ಶ್ರೀನಗರ, ಅ.8: ಕಣಿವೆ ರಾಜ್ಯ ಕಾಶ್ಮೀರಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದ್ದು, ಭದ್ರತಾ ಪಡೆಗಳು ಹಾಗೂ ಪ್ರತಿಭಟನಾಕಾರರ ನಡುವೆ ನಡೆದ ಚಕಮಕಿಯಲ್ಲಿ ಗುಂಡೇಟು ಬಿದ್ದಿದ್ದ 13 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಈ ಮೂಲಕ ರಾಜ್ಯದಲ್ಲಿ ಹಿಂಸೆಗೆ ಬಲಿಯಾದವರ ಸಂಖ್ಯೆ 90ಕ್ಕೆ ಏರಿದೆ.
ಇಲ್ಲಿನ ಹಳೇನಗರದ ಸೈದ್‌ಪುರ ಪ್ರದೇಶದಲ್ಲಿ ಕಲ್ಲೆಸೆತದಲ್ಲಿ ತೊಡಗಿದ್ದ ಪ್ರತಿಭಟನಕಾರರನನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗಿಸಿ ಪೆಲ್ಲೆಟ್ ಗನ್‌ಗಳನ್ನು ಬಳಸಿದರು. ಪರಿಣಾಮವಾಗಿ 13 ವರ್ಷ ಪ್ರಾಯದ ಜುನೇದ್ ಅಹ್ಮದ್ ಎಂಬ ಬಾಲಕ ತೀವ್ರವಾಗಿ ಗಾಯಗೊಂಡ. ಆತನನ್ನು ಒಡನೆಯೇ ಶೇರ್ ಎ ಕಶ್ಮೀರ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸಸ್ (ಸ್ಕಿಮ್ಸ್) ಗೆ ಸೇರಿಸಲಾಯಿತು. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಆತ ಅಲ್ಲಿ ಕೊನೆಯುಸಿರೆಳೆದಿದ್ದಾನೆ.
ನಿನ್ನೆ ಶ್ರೀನಗರದ ಖನ್ಯಾರ್, ರೈನಾವಾರಿ, ನೌಹಟ್ಟಾ, ಸಫ್ಕ್‌ದಲ್, ಮಹರಾಜ್ ಗಂಜ್, ಮೈಸುಮಾ ಮತ್ತು ಬಟಾಮಲೂ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ಕರ್ಫ್ಯೂ ಹೇರಲಾಗಿತ್ತು. ನಗರದಲ್ಲಿನ ವಿಶ್ವಸಂಸ್ಥೆ ಕಾರ್ಯಾಲಯಕ್ಕೆ ಮೆರವಣಿಗೆ ನಡೆಸುವಂತೆ ಪ್ರತ್ಯೇಕತಾವಾದಿಗಳು ಕರೆ ನೀಡಿದ್ದರು.
Discussion about this post