ ತಡೆಯುತ್ತಿರುವ ಬಗ್ಗೆ ಸಭೆಯಲ್ಲಿ ಭಾರತ ತನ್ನ ಅಸಮಾಧಾನ ವ್ಯಕ್ತಪಡಿಸಿದೆ.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋಹಲ್ ಮತ್ತು ಚೀನಾದ ಸ್ಟೇಟ್ ಕೌನ್ಸಿಲರ್ (ಅಧ್ಯಕ್ಷರ ಸಲಹೆಗಾರ) ಯಾಂಗ್ ಜೀಇಚಿ ಅವರು ನವದೆಹಲಿಯಲ್ಲಿ ಶೀಘ್ರದಲ್ಲೇ ಸಭೆ ನಡೆಸಬೇಕು ಎಂದು ಭಾರತ -ಚೀನಾ ತೀಮರ್ಾನಿಸಿವೆ. ಗಡಿ ವಿವಾದದ ಬಗ್ಗೆ ಮಾತುಕತೆಗೆ ಎರಡೂ ದೇಶಗಳು ದೋಹಲ್ ಹಾಗೂ ಜೀಇಚಿ ಅವರನ್ನು ವಿಶೇಷ ಪ್ರತಿನಿಧಿಗಳನ್ನಾಗಿ ನೇಮಿಸಿವೆ. ಭಾರತ -ಚೀನಾ ನಡುವಣ ಸಂಬಂಧಕ್ಕೆ ತೊಡಕಾಗಿರುವ ವಿಷಯಗಳ ಬಗ್ಗೆ ಇವರಿಬ್ಬರು ಮಾತುಕತೆ ನಡೆಸುವ ಸಾಧ್ಯತೆ ಇದೆ.
ಆರ್ಥಿಕ ಅಭಿವೃದ್ಧಿಗೆ ಭಯೋತ್ಪಾದನೆ ಮಾರಕವಾಗಿದೆ: ಪ್ರಧಾನಿ
ಪಣಜಿ: ಭಯೋತ್ಪಾದನೆ ಆರ್ಥಿಕ ಅಭಿವೃದ್ದಿಗೆ ಬಹುದೊಡ್ಡ ತೊಡಕಾಗಿದ್ದು, ಸಂಘಟಿತ ಹೋರಾಟದ ಮೂಲಕ ಉಗ್ರವಾದವನ್ನು ನಿಗ್ರಹಿಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಗೋವಾದಲ್ಲಿ 2 ದಿನಗಳಿಂದ ನಡೆಯುತ್ತಿರುವ ಬ್ರಿಕ್ಸ್ ಶೃಂಗ ಸಭೆಯ ಮಹಾಧಿವೇಶನದಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಭಯೋತ್ಪಾದನೆ ಬಗ್ಗೆ ಶೀಘ್ರದಲ್ಲಿಯೇ ಸಮಗ್ರ ಸಮಾವೇಶ ಸಂಘಟಿಸಬೇಕು. ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿಗ್ರಹಿಸುವ ಕುರಿತು ಅಲ್ಲಿ ನಿರ್ಥಿಷ್ಟವಾದ ಅಭಿಪ್ರಾಯ ವ್ಯಕ್ತವಾಗಬೇಕು ಎಂದು ಹೇಳಿದರು.
ಭಯೋತ್ಪಾದಕರಿಗೆ ನೀಡುತ್ತಿರುವ ಹಣಕಾಸು ಬೆಂಬಲ, ಶಸ್ತ್ರಾಸ್ತ್ರ ಸರಬರಾಜು, ತರಬೇತಿ ಮತ್ತು ರಾಜಕೀಯ ಬೆಂಬಲವನ್ನು ವ್ಯವಸ್ಥಿತವಾಗಿ ಕಡಿತಗೊಳಿಸಬೇಕು. ನಮ್ಮ ರಾಷ್ಟ್ರೀಯ ಭದ್ರತಾ ದಳಗಳ (ಎನ್?ಎಸ್?ಎ) ಮಧ್ಯೆ ಪರಸ್ಪರ ಭದ್ರತಾ ಸಹಕಾರ ಇನ್ನಷ್ಟು ಗಾಢವಾಗಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಬ್ರಿಕ್ಸ್ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆ, ರೈಲ್ವೇ ಸಂಶೋಧನಾ ಜಾಲ ಮತ್ತು ಬ್ರಿಕ್ಸ್ ಕ್ರೀಡಾ ಮಂಡಳಿ ಸ್ಥಾಪನೆಯ ಕಾರ್ಯವನ್ನು ನಾವು ತ್ವರಿತಗೊಳಿಸಬೇಕಾಗಿದೆ. ತೆರಿಗೆ ವಂಚನೆ, ಕಪ್ಪು ಹಣ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲೂ ಸ್ಪಷ್ಟ ರೂಪುರೇಷೆ ಹಾಕಿಕೊಳ್ಳಬೇಕಾದ ಅಗತ್ಯವಿದೆ ಎಂದು ಮೋದಿ ತಿಳಿಸಿದ್ದಾರೆ.
Discussion about this post