Read - < 1 minute
ನವದೆಹಲಿ, ಅ.4: ಭಾರತ ಮತ್ತು ಸಿಂಗಾಪುರ ನಡುವೆ ತಾಂತ್ರಿಕ ಶಿಕ್ಷಣ ಮತ್ತು ಕೌಶಲ್ಯ ವೃದ್ಧಿ, ರಕ್ಷಣೆ ಹಾಗೂ ಭದ್ರತಾ ಸಹಕಾರ ಸೇರಿದಂತೆ ಮೂರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಂಗಾಪುರದ ಪ್ರಧಾನಿ ಲೀ ಸಿಯೆನ್ ಲೋಂಗ್ ನೇತೃತ್ವದಲ್ಲಿ ಉಭಯ ರಾಷ್ಟ್ರಗಳ ನಿಯೋಗ ಮಟ್ಟದ ಮಾತುಕತೆಗಳ ಬಳಿಕ ಉಭಯ ರಾಷ್ಟ್ರಗಳು ಒಪ್ಪಂದಗಳಿಗೆ ಸಹಿಮಾಡಿ ಕಡತಗಳನ್ನು ವಿನಿಮಯ ಮಾಡಿಕೊಂಡವು.
ಈ ವೇಳೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಉತ್ಪಾದನೆ, ಪರಿಸರ, ತಂತ್ರಜ್ಞಾನ ಯಾವುದೇ ಕ್ಷೇತ್ರವಿರಲಿ ಸಿಂಗಾಪುರ ಈದಿನ ಮಾಡಿದ್ದನ್ನು ವಿಶ್ವದ ಇತರ ರಾಷ್ಟ್ರಗಳು ಆನಂತರದಲ್ಲಿ ಅದನ್ನು ಪಾಲಿಸುತ್ತವೆ ಎಂದು ಶ್ಲಾಘಿಸಿದರು.
ರಕ್ಷಣೆ ಮತ್ತು ಭದ್ರತಾ ಸಹಕಾರ ಉಭಯ ರಾಷ್ಟ್ರಗಳ ಆಯಕಟ್ಟಿನ ಪಾಲುದಾರಿಕೆಯಲ್ಲಿ ಮಹತ್ವದ ಸ್ಥಂಭ. ಭಯೋತ್ಪಾದನೆ ಅದರಲ್ಲೂ ಗಡಿಯಾಚೆಯ ಭಯೋತ್ಪಾದನೆ ನಮಗೆ ಸವಾಲಾಗಿದೆ.ನಗರಾಭಿವೃದ್ಧಿ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ರಾಜಸ್ಥಾನವು ಸಿಂಗಾಪುರದ ಜೊತೆಗೆ ಕೆಲಸ ಮಾಡುತ್ತಿದೆ ಎಂದು ಹೇಳಿದರು.12 ತಿಂಗಳಿಗೂ ಕಡಿಮೆ ಅವಧಿಯ ತಮ್ಮ ಸಿಂಗಪುರ ಭೇಟಿ ಕಾಲದಲ್ಲಿ ನಾವು ನಮ್ಮ ಆಯಕಟ್ಟಿನ ಪಾಲುದಾರಿಕೆಯನ್ನು ಹೆಚ್ಚಿಸಿಕೊಂಡಿದ್ದೇವೆ ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಸಿಂಗಾಪುರದ ಪ್ರಧಾನಿ ಲೀ ಸಿಯೆನ್ ಲೋಂಗ್, ಭಾರತದ ಮೇಲೆ ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದನೆಯನ್ನು ಖಂಡಿಸಿದರು.ಅಲ್ಲದೇ ಉರಿ ಸೆಕ್ಟರ್ ನಲ್ಲಿ ಸೇನಾ ಶಿಬಿರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಸಿಂಗಾಪುರ ಭಾರತದೊಂದಿಗೆ ಸ್ನೇಹ ಸಹಕಾರ ಬಯಸಿದ್ದು, ಭಾರತಕ್ಕೆ ಅಗತ್ಯವಾದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಿಂಗಾಪುರ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
Discussion about this post