Read - < 1 minute
ಬೆಂಗಳೂರು, ಅ.7: ಕಾಡಿನಲ್ಲಿ ನೀರು, ಆಹಾರ ಹಾಗೂ ಅಗತ್ಯ ಮೂಲಭೂತ ಅಗತ್ಯಗಳ ಕೊರತೆ ಉಂಟಾಗುವುದರಿಂದ ವನ್ಯ ಜೀವಿಗಳು ನಾಡಿಗೆ ಲಗ್ಗೆ ಹಾಕುತ್ತಿವೆ. ಸಮಾಜ ಇದನ್ನು ಅರ್ಥ ಮಾಡಿಕೊಂಡು ಪರಿಸರ ಸಮತೋಲನ ಹಾಳು ಮಾಡುವುದನ್ನು ಕೈ ಬಿಡಬೇಕು ಎಂದು ರಾಜ್ಯಪಾಲ ವಜುಬಾಯ್ ವಾಲಾ ಕರೆ ನೀಡಿದರು.
ಅರಣ್ಯ ಇಲಾಖೆ ನಗರದಲ್ಲಿಇಂದು ಹಮ್ಮಿಕೊಂಡಿದ್ದ 62ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಪ್ರಾಣಿ-ಪಕ್ಷಿಗಳಿಗೆ, ಜೀವಸಂಕುಲಕ್ಕೆ ಆಹಾರ, ನೀರು ಕಾಡಿನಲ್ಲೇ ಸಿಗಬೇಕು. ಮನುಷ್ಯ ತನ್ನ ದುರಾಸೆಯಿಂದ ಕಾಡಿನ ಪರಿಸರವನ್ನು ಹಾಳುಗೆಡವಬಾರದು ಎಂದು ಹೇಳಿದರು.
ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದ ನೀರು, ಆಹಾರ ಸಿಕ್ಕರೆ ಪ್ರಾಣಿಗಳು ನಾಡಿಗೆ ಬರುವುದು ತಪ್ಪಲಿದೆ. ವನ್ಯ ಜೀವಿಗಳ ಸಂರಕ್ಷಣೆಗೆ ಎಲ್ಲರೂ ಹೆಚ್ಚಿನ ಒತ್ತುವ ನೀಡುವ ಅಗತ್ಯವಿದೆ. ದೇವರ ಸೃಷ್ಟಿಯ ಮುಂದೆ ಮನುಷ್ಯನ ಸೃಷ್ಟಿ ಏನು ಅಲ್ಲ. ವನ್ಯಜೀವಿ ಸಂಕುಲದ ಪಾಲನ್ನು ಮನುಷ್ಯ ಕಸಿಯುವುದು ಸರಿಯಲ್ಲ ಎಂದರು.
ಇತ್ತೀಚಿನ ದಿನಗಳಲ್ಲಿ ಅರಣ್ಯದ ವಿಸ್ತೀರ್ಣ ಕಡಿಮೆಯಾಗಿದೆ. ಇದು ಆತಂಕಕಾರಿ. ಏಷ್ಯಾದಲ್ಲೇ ಕರ್ನಾಟಕ ಅತೀ ಹೆಚ್ಚು ಆನೆ ಮತ್ತು ಹುಲಿಗಳನ್ನು ಹೊಂದಿರುವ ರಾಜ್ಯ. ಇಲ್ಲಿರುವ ಅಮೂಲ್ಯ ಜೀವ ಸಂಕುಲ ದೇಶದಲ್ಲೇ ಅಪರೂಪ. ಇದು ನಾಡಿನ ಹೆಗ್ಗಳಿಕೆ ಕೂಡ. ಇದನ್ನು ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಲ್ಲಿ ಮತ್ತು ಜನಸಮುದಾಯದಲ್ಲಿ ವನ್ಯ ಜೀವಿಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಬೇಕಿದೆ. ಕಾಡುಗಳಿದ್ದರೆ ಮಾತ್ರ ವನ್ಯಜೀವಿಗಳು ಉಳಿಯಲು ಸಾಧ್ಯ ಆಗ ಮಾತ್ರ ಸಂವೃದ್ಧಿ ಇರಲಿದೆ ಎಂದರು.
ಮಾವುತರು ಮತ್ತು ಕಾವಾಡಿಗರ ಮಕ್ಕಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವುದು ಆಶಾದಾಯಕ ಬೆಳವಣಿಗೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಧಾನ ಮುಖ್ಯಅರಣ್ಯ ಸಂರಕ್ಷಣಾಧಿಕಾರಿ ಬಿ.ಜೆ. ಹೊಸಮಠ ಮಾತಾಡಿ, ದೇಶದಲ್ಲಿ ಒಂದು ಲಕ್ಷ 60 ಸಾವಿರ ಕಿ.ಮೀ.ನಷ್ಟು ಅರಣ್ಯ ಪ್ರದೇಶವಿದ್ದು, ಅದರಲ್ಲಿ ಕರ್ನಾಟಕದಲ್ಲೆ 40 ಸಾವಿರ ಕಿ.ಮೀ.ನಷ್ಠಿದೆ. ಹುಲಿ, ಆನೆಗಳ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದೆ. ವನ್ಯಜೀವಿಗಳಿಗಾಗಿ ರಾಜ್ಯದಲ್ಲಿ ಹೆಚ್ಚು ಪ್ರದೇಶ ಮೀಸಲಿಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್, ಪಾಲಿಕೆ ಸದಸ್ಯೆ ಸುಮಂಗಲಾ, ಅಪರ ಪ್ರಧಾನ ಮುಖ್ಯಅರಣ್ಯ ಸಂರಕ್ಷಣಾಧಿಕಾರಿ ಸಿ. ಜಯರಾಮ್, ಪ್ರಧಾನ ಮುಖ್ಯಅರಣ್ಯ ಸಂರಕ್ಷಣಾಧಿಕಾರಿ ಆರ್.ಎಸ್. ಸುರೇಶ್ ಮತ್ತಿತರರು ಹಾಜರಿದ್ದರು.
Discussion about this post