Read - < 1 minute
ನ್ಯೂಯಾರ್ಕ್, ಸೆ.20: ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್ ಮೇಲೆ ಉಗ್ರರು ನಡೆಸಿದ ದಾಳಿ ನಂತರ ಭಾರತ ಹಾಗೂ ಪಾಕಿಸ್ಥಾನದ ನಡುವಿನ ಬೆಂಕಿ ಮತ್ತಷ್ಟು ಹೆಚ್ಚಾಗಿದೆ. ಇದಕ್ಕೆ ತುಪ್ಪ ಸುರಿದಂತೆ ತಾವು ನಡೆಸುತ್ತಿದ್ದ ಪತ್ರಿಕಾಗೋಷ್ಠಿಯಿಂದ ಭಾರತೀಯ ಪತ್ರಕರ್ತೆಯನ್ನು ಪಾಕ್ ವಿದೇಶಾಂಗ ಕಾರ್ಯದರ್ಶಿ ಎಜಾಜ್ ಅಹ್ಮದ್ ಚೌದರಿ ಹೊರ ಹಾಕಿದ್ದಾರೆ.
ಇಲ್ಲಿನ ರೂಸ್ ವೆಲ್ಟ್ ಹೊಟೇಲ್‌ನಲ್ಲಿ ವಿಶ್ವಸಂಸ್ಥೆಯಿಂದ ನಡೆಯುತ್ತಿದ್ದ ಪತ್ರಿಕಾಗೋಷ್ಠಿಯಿಂದ ಭಾರತೀಯ ಪತ್ರಕರ್ತೆಯನ್ನು ಚೌದರಿ ಹೊರ ದಬ್ಬಿದ್ದಾರೆ. ಮಾತ್ರವಲ್ಲದೇ ತಮ್ಮ ಪತ್ರಿಕಾಗೋಷ್ಠಿಗಳಲ್ಲಿ ಭಾರತದ ಯಾವೊಬ್ಬ ಪತ್ರಕರ್ತನೂ ಪಾಲ್ಗೊಳ್ಳದಂತೆ ನಿರ್ಬಂಧ ಹೇರಿದ್ದಾರೆ.
ಪಾಕ್ ವಿದೇಶಾಂಗ ಕಾರ್ಯದರ್ಶಿ ಚೌದರಿ ಅವರ ಈ ಕ್ರಮಕ್ಕೆ ಇದೀಗ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ಭಾರತೀಯ ಪತ್ರಕರ್ತರು ಚೌದರಿ ನಡೆಯನ್ನು ಕಟು ಶಬ್ದಗಳಿಂದ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭಾರತೀಯ ಪತ್ರಕರ್ತರು ಉರಿ ಉಗ್ರ ದಾಳಿ ಕುರಿತಾದ ಪ್ರಶ್ನೆಗಳನ್ನು ಕೇಳುತ್ತಾರೆ ಎಂಬ ಭೀತಿಯಲ್ಲಿ ಭಾರತೀಯ ಪತ್ರಕರ್ತರನ್ನು ಸುದ್ದಿಗೋಷ್ಠಿಯಿಂದ ಹೊರಗಿಡಲಾಗಿದೆ ಎಂದು ಹೇಳಾಗುತ್ತಿದೆ.
ಉರಿ ದಾಳಿ: ಪ್ರತಿಕ್ರಿಯೆಗೆ ಷರೀಷ್ ನಕಾರ
ಭಾರತೀಯ ಯೋಧರ ಸಾವಿಗೆ ಕಾರಣವಾದ ಉರಿ ಸೆಕ್ಟರ್‌ನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಪಾಕಿಸ್ಥಾನ ಪ್ರಧಾನಿ ನವಾಜ್ ಷರೀಷ್ ನಿರಾಕರಿಸಿದ್ದಾರೆ.
ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿರುವ ಷರೀಫ್, ದ್ವಿಪಕ್ಷೀಯ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಷರೀಫ್‌ರನ್ನು ಪ್ರತಿಕ್ರಿಯೆ ಕೇಳಲಾಯಿತು. ಆದರೆ, ಪತ್ರಕರ್ತರ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡದ ಷರೀಫ್ ತಿರಸ್ಕಾರದಿಂದ ನಡೆದಿದ್ದಾರೆ.
ಈ ವೇಳೆ ನಕಾರ ವ್ಯಕ್ತಪಡಿಸಿದ ಅವರು ಪ್ರಕರಣ ಸಂಬಂಧ ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿ ಹೋಗಿದ್ದಾರೆ.
ವಿಶ್ವಸಂಸ್ಥೆ ಸಾಮಾನ್ಯಸಭೆಯಲ್ಲಿ ಪಾಲ್ಗೊಳ್ಳಲು ನ್ಯೂಯಾರ್ಕ್‌ಗೆ ಆಗಮಿಸಿರುವ ನವಾಜ್ ಷರೀಫ್, ಇಂದು ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ‌್ರಿ ಅವರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ನವಾಜ್ ಷರೀಫ್ ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಲಿದ್ದು, ಬಳಿಕ ನ್ಯೂಜಿಲೆಂಡ್ ಪ್ರಧಾನಿಯನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ.
ಉರಿ ದಾಳಿ ಭಾರತದ ನಾಟಕವಂತೆ
ಉರಿ ಉಗ್ರರ ದಾಳಿ, ಪಠಾಣ್‌ಕೋಟ್‌ನಂತೆ ಭಾರತದ ಮತ್ತೊಂದು ಕಾರ್ಯಾಚರಣೆಯಾಗಿದೆ ಎಂದು ಪಾಕಿಸ್ಥಾನ ಮಾಧ್ಯಮಗಳು ಭಾರತವನ್ನು ದೂಷಿಸಿವೆ.
ಉರಿ ಉಗ್ರರ ದಾಳಿಯಲ್ಲಿ ೧೮ ಭಾರತೀಯ ಯೋಧರು ಸಾವನ್ನಪ್ಪಿದ್ದಾರೆ ಎಂಬುದು ಭಾರತದ ಮತ್ತೊಂದು ನಾಟಕ ಎಂದು ಪಾಕಿಸ್ಥಾನ ಪತ್ರಿಕೆ ತನ್ನ ಅಂತರ‌್ರಾಷ್ಟ್ರೀಯ ಸುದ್ದಿ ಪುಟದಲ್ಲಿ ಪ್ರಕಟಿಸಿದೆ.
ಭಾರತವೇ ತನ್ನ ಯೋಧರ ಮೇಲೆ ದಾಳಿ ನಡೆಸಿ ಪಾಕಿಸ್ಥಾನದ ವಿರುದ್ಧ ಆರೋಪ ನಡೆಸುತ್ತಿದೆ. ಇದು ಕಾಶ್ಮೀರರ ಸಮಸ್ಯೆಯಿಂದ ವಿಶ್ವದ ಗಮನವನ್ನು ಬೇರೆಡೆ ಚದುರಿಸಲು ಭಾರತ ಮಾಡುತ್ತಿರುವ ಡ್ರಾಮಾ ಎಂದು ಹೇಳಿದೆ.
Discussion about this post